ನವದೆಹಲಿ: ಲೋಕ ಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸದರಾಗಿ ಆಯ್ಕೆಯಾದ ಕಂಗನಾ ರಣಾವತ್ (Kangana Ranaut), 2020-21 ರಲ್ಲಿ ನಡೆದ ರೈತರ ಪ್ರತಿಭಟನೆಯ ಬಗ್ಗೆ ಹಿಂದೆ ನೀಡಿದ ಹೇಳಿಕೆಯಿಂದ ಕೆರಳಿದ್ದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮಹಿಳಾ ಸಿಬ್ಬಂದಿಯೊಬ್ಬರು ಗುರುವಾರ ಅವರು ಎದುರು ಸಿಕ್ಕಾಗ ಕಪಾಳಮೋಕ್ಷ ಮಾಡಿದ್ದರು. ನಟಿ ಹಾಗೂ ಸಂಸದೆಯ ವಿರುದ್ಧ ಕೈ ಮಾಡಿದ ಕುಲ್ವಿಂದರ್ ಕೌರ್ ವಿ ರುದ್ದ ಪ್ರಕರಣ ದಾಖಲಾಗಿದೆ. ಇದೇ ವೇಳೆ ನಟಿ ಈ ಹಿಂದೆ ನೀಡಿದ್ದ ಹೇಳಿಕೆಯೂ ಮುನ್ನೆಲೆಗೆ ಬಂದಿದೆ.
ನರೇಂದ್ರ ಮೋದಿ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾನೂನುಗಳನ್ನ ಜಾರಿಗೆ ತರಲು ಮುಂದಾದಾಗ ಅದರ ವಿರುದ್ಧ ಆಂದೋಲನ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ‘ಖಲಿಸ್ತಾನಿ ಬೆಂಬಲಿಗರು’ ಎಂದು ಒಂದು ಗುಂಪು ಕರೆದಿತ್ತು. ಈ ವಿವಾದಕ್ಕೆ ಈಡಾದಾಗ ಕಂಗಾನಾ ಆ ಗಾಯಕ್ಕೆ ಉಪ್ಪು ಸವರುವಂಥ ಹೇಳಿಕೆ ನೀಡಿದ್ದರು.
2020 ರಲ್ಲಿ, ಕಂಗನಾ ರನೌತ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.
100 ರೂಪಾಯಿಗೆ ಸಿಗುವ ಮಹಿಳೆಯರು ಎಂದು ಕಂಗನಾ ಕೊಟ್ಟಿರುವ ಹೇಳಿಕೆಯು ಎಕ್ಸ್ ನಲ್ಲಿ(ಟ್ವಿಟರ್) ಕಂಗನಾ ಮತ್ತು ಗಾಯಕ-ನಟ ದಿಲ್ಜೀತ್ ದೋಸಾಂಜ್ ನಡುವೆ ಗಲಾಟೆಗೆ ಕಾರಣವಾಗಿತ್ತು.
ರಿಹಾನ್ನಾ ಬಗ್ಗೆಯೂ ಟೀಕೆ
ಫೆಬ್ರವರಿ 2021 ರಲ್ಲಿ, ಅಂತರರಾಷ್ಟ್ರೀಯ ಪಾಪ್ ಸೆನ್ಸೇಷನ್ ರಿಹಾನ್ನಾ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ರನೌತ್ ಪ್ರತಿಭಟನಾಕಾರರನ್ನು “ಭಯೋತ್ಪಾದಕರು” ಎಂದು ಕರೆದಿದ್ದರು ಮತ್ತು ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ
ರಿಹಾನ್ನಾ ಅವರ ಎಕ್ಸ್ ಪೋಸ್ಟ್ಗೆ ಉತ್ತರಿಸಿದ ಕಂಗನಾ ರನೌತ್ ” ಅವರು ರೈತರಲ್ಲ, ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರು. ಇವರಿಂದಾಗಿ ದುರ್ಬಲವಾಗುತ್ತಿರುವ ನಮ್ಮ ದೇಶವನ್ನು ಚೀನಾ ಸ್ವಾಧೀನಪಡಿಸಿಕೊಳ್ಳಬಹುದು. ಚೀನಾದ ವಸಾಹತು ಮಾಡಬಹುದು. ನೀವು ನಮ್ಮ ಬಗ್ಗೆ ಹೇಳಲು ಬರಬೇಡಿ ಎಂದು ಹೇಳಿಕೆ ನೀಡಿದ್ದರು.
ರಿಹಾನ್ನಾ ವಿರುದ್ಧದ ಮತ್ತು ₹ 100 ಪೋಸ್ಟ್ಗಳನ್ನು ಕಂಗನಾ ರಣಾವತ್ ಅಳಿಸಿದ್ದರು. 2021 ರ ಡಿಸೆಂಬರ್ನಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸಲಾಯಿತು ಮತ್ತು ಕೆಲವು ದಿನಗಳ ನಂತರ, ರೈತರ ವಿರುದ್ಧದ ಹೇಳಿಕೆಗಳಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಕಂಗನಾ ಅರ ಕಾರನ್ನು ಪಂಜಾಬ್ನ ಕಿರಾತ್ಪುರ್ ಸಾಹಿಬ್ನಲ್ಲಿ ತಡೆದಿದ್ದರು.
ಕಂಗನಾ ಪ್ರತಿಕ್ರಿಯೆ ಏನು?
ನಾನು ಸುರಕ್ಷಿತವಾಗಿದ್ದೇನೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಈ ಘಟನೆ ನಡೆದಿದೆ. ತಪಾಸಣೆ ಮುಗಿದ ಕ್ಷಣ, ಬೇರೆ ಕ್ಯಾಬಿನ್ನಲ್ಲಿದ್ದ ಸಿಐಎಸ್ಎಫ್ನ ಮಹಿಳಾ ಕಾನ್ಸ್ಟೆಬಲ್ ನನ್ನ ಬಳಿಗೆ ಬಂದು ನನ್ನ ಮುಖಕ್ಕೆ ಬದಿಯಿಂದ ಹೊಡೆದು ನಿಂದಿಸಿದಳು. ನೀವು ಇದನ್ನು ಏಕೆ ಮಾಡಿದ್ದೀರಿ ಎಂದು ನಾನು ಅವಳನ್ನು ಕೇಳಿದೆ. ಆಕೆ ರೈತರ ಪ್ರತಿಭಟನೆ ಬಗ್ಗೆ ನಾನು ನೀಡಿದ ಹೇಳಿಕೆಗಾಗಿ ಅಂದಳು ಎಂದು ನಟಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ. ಇದನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಕಳವಳಕಾರಿಯಾಗಿದೆ ಎಂದೂ ಕಂಗನಾ ಹೇಳಿದ್ದಾರೆ.