Site icon Vistara News

Kannada Compulsory: ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಮುಂದಿನ ವರ್ಷದಿಂದ ಹೊಸ ನಿಯಮ

kannada compulsory

ಬೆಂಗಳೂರು: ಮುಂದಿನ ವರ್ಷದಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education) ಅಥವಾ ಐಸಿಎಸ್ಇ (ICSE) ಅಡಿಯಲ್ಲಿ ಪ್ರಾರಂಭವಾಗುವ ಎಲ್ಲಾ ಶಾಲೆಗಳಿಗೆ ಕನ್ನಡ ಕಲಿಕೆಯ ಕಡ್ಡಾಯ (Kannada Compulsory) ಹೊಸ ನಿಯಮ (New rule) ಅನ್ವಯವಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹೊಸ ಶಾಲೆಗಳ (new school) ಸ್ಥಾಪನೆಗೆ ಅನುಮೋದನೆ ಕೋರಿರುವ ಎಲ್ಲಾ ಅರ್ಜಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅನುಮೋದನೆ ನೀಡಿದ್ದು, ಈ ಶಾಲೆಗಳಲ್ಲಿಯೂ ಸಹ ಹೊಸ ನಿಯಮ ಜಾರಿಯಾಗಲಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ಐಸಿಎಸ್ಇ ಮಂಡಳಿ, ಇದರ ಜತೆಯಲ್ಲಿ ಪ್ರತಿಯೊಂದು ಶಾಲೆಯು ಮುಂಬರುವ ವರ್ಷದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್ಒಸಿ) ಪಡೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಿದೆ.

ಶಿಕ್ಷಣ ಇಲಾಖೆಯಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ 164 ಹೊಸ ಶಾಲೆಗಳನ್ನು ಸ್ಥಾಪಿಸಲು ಅನುಮೋದನೆ ದೊರೆತಿದೆ. ಅದರಲ್ಲಿ ಸುಮಾರು 50 ಶಾಲೆಗಳು ಬೇರೆ ಮಂಡಳಿಗಳಿಗೆ ಸೇರಿದ್ದಾಗಿವೆ. ಇವುಗಳಿಗೆ ಅನುಮೋದನೆ ನೀಡಿದ್ದು, ಇವು ಮುಂದಿನ ವರ್ಷದಿಂದ ಆರಂಭವಾಗಲಿವೆ. ಈ ಹಿಂದೆ ಅಂದರೆ 2015ರಲ್ಲಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಕಲಿಸುವ ಕಾನೂನನ್ನು ಪೋಷಕರು ನ್ಯಾ ಯಾಲಯದಲ್ಲಿ ಪ್ರಶ್ನಿಸಿದ್ದರು. ಹಾಗೆಯೇ ಎನ್ಒಸಿ ನೀಡುವುದಕ್ಕೆ ಸರ್ಕಾರ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿತ್ತು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಂಶವೂ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

2023ರಲ್ಲಿ ಸುಮಾರು 25ಕ್ಕೂ ಹೆಚ್ಚು ಪೋಷಕರು ನ್ಯಾಯಾಲಯಕ್ಕೆ ಮೊರೆಹೋಗಿದ್ದು, ಕಾನೂನು ಪಾಲನೆಯಿಂದ ತಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮನವಿ ಮಾಡಿದ್ದರು. ಹೀಗಾಗಿ ರಾಜ್ಯ ಸರ್ಕಾರ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದಕ್ಕೆ ಎನ್ಒಸಿ ನೀಡುವ ಸಂದರ್ಭದಲ್ಲಿ ಸರ್ಕಾರ ಮಾನದಂಡವನ್ನಾಗಿ ಮಾಡಿದೆ. ಈ ಸಂಬಂಧ ನಿಯಮಗಳಿಗೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎನ್ಒಸಿ ಕಡ್ಡಾಯ

ಹೊಸ ನಿಯಮದ ಪ್ರಕಾರ ಶಾಲಾ ಆಡಳಿತ ಮಂಡಳಿಯು ಹೊಸ ಶಾಲೆಯನ್ನು ಸ್ಥಾಪಿಸುವಾಗ ಎನ್ಒಸಿ ಕಡ್ಡಾಯವಾಗಿ ಪಡೆಯಲೇ ಬೇಕು ಎಂದು ನಿಯಮಗಳನ್ನು ಮಾರ್ಪಾಡು ಮಾಡಲಾಗಿತ್ತು. ಮುಂದಿನ ವರ್ಷದಿಂದ ಶಾಲೆಗಳ ಆಡಳಿತ ಮಂಡಳಿಯು ಎನ್ಒಸಿ ಅರ್ಜಿ ನಮೂನೆಯಲ್ಲಿ ಕನ್ನಡ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ ಎನ್ನುವುದನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಬೇಕು, ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿತ್ತು. ಒಂದು ವೇಳೆ ಅರ್ಜಿಯಲ್ಲಿ ಶಾಲೆಯು ಕನ್ನಡವನ್ನು ಕಲಿಸುವ ಉದ್ದೇಶದ ಬಗ್ಗೆ ಸುಳ್ಳು ಹೇಳಿಕೆಗಳನ್ನು ನಮೂದಿಸಿದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿತ್ತು.

ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯಲ್ಲಿ ನೋಂದಣಿಯಾಗಿರುವ ಶಾಲೆಗಳಿಗೆ ಹೊಸ ನಿಯಮದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಹೇಳಿಕೆ ನೀಡಿದೆ. ಆದರೆ ಇತರ ಮಂಡಳಿಗಳೊಂದಿಗೆ ನೋಂದಣಿಯಾಗಿರುವ ಶಾಲೆಗಳಿಗೆ ಇದು ಒಂದು ಸವಾಲಾಗಿದೆ. ಈ ಮಂಡಳಿಯ ಅಧಿಕಾರಿಗಳು ಸಮಸ್ಯೆಯನ್ನು ಅರಿತು ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಮಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ.

ಇದನ್ನೂ ಓದಿ: Cabinet Meeting: ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯಕ್ಕೆ ಸಚಿವ ಸಂಪುಟ ಒಪ್ಪಿಗೆ

Exit mobile version