Site icon Vistara News

ವಿಸ್ತಾರ Explainer : Job cuts : ಭಾರತ ಸೇರಿದಂತೆ ಜಗತ್ತಿನಾದ್ಯಂತ ಉದ್ಯೋಗ ಕಡಿತ ಶುರು, ಕಾರಣವೇನು?

job cut

ಮೈಕ್ರೊಸಾಫ್ಟ್‌, ಮೆಟಾ, ಅಮೆಜಾನ್‌ ಸೇರಿದಂತೆ ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗ ಕಡಿತ ಶುರುವಾಗಿದೆ. ಭಾರತವೊಂದರಲ್ಲೇ ಕಳೆದ ವರ್ಷ ಡಿಸೆಂಬರ್‌ನಲ್ಲಿ 17,000 ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. 2023ರಲ್ಲೂ (Job cuts) ಈ ಟ್ರೆಂಡ್‌ ಮುಂದುವರಿದಿದೆ.

ಜಾಗತಿಕ ಆರ್ಥಿಕ ಹಿಂಜರಿತದ ನೆರಳು ಈಗಾಗಲೇ ಕಾಣಿಸಿಕೊಂಡಿದೆ. ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಕುಸಿಯುತ್ತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಲಾಭಾಂಶದ ಇಳಿಕೆಯಾಗುತ್ತಿದೆ. ಬಜೆಟ್‌ಗೆ ಕತ್ತರಿ ಹಾಕಲಾಗುತ್ತಿದೆ. ಸಾವಿರಾರು ಉದ್ಯೋಗ ಕಡಿತದ (Firing) ಪ್ರಕರಣಗಳು ವರದಿಯಾಗುತ್ತಿವೆ.

ಮೈಕ್ರೊಸಾಫ್ಟ್‌, ಮೆಟಾ, ಟ್ವಿಟರ್‌, ಸ್ನ್ಯಾಪ್‌ಚಾಟ್‌ನಲ್ಲಿ 2022ರಲ್ಲಿ ಭಾರಿ ಸಂಖ್ಯೆಯಲ್ಲಿ ಉದ್ಯೋಗ ಕಡಿತವಾಗಿದೆ. ಇಂಟೆಲ್‌, ಬೈಜೂಸ್‌ನಲ್ಲಿ ಸಹಸ್ರಾರು ಮಂದಿಗೆ ಗೇಟ್‌ ಪಾಸ್‌ ನಿಶ್ಚಿತವಾಗಿದೆ. ಕೆಲ ಕಂಪನಿಗಳಲ್ಲಿ 50-100ರ ಲೆಕ್ಕದಲ್ಲಿ ಉದ್ಯೋಗ ಕಡಿತವಾದರೆ, ಮತ್ತೆ ಕೆಲ ಕಂಪನಿಗಳಲ್ಲಿ 1000-2000 ಲೆಕ್ಕದಲ್ಲಿ ಸಾಮಾಹಿಕ ಉದ್ಯೋಗ ಕಡಿತವಾಗುತ್ತಿದೆ.

ಮೈಕ್ರೊಸಾಫ್ಟ್‌ನಲ್ಲಿ ಈ ವರ್ಷ 10,000 ಉದ್ಯೋಗ ನಷ್ಟ

ಮೈಕ್ರೊಸಾಫ್ಟ್‌ ಕಾರ್ಪ್‌ ಕಂಪನಿಯಲ್ಲಿ ಈ 2023ರಲ್ಲಿ 10,000 ಉದ್ಯೋಗ ಕಡಿತವಾಗಲಿದೆ. ಸ್ವತಃ ಕಂಪನಿ ಈ ಬಗ್ಗೆ ಬುಧವಾರ ಘೋಷಿಸಿದೆ. ಕಂಪನಿಯ ಒಟ್ಟಾರೆ ಸಿಬ್ಬಂದಿ ಬಲದಲ್ಲಿ 5% ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹೀಗಿದ್ದರೂ, ನಿರ್ಣಾಯಕ ವಲಯಗಳಲ್ಲಿ ಕಂಪನಿ ತನ್ನ ನೇಮಕಾತಿಯನ್ನು ಮುಂದುವರಿಸಲಿದೆ ಎಂದು ಸಿಇಒ ಸತ್ಯ ನಾಡೆಳ್ಳಾ ತಿಳಿಸಿದ್ದಾರೆ. ಆರ್ಥಿಕ ಹಿಂಜರಿತಕ್ಕೆ ಟೆಕ್‌ ಲೋಕ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.

ಉದ್ಯೋಗ ಕಡಿತ ಮಾಡುವುದು ಕಠಿಣ ನಿರ್ಧಾರವಾಗಿದ್ದರೂ, ಅಗತ್ಯವಿತ್ತು. ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯ ಸವಾಲುಗಳು ಇದಕ್ಕೆ ಕಾರಣ ಎಂದು ಸತ್ಯ ನಾಡೆಳ್ಳಾ ತಿಳಿಸಿದ್ದಾರೆ.

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದಲ್ಲಿ 11,000 ಮಂದಿಗೆ ಗೇಟ್‌ಪಾಸ್

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದಲ್ಲಿ ಈ ವರ್ಷ 11,000 ಮಂದಿಗೆ ಗೇಟ್‌ಪಾಸ್‌ ಸಿಗಲಿದೆ. ಕಂಪನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿ ದೊಡ್ಡ ಮಟ್ಟದಲ್ಲಿ ಉದ್ಯೋಗ ನಷ್ಟ ಸಂಭವಿಸುತ್ತಿದೆ. ಕಳೆದೊಂದು ವರ್ಷದಿಂದ ಮೆಟಾದ ಷೇರುಗಳು ನಷ್ಟಕ್ಕೀಡಾಗಿದೆ. ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ 13% ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.

ಸತ್ಯ ನಾಡೆಳ್ಳಾ ಹೇಳಿದ್ದೇನು?

ಉದ್ಯೋಗ ಕಡಿತಕ್ಕೆ ಸಂಬಂಧಿಸಿ ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾಡೆಳ್ಳಾ, ತಮ್ಮ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಕಾರಣಗಳನ್ನು ವಿವರಿಸಿದ್ದಾರೆ. ಕೋವಿಡ್‌ ಬಿಕ್ಕಟ್ಟು ಶುರುವಾದ ಬಳಿಕ ಗ್ರಾಹಕರು ಡಿಜಿಟಲ್‌ ಯೋಜನೆಗಳಿಗೆ ಭಾರಿ ಹೂಡಿಕೆ ಮಾಡಿದ್ದರು. ಈಗ ಡಿಜಿಟಲ್‌ ವೆಚ್ಚದಲ್ಲಿ ಹೊಂದಾಣಿಕೆ ನಡೆಯುತ್ತಿದೆ. ಸಾಧ್ಯವಾದಷ್ಟು ಉಳಿತಾಯ ಮಾಡಲು ಕಂಪನಿಗಳು ಯೋಚಿಸುತ್ತಿವೆ. ಪ್ರಸ್ತುತ ಜಗತ್ತಿನ ನಾನಾ ಕಡೆಗಳಲ್ಲಿ ಆರ್ಥಿಕ ಹಿಂಜರಿತದ ಸಮಸ್ಯೆ ಉಂಟಾಗಿದೆ. ಗ್ರಾಹಕರ ಆದ್ಯತೆಗಳೂ ಬದಲಾಗಿವೆ. ಹೀಗಾಗಿ 10,000 ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಸತ್ಯ ನಾಡೆಳ್ಳಾ ತಿಳಿಸಿದ್ದಾರೆ.

ಅಮೆಜಾನ್‌ನಲ್ಲಿ 18,000 ಉದ್ಯೋಗ ಕಡಿತ

ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ನಲ್ಲಿ 18,000 ಉದ್ಯೋಗ ಕಡಿತ ಮಾಡಲಾಗುವುದು ಎಂದು ಸಿಇಒ ಆಂಡಿ ಜೆಸ್ಸಿ ಜನವರಿ 4ರಂದು ಘೋಷಿಸಿದ್ದಾರೆ. ಕಳೆದ ವರ್ಷವೇ ಕಂಪನಿಯಲ್ಲಿ ಉದ್ಯೋಗ ಕಡಿತ ಶುರುವಾಗಿತ್ತು. ಕಾಯಿನ್‌ಬೇಸ್‌ 1200 ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡಲಿದೆ. ಡೋರ್‌ಡ್ಯಾಶ್‌ ಕಂಪನಿಯಲ್ಲಿ 1250 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಎಚ್‌ಪಿ ಕಂಪನಿ ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳನ್ನು ಕಡಿತ ಮಾಡಲಿದೆ. ಪರ್ಸನಲ್‌ ಕಂಪ್ಯೂಟರ್‌ಗಳಿಗೆ ಬೇಡಿಕೆ ಇಳಿಕೆಯಾಗುತ್ತಿರುವುದು ಇದಕ್ಕೆ ಕಾರಣ.

ಇಂಟೆಲ್‌ನಲ್ಲಿ 11,000 ಉದ್ಯೋಗ ನಷ್ಟ ?

ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ದಿಗ್ಗಜ ಇಂಟೆಲ್‌ ಕಾರ್ಪೊರೇಷನ್‌, ಮುಂಬರುವ ದಿನಗಳಲ್ಲಿ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಪರ್ಸನಲ್‌ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿ ವಹಿವಾಟು ಕುಸಿಯುತ್ತಿದ್ದು, ಇಂಟೆಲ್‌ ಉದ್ಯೋಗ ಕಡಿತ ಮಾಡಲಿದೆ ಎಂಬ ವರದಿ ಸಂಚಲನ ಸೃಷ್ಟಿಸಿದೆ. 

ಕಾಡುತ್ತಿದೆ ಆರ್ಥಿಕ ಹಿಂಜರಿತದ ಭೀತಿ

2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಇಡೀ ವಿಶ್ವವನ್ನು ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿದೆ. ಮುಂಬರುವ 6ರಿಂದ 9 ತಿಂಗಳುಗಳಲ್ಲಿ ಅಮೆರಿಕ ಸೇರಿದಂತೆ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸುವ (Recession) ಸಾಧ್ಯತೆ ಎಂದು ಜೆಪಿ ಮೋರ್ಗಾನ್‌ ಸಂಸ್ಥೆಯ ಸಿಇಒ ಜೇಮಿ ಡೈಮನ್‌ ಎಚ್ಚರಿಸಿದ್ದಾರೆ. 2023ರ ಮಧ್ಯ ಭಾಗದ ವೇಳೆಗೆ ಇಡೀ ಜಗತ್ತು ಆರ್ಥಿಕ ಹಿಂಜರಿತಕ್ಕೆ ಸಿಲುಕಲಿದೆ. ಹಣದುಬ್ಬರ, ಬಡ್ಡಿ ದರ ಏರಿಕೆ, ರಷ್ಯಾ-ಉಕ್ರೇನ್‌ ಸಂಘರ್ಷ ಹಾಗೂ ಇತರ ವಿದ್ಯಮಾನಗಳ ಪರಿಣಾಮ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ನಷ್ಟದ ಆತಂಕ

ಅಮೆರಿಕದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಸುತ್ತಿರುವುದರಿಂದ ಆರ್ಥಿಕ ಬೆಳವಣಿಗೆಗೆ ಪೆಟ್ಟು ಬೀಳಲಿದೆ ಹಾಗೂ 2023ರಿಂದ ಪ್ರತಿ ತಿಂಗಳು 175,000 ಉದ್ಯೋಗ ನಷ್ಟವಾಗಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕದ ವರದಿ ತಿಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ವಾಸ್ತವವಾಗಿ ಅಲ್ಲಿ ನಿರುದ್ಯೋಗದ ಪ್ರಮಾಣ 3.7%ರಿಂದ 3.5%ಕ್ಕೆ ಇಳಿದಿದ್ದರೂ, ಬಡ್ಡಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಣದುಬ್ಬರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸೆಪ್ಟೆಂಬರ್‌ನಲ್ಲಿ ನಿರುದ್ಯೋಗ ಅಲ್ಪ ಇಳಿಕೆಯಾಗಲು ಕಾರಣ ಅಮೆರಿಕನ್ನರು ಉದ್ಯೋಗ ಬಿಡುತ್ತಿರುವುದೇ ಆಗಿದೆ. ಹೀಗಾಗಿ ನಿರುದ್ಯೋಗ ಸಮಸ್ಯೆ ಕಾಡಲಿದೆ ಎನ್ನುತ್ತಾರೆ ತಜ್ಞರು.

ಈಗಾಗಲೇ ಯುರೋಪ್‌ನಲ್ಲಿ ಹಿಂಜರಿತ: ಅಮೆರಿಕ ಮತ್ತು ಜಗತ್ತು ಆರ್ಥಿಕ ಹಿಂಜರಿತಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಯುರೋಪ್‌ ಈಗಾಗಲೇ ಹಿಂಜರಿತದಲ್ಲಿದೆ ಎಂದು ಜೇಮಿ ಡೈಮನ್‌ ಹೇಳಿದ್ದಾರೆ. ಅಮೆರಿಕದ ಬೃಹತ್‌ ಬ್ಯಾಂಕ್‌ಗಳು ತಮ್ಮ ಮೂರನೇ ತ್ರೈಮಾಸಿಕ ಆದಾಯವನ್ನು ಈ ವಾರದಿಂದ ಪ್ರಕಟಿಸಲಿವೆ. ಇಲ್ಲಿಯವರೆಗೆ ಈ ವರ್ಷ ಷೇರು ಮಾರುಕಟ್ಟೆ ಸೂಚ್ಯಂಕ ಎಸ್&ಪಿ 500, 24% ಕುಸಿದಿದೆ. ಈ ಸೂಚ್ಯಂಕ ಹೆಚ್ಚುವರಿ 20% ಪತನವಾಗಬಹುದು. ಹೂಡಿಕೆದಾರರು ಈ ಆರ್ಥಿಕ ಬಿಕ್ಕಟ್ಟಿನ ಸುಂಟರಗಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೈರಿಂಗ್-ಫೈರಿಂಗ್‌, ಉದ್ಯೋಗಿಗಳ ವಲಸೆ ಸದ್ಯ ನಿಲ್ಲದು: ಟೀಮ್‌ಲೀಸ್ ತಂತ್ರಜ್ಞಾನ ವಲಯದ ಪ್ರತಿಯೊಂದು ಕಂಪನಿಯೂ ತನ್ನ ಬಿಸಿನೆಸ್‌ನ ಅಗತ್ಯಗಳು ಮತ್ತು ಕಾರ್ಯತಂತ್ರಗಳಿಗೆ ಅನುಗುಣವಾಗಿ ನೇಮಕಾತಿ ಅಥವಾ ಉದ್ಯೋಗ ಕಡಿತವನ್ನು ಮಾಡುತ್ತದೆ. ಕೆಲವು ಕಂಪನಿಗಳು ನೇಮಿಸುತ್ತಿವೆ. ಮತ್ತೆ ಕೆಲ ಕಂಪನಿಗಳು ಹುದ್ದೆಗಳನ್ನು ಕಡಿತಗೊಳಿಸುತ್ತಿವೆ. ಉದ್ಯೋಗಿಗಳ ವಲಸೆಯೂ ಶೇ.22-23%ರ ಮಟ್ಟದಲ್ಲಿ ಮುಂದುವರಿಯಲಿದೆ. ಈ ಏರಿಳಿತ ಮುಂಬರುವ ತಿಂಗಳುಗಳಲ್ಲಿ ಮುಂದುವರಿಯಬಹುದು ಎನ್ನುತ್ತಾರೆ ನೇಮಕಾತಿ ವಲಯದ ಟೀಮ್‌ಲೀಸ್‌ ಸಂಸ್ಥೆಯ ಸಹ ಸಂಸ್ಥಾಪಕಿ ಋತುಪರ್ಣ ಚಕ್ರವರ್ತಿ.

ಜಾಗತಿಕ ಆರ್ಥಿಕ ಹಿಂಜರಿತದ ಕಳವಳ ತಂತ್ರಜ್ಞಾನ ವಲಯದಲ್ಲಿ ಇರುವುದು ಹೌದು. ಆದರೆ ಟೆಕ್ನಾಲಜಿಯ ಮೇಲೆ ಬಂಡವಾಳ ಹೂಡಿಕೆ ಯಾವ ಕಾಲಕ್ಕೂ ಅಗತ್ಯ. ಜಗತ್ತು ಅನಿಶ್ಚಿತತೆಯಲ್ಲಿ ಇರುವುದು ವಾಸ್ತವ. ಆದರೆ ಈಗ ಎಲ್ಲ ದೇಶಗಳೂ ಐಟಿ ಮಹತ್ವವನ್ನು ಮನಗಂಡಿವೆ. ಜತೆಗೆ ಐಟಿ ಕಂಪನಿಗಳೂ ಈಗ ಅಮೆರಿಕ ಒಂದನ್ನೇ ಅವಲಂಬಿಸಿವೆ. ಇತರ ದೇಶಗಳಲ್ಲಿಯೂ ತಂತ್ರಜ್ಞಾನ ಕಂಪನಿಗಳು ಮಾರುಕಟ್ಟೆಯನ್ನು ಕಂಪನಿಗಳು ಕಂಡುಕೊಳ್ಳುತ್ತಿವೆ. ಭವಿಷ್ಯ ಉಜ್ವಲವಾಗಿಯೇ ಇದೆ. ಬಿಕ್ಕಟ್ಟುಗಳಿಗೆ ಪರಿಹಾರವನ್ನೂ ಒದಗಿಸುತ್ತಿವೆ.

ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಉಂಟಾಗಿರುವ ಇಂಧನ ದರ ಏರಿಕೆ, ಆಹಾರ ದರ ಹೆಚ್ಚಳದ ಪರಿಣಾಮ ಹಣದುಬ್ಬರ ಏರುಗತಿಯಲ್ಲಿದೆ ಎಂದು ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ತಿಳಿಸಿದೆ. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಕಳೆದ ಮೇಯಿಂದ 1.90% ರಷ್ಟು ಬಡ್ಡಿ ದರವನ್ನು ಏರಿಸಿದೆ. ಡಿಸೆಂಬರ್‌ 5-7ಕ್ಕೆ ಆರ್‌ಬಿಐ ಹಣಕಾಸು ಪರಾಮರ್ಶೆಯ ವೇಳೆ, 0.25% ಬಡ್ಡಿ ದರ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಈ ವರ್ಷ ಇದುವರೆಗೆ 10% ಇಳಿಕೆಯಾಗಿದೆ. ಇದು ಕೂಡ ಹಣದುಬ್ಬರ ಹೆಚ್ಚಲು ಕಾರಣವಾಗಿದೆ. ಹಣದುಬ್ಬರ ಏರಿಕೆಯ ಪರಿಣಾಮ ಕೈಗಾರಿಕೆಗಳ ವಲಯದಲ್ಲಿ ಉತ್ಪಾದನೆ ಮುಗ್ಗರಿಸುತ್ತದೆ. ಇದು ಮತ್ತಷ್ಟು ಉದ್ಯೋಗ ಕಡಿತಕ್ಕೂ ಕಾರಣವಾಗುತ್ತದೆ. ಈ ಕಾರಣದಿಂದಾಗಿ ಆಗಸ್ಟ್ ತಿಂಗಳಿನಲ್ಲಿ ಉಂಟಾಗಿರುವ, ಕಾರ್ಖಾನೆಗಳಲ್ಲಿನ ಉತ್ಪಾದನೆ ಕುಸಿತವನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

ಉದ್ಯೋಗ ಕಡಿತ ಮಾಡುತ್ತಿರುವ ಸ್ಟಾರ್ಟಪ್‌ಗಳಲ್ಲಿ ಹೆಸರಾಂತ ಸ್ಟಾರ್ಟಪ್‌ಗಳೂ ಇರುವುದರಿಂದ ಸುದ್ದಿಯಲ್ಲಿವೆ. ಉದಾಹರಣೆಗೆ ಬೈಜೂಸ್‌ (2,500), ಬ್ಲಿನ್‌ಕಿಟ್‌ (1,600), ಅನ್‌ ಅಕಾಡೆಮಿ (1,000) ವೇದಾಂತು (724), ಕಾರ್ಸ್‌24 (೬೦೦), ಓಲಾ (500) ಎಂಫಿನ್‌ (500), ಮೀಶೊ (300), ಇಯರ್‌ಐ( 250), ರುಪೀಕ್‌ (230) ಇತ್ಯಾದಿ ಹೆಸರಾಂತ ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ಕಡಿತ ಸಂಭವಿಸಿದೆ. ಅನೇಕ ವಿಧದ ತಂತ್ರಜ್ಞಾನ ಆಧಾರಿತ ಸ್ಟಾರ್ಟಪ್‌ಗಳು ಕೂಡ ಅಸ್ತಿತ್ವಕ್ಕೆ ಬರುತ್ತಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಸದಾ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಐಟಿ ಷೇರುಗಳ ಮುನ್ನೋಟ ಉತ್ತಮ

ಇತ್ತೀಚಿನ ವರದಿಗಳ ಪ್ರಕಾರ ಷೇರು ಮಾರುಕಟ್ಟೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಷೇರುಗಳ ದರ ಕುಸಿತದ ಹೊರತಾಗಿಯೂ, 2023-25ರ ಮುನ್ನೋಟ ಉತ್ತಮವಾಗಿದೆ. ಇದಕ್ಕೆ ಕಾರಣ ಮಾಹಿತಿ ತಂತ್ರಜ್ಞಾನದ ಭಾಗವಾಗಿರುವ ಕ್ಲೌಡ್‌ ಕಂಪ್ಯೂಟಿಂಗ್‌ ಬಿಸಿನೆಸ್‌ಗೆ ಅತೀವ ಬೇಡಿಕೆ ಸೃಷ್ಟಿಯಾಗಿರುವುದು. ಐಟಿ ಕಂಪನಿಗಳ 50% ಗೂ ಹೆಚ್ಚು ಆದಾಯ ಡಿಜಿಟಲ್‌ ಪರಿವರ್ತನೆಯ ಯೋಜನೆಗಳಿಂದ ಬರುತ್ತದೆ. ಅದರಲ್ಲೂ ಮುಖ್ಯವಾಗಿ ಕ್ಲೌಡ್‌ ಕಂಪ್ಯೂಟಿಂಗ್‌ನಿಂದ ಬರುತ್ತದೆ. ಪ್ರಸ್ತುತ ಕ್ಲೌಡ್‌ ತಂತ್ರಜ್ಞಾನವನ್ನು ಒದಗಿಸುವ ಹಾಗೂ ಆ ಮಾರುಕಟ್ಟೆಯಲ್ಲಿ 65% ಪಾಲನ್ನು ಹೊಂದಿರುವ ಮೈಕ್ರೊಸಾಫ್ಟ್‌, ಅಮೆಜಾನ್‌, ಅಲ್ಫಬೆಟ್‌ (ಗೂಗಲ್)‌ ಕಂಪನಿಗಳಿಗೆ ಭಾರತೀಯ ಕಂಪನಿಗಳು ಪಾಲುದಾರಿಕೆ ವಹಿಸುತ್ತಿವೆ.

ನಿಸ್ಸಂದೇಹವಾಗಿ ಸಮಕಾಲೀನ ಬಿಸಿನೆಸ್‌ ವಲಯದಲ್ಲಿ ಒಂದು ಮಟ್ಟದ ಅನಿಶ್ಚಿತತೆ ಸಾರ್ವತ್ರಿಕವಾಗಿದೆ. ಹಣದುಬ್ಬರದ ಒತ್ತಡ ಎಲ್ಲ ಕಡೆ ಕಂಡು ಬರುತ್ತಿದೆ. ಅಂತಾರಾಷ್ಟ್ರೀಯ ರಾಜಕೀಯ ಅನಿಶ್ಚಿತ ಪರಿಸ್ಥಿತಿಗಳು, ಇಂಧನ ದರಗಳು, ಇಂಧನ ಕೊರತೆಗಳು ಪ್ರಭಾವ ಬೀರುತ್ತಿವೆ. ಇವುಗಳು ಈಗ ಮಾತುಕತೆಯ ಭಾಗವಾಗುತ್ತಿವೆ. ಹೀಗಿದ್ದರೂ, ಸದ್ಯದ ಮಟ್ಟಿಗೆ ಬೇಡಿಕೆಗೆ ಕೊರತೆ ಇಲ್ಲ ಎನ್ನುತ್ತಾರೆ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರು.

Exit mobile version