Site icon Vistara News

JNU Violence: ಜೆಎನ್‌ಯು ವಿವಿಯಲ್ಲಿ ಎಡ- ಬಲ ವಿದ್ಯಾರ್ಥಿಗಳ ಚಕಮಕಿ, ಹಿಂಸಾಚಾರ

jnu violence

ಹೊಸದಿಲ್ಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (Jawaharlal Nehru university- JNU) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡಪಕ್ಷಗಳ ಬೆಂಬಲಿತ ಗುಂಪುಗಳ (ಜೆಎನ್‌ಯುಎಸ್‌ಯು) ಸದಸ್ಯರ ನಡುವೆ ಘರ್ಷಣೆ ಭುಗಿಲೆದ್ದಿದೆ. ಹಿಂಸಾಚಾರ (JNU Violence) ನಡೆದಿದ್ದು, ಇದರ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು.

ಸ್ಕೂಲ್ ಆಫ್ ಲ್ಯಾಂಗ್ವೇಜಸ್‌ನಲ್ಲಿ ಚುನಾವಣಾ ಸಮಿತಿ ಸದಸ್ಯರ ಆಯ್ಕೆಯ ವಿವಾದ ಸೃಷ್ಟಿಯಾದುದರಿಂದ ಉಂಟಾದ ಈ ಪ್ರಕರಣ ಗುರುವಾರ ರಾತ್ರಿ ಹಿಂಸಾಚಾರಕ್ಕೆ ತಿರುಗಿತು. ಇದರಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗಾಯಾಳುಗಳು ಆಸ್ಪತ್ರೆ ಸೇರಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾಗಳಲ್ಲಿ ಈ ಪ್ರಕರಣದ ಹೊಡೆದಾಟದ ಘಟನೆ ಎಂದು ಕೆಲವು ವಿಡಿಯೋಗಳು ಹರಿದಾಡುತ್ತಿವೆ. ಇದರಲ್ಲಿ ವಿದ್ಯಾರ್ಥಿಗಳ ಮೇಲೆ ಕೋಲು ಹಿಡಿದು ಹಲ್ಲೆ ಮಾಡುತ್ತಿರುವ ಒಬ್ಬ ವ್ಯಕ್ತಿಯನ್ನು ಕಾಣಬಹುದು. ಇನ್ನೊಂದು ದೃಶ್ಯದಲ್ಲಿ ಬೇರೊಬ್ಬ ವ್ಯಕ್ತಿ ಬೈಸಿಕಲ್ ಅನ್ನು ಎತ್ತಿ ಎದುರಿನ ಗುಂಪಿನವರ ಮೇಲೆ ಎಸೆಯುತ್ತಿದ್ದಾನೆ. ವಿಶ್ವವಿದ್ಯಾನಿಲಯದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರನ್ನು ಗುಂಪುಗೂಡಿ ಥಳಿಸಲಾಗಿದೆ ಎಂದು ಇನ್ನು ಕೆಲವು ವಿಡಿಯೊಗಳು ಸೂಚಿಸಿವೆ. ವಿಶ್ವವಿದ್ಯಾಲಯದ ಮೂಲಗಳ ಪ್ರಕಾರ ಗಾಯಗೊಂಡ ವಿದ್ಯಾರ್ಥಿಗಳನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತನ್ನ ಪ್ರಭಾವವನ್ನು ಹಾಳುಗೆಡಹಲು ABVP ಪ್ರಯತ್ನಿಸುತ್ತಿದೆ. ಚುನಾವಣಾ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು JNUSU ಆರೋಪಿಸಿದೆ. ವಿದ್ಯಾರ್ಥಿ ಸಾಮಾನ್ಯ ಸಭೆಯ ನಂತರ ABVP ಸದಸ್ಯರು ಸೇರಿ ದಾಳಿಯನ್ನು ನಡೆಸಿದರು ಎಂದು JNUSU ಆರೋಪಿಸಿದೆ. ವ್ಯತಿರಿಕ್ತವಾಗಿ, ಎಡಪಂಥೀಯ ಜೆಎನ್‌ಯುಎಸ್‌ಯು ಸದಸ್ಯರು ದಾಳಿಯನ್ನು ಪ್ರಾರಂಭಿಸಿದರು ಎಂದು ಎಬಿವಿಪಿ ವಾದಿಸಿದೆ.

ಘರ್ಷಣೆಗೆ ಪ್ರತಿಕ್ರಿಯೆಯಾಗಿ, ಎಬಿವಿಪಿ ಮತ್ತು ಎಡ ಗುಂಪಿನ ವಿದ್ಯಾರ್ಥಿಗಳು ಪರಸ್ಪರರ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಿದರು. ವಿಶ್ವವಿದ್ಯಾನಿಲಯ ಆಡಳಿತವು ತಕ್ಷಣದ ಪ್ರತಿಕ್ರಿಯೆಯನ್ನು ನೀಡಿಲ್ಲ. ಗಾಯಗೊಂಡ ವಿದ್ಯಾರ್ಥಿಗಳ ನಿಖರವಾದ ಸಂಖ್ಯೆಯನ್ನೂ ದೃಢೀಕರಿಸಿಲ್ಲ.

“ಜೆಎನ್‌ಯು ಆಡಳಿತವು ಕ್ಯಾಂಪಸ್‌ನಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಬದ್ಧವಾಗಿದೆ. ರಾಜಕೀಯ ಪಕ್ಷಪಾತವಿಲ್ಲದೆ, ಗಲಾಟೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಉಪಕುಲಪತಿ ಶಾಂತಿಶ್ರೀ ಡಿ ಪಂಡಿತ್ ಭರವಸೆ ನೀಡಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಕ್ಯಾಂಪಸ್‌ನಲ್ಲಿ ಸಹಜ ಸ್ಥಿತಿ ಮರಳಿಸಲು ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: JNU Campus : ಜೆಎನ್​ಯು ಕ್ಯಾಂಪಸ್​ನಲ್ಲಿ ದೇಶ ವಿರೋಧಿ ಘೋಷಣೆ, ಪ್ರತಿಭಟನೆ ನಿಷೇಧ​!

Exit mobile version