Site icon Vistara News

K Raghupathi Bhat: ಬಂಡಾಯ ಸ್ಪರ್ಧೆ; ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿಯಿಂದ ಉಚ್ಚಾಟನೆ

K Raghupathi Bhat

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ (K Raghupathi Bhat) ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ರಘುಪತಿ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವಂತೆ ಸೂಚಿಸಿದರೂ ಸ್ಪರ್ಧೆಗೆ ಮುಂದಾಗಿರುವುದರಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಜಿಲ್ಲಾ ಬಿಜೆಪಿ ಸೂಚಿಸಿತ್ತು. ಹಾಗೆಯೇ ಬಿಜೆಪಿ ಹಿರಿಯ ನಾಯಕರಿಂದಲೂ ಕೂಡ ಮನವರಿಸುವ ಯತ್ನ ನಡೆದಿತ್ತು. ಆದರೆ, ನಾಮಪತ್ರ ಹಿಂದೆ ತೆಗೆದುಕೊಳ್ಳದೆ ಸ್ಪರ್ಧೆಗೆ ರಘುಪತಿ ಭಟ್ ಇಳಿದಿದ್ದಾರೆ. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಘುಪತಿ ಭಟ್ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಮನವಿ ಮಾಡಿತ್ತು. 24 ಗಂಟೆ ಒಳಗೆ ಪಕ್ಷದ ಪ್ರಮುಖರಿಗೆ ಉತ್ತರಿಸುವಂತೆ ತಿಳಿಸಲಾಗಿತ್ತು. ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಪಕ್ಷದಿಂದ ರಘಪತಿ ಭಟ್ ಅವರನ್ನು ಅಧಿಕೃತವಾಗಿ ಉಚ್ಚಾಟನೆ ಮಾಡಲಾಗಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್‌ ಆದೇಶ ಹೊರಡಿಸಿದ್ದಾರೆ. ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನ ಪರಿಷತ್‌ ಚುನಾವಣೆಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಮುಂದಿನ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್‌ ಅವರಿಗೆ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | Bengaluru News: ಇದು ಎಷ್ಟು ಪರ್ಸೆಂಟ್ ಸರ್ಕಾರ? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್​ ಅವರಿಗೆ ಉಡುಪಿ ವಿಧಾನಸಭಾ ಚುನಾವಣೆ ಟಿಕೆಟ್ ಕೈತಪ್ಪಿತ್ತು. ಇದರ ಬೆನ್ನಲ್ಲೇ ಎಂಎಲ್‌ಸಿ ಟಿಕೆಟ್ ಕೂಡ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದ ರಘುಪತಿ ಭಟ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.

Exit mobile version