Site icon Vistara News

Liquor Policy Case : ಆಪ್​ ನಾಯಕರಿಗೆ ಕವಿತಾ 100 ಕೋಟಿ ಲಂಚ ಕೊಟ್ಟಿದ್ದು ಹೌದು; ಇಡಿ ಮಾಹಿತಿ

K Kavitha

ನವದೆಹಲಿ: ಭಾರತ್ ರಾಷ್ಟ್ರ ಸಮಿತಿ (BRS ) ಮುಖಂಡ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ (K Kavitha) ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಉನ್ನತ ನಾಯಕರೊಂದಿಗೆ ಮದ್ಯ ನೀತಿಯಲ್ಲಿ (Liquor Policy Case) ಅನುಕೂಲ ಪಡೆಯಲು ಪಿತೂರಿ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತನ್ನ ತನಿಖೆಯಲ್ಲಿ ಹೇಳಿದೆ. ಈ ಅನುಕೂಲಗಳಿಗೆ ಪ್ರತಿಯಾಗಿ ಕವಿತಾ ಅವರು ಎಎಪಿ ನಾಯಕರಿಗೆ 100 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಸಗಟು ವ್ಯಾಪಾರಿಗಳಿಂದ ಕಿಕ್​ಬ್ಯಾಕ್​​ ರೂಪದಲ್ಲಿ ಅಕ್ರಮ ಹಣವನ್ನು ಎಎಪಿಗೆ ಸಲ್ಲಿಸಸಲಾಗಿದೆ ಎಂದು ಇಡಿ ಆರೋಪಿಸಿದೆ.

ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಕೆ ಕವಿತಾ ಮತ್ತು ಅವರ ಸಹಚರರು ಎಎಪಿಗೆ ಮುಂಚಿತವಾಗಿ 100 ಕೋಟಿ ಪಾವತಿಸಿದ್ದಾರೆ ಎಂದು ಇಡಿ ಹೇಳಿದೆ.

45 ವರ್ಷದ ಬಿಆರ್​ಎಸ್​​ ನಾಯಕಿಯನ್ನು ಮಾರ್ಚ್ 16 ರ ಶನಿವಾರ ಹೈದರಾಬಾದ್​ನಲ್ಲಿ ಇಡಿ ಬಂಧಿಸಿತ್ತು. ಮರುದಿನ ಅವರನ್ನು ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್​ ಅವರನ್ನು ಮಾರ್ಚ್ 23 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ, ಹೈದರಾಬಾದ್, ಚೆನ್ನೈ, ಮುಂಬೈ ಮತ್ತು ಇತರ ಸ್ಥಳಗಳು ಸೇರಿದಂತೆ ದೇಶಾದ್ಯಂತ 245 ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ.

ಇದನ್ನೂ ಓದಿ : Lok Sabha Election : ಚುನಾವಣಾ ಆಯೋಗದಿಂದ ಸಸ್ಪೆಂಡ್ ಆಗಿದ್ದ ವಿವೇಕ್ ಸಹಾಯ್ ಪ. ಬಂಗಾಳದ ಡಿಜಿಪಿ!

ಈ ಪ್ರಕರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ವಿಜಯ್ ನಾಯರ್ ಸೇರಿದಂತೆ ಹದಿನೈದು ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಒಂದು ಪ್ರಾಸಿಕ್ಯೂಷನ್ ದೂರು ಮತ್ತು 5 ಪೂರಕ ದೂರುಗಳನ್ನು ದಾಖಲಿಸಿದೆ. ಈ ಪ್ರಕರಣದಲ್ಲಿ ಸೃಷ್ಟಿಯಾದ ಅಪರಾಧಗಳಲ್ಲಿ ಇದುವರೆಗೆ 128.79 ಕೋಟಿ ರೂ.ಗಳ ಆಸ್ತಿ ಪತ್ತೆಹಚ್ಚಲಾಗಿದೆ ಎಂದು ತನಿಖಾ ಸಂಸ್ಥೆ ಸೋಮವಾರ ತಿಳಿಸಿದೆ.

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪ ಕೇಳಿಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರನ್ನು ವಿಚಾರಣೆ ನಡೆಸಿದೆ.

ಸೌತ್‌ ಗ್ರೂಪ್‌ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ. ಇನ್ನು. ಕೆ. ಕವಿತಾ ಅವರನ್ನು ಬಂಧಿಸುತ್ತಲೇ, ಬಿಆರ್‌ಎಸ್‌ ನಾಯಕರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Exit mobile version