ಬೆಂಗಳೂರು: ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ (K Shivaram) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ 8ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ʼಬಾ ನಲ್ಲೆ ಮಧುಚಂದ್ರಕೆʼ ಖ್ಯಾತಿಯ ನಟ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ದಿಡೀರ್ ಹೃದಯಸ್ತಂಭನ ಹಾಗೂ ಮೆದುಳು ಸ್ಥಗಿತದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಇಂದು 7:30ಕ್ಕೆ ರಾಜಾಜಿನಗರದಲ್ಲಿರುವ ಅವರ ಮನೆಯಿಂದ ಹೊರಟು ರವೀಂದ್ರ ಕಲಾಕ್ಷೇತ್ರವನ್ನು ಪಾರ್ಥೀವ ಶರೀರ ತಲುಪಲಿದೆ. ಮಧ್ಯಾಹ್ನ 3 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಜಾಜಿನಗರದಿಂದ ರಸ್ತೆ ಮಾರ್ಗವಾಗಿ ಅಂತಿಮ ಯಾತ್ರೆ ಸಾಗಲಿದೆ.
ಅಂತ್ಯಸಂಸ್ಕಾರಕ್ಕೆ ನಿಖರ ಜಾಗ ಇನ್ನೂ ನಿಗದಿಯಾಗಿಲ್ಲ. ನಗರದ ದೊಡ್ಡಬಸತಿಯಲ್ಲಿರವ ಛಲವಾದಿ ಮಹಾಸಭಾ ಆವರಣದಲ್ಲಿ ಅಂತಿಮ ಸಂಸ್ಕಾರಕ್ಕೆ ಸರ್ಕಾರದ ಬಳಿ ಕುಟುಂಬಸ್ಥರು ಅನುಮತಿ ಕೋರಿದ್ದಾರೆ. ನಿನ್ನೆ ಸರ್ಕಾರದ ಪರವಾಗಿ ಗೃಹ ಸಚಿವ ಪರಮೇಶ್ವರ್ ಅವರು ಮನವಿ ಪತ್ರ ಸ್ವೀಕರಿಸಿದ್ದಾರೆ. 10 ಗಂಟೆಯ ಸುಮಾರಿಗೆ ಅಧಿಕೃತವಾಗಿ ಸರ್ಕಾರದಿಂದ ಜಾಗ ನಿರ್ಧಾರವಾಗುವ ಸಾಧ್ಯತೆ ಇದೆ. ಛಲವಾದಿ ಮಹಾಸಭಾ ಆವರಣದಲ್ಲಿ ಅನುಮತಿ ದೊರೆಯದಿದ್ದರೆ, ಬಿಡದಿಯ ಅವರ ತೋಟದಲ್ಲಿ ಅಂತ್ಯ ಸಂಸ್ಕಾರದ ಸಾಧ್ಯತೆ ಇದೆ.
ಈ ನಡುವೆ, ನಟ ಕೆ. ಶಿವರಾಮ್‌ಗೆ ಸ್ಮಾರಕ ನಿರ್ಮಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಗಿದೆ. ದಕ್ಷ, ಧೀಮಂತ ಅಧಿಕಾರಿಯಾಗಿದ್ದ ಕೆ ಶಿವರಾಮ್ ಮರಣದ ಹಿನ್ನಲೆಯಲ್ಲಿ ಸ್ಮಾರಕ ನಿರ್ಮಿಸಲು ಆದೇಶ ಪತ್ರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಛಲವಾದಿ ಮಹಾಸಭಾ ಸದಸ್ಯರು ನೀಡಿದ್ದಾರೆ. ಸರ್ಕಾರದ ಪರವಾಗಿ ಗೃಹ ಸಚಿವ ಪರಮೇಶ್ವರ್ ಮನವಿ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: Actor K Shivaram: ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದ ಖ್ಯಾತಿಯ, ʻಬಾನಲ್ಲೆ ಮಧುಚಂದ್ರಕೆʼ ಹೀರೊ ಕೆ. ಶಿವರಾಮ್ ವಿಧಿವಶ