| ಹರೀಶ್ ಕೇರ
ಯಾವುದೇ ಸಾಹಿತ್ಯ ಸಮ್ಮೇಳನವಿರಲಿ, ಕನ್ನಡ ನಾಡು ನುಡಿಗೆ ಸಂಬಂಧಿಸಿ ಕಾರ್ಯಕ್ರಮವಿರಲಿ, ಅಲ್ಲಿ ನಾಡಗೀತೆ ʼಜೈ ಭಾರತ ಜನನಿಯ ತನುಜಾತೆʼ ಮೊಳಗುವುದು ವೇದಿಕೆ ಮೇಲಿನ ಕಾರ್ಯಕ್ರಮ ಆರಂಭವಾಗುವಾಗ. ಆದರೆ ಇದಕ್ಕೂ ಮುನ್ನವೇ, ಬೆಳಗಿನಿಂದಲೇ ಒಂದು ಗೀತೆ ಮೊಳಗಲು ಶುರುವಾಗಿರುತ್ತದೆ- ಅದು ಹಚ್ಚೇವು ಕನ್ನಡದ ದೀಪ.
ʼಹಚ್ಚೇವು ಕನ್ನಡದ ದೀಪʼ ಎಂಬ ಧ್ವನಿಸುರುಳಿ ಅಲ್ಲೆಲ್ಲೋ ಮೊಳಗಲಾರಂಭಿಸಿತು ಎಂದರೆ ಅಲ್ಲೊಂದು ಕನ್ನಡದ ಕಾರ್ಯಕ್ರಮ ಇನ್ನೇನು ಶುರುವಾಗಲಿದೆ ಎಂದೇ ಅರ್ಥ. ಅದನ್ನು ಕೇಳುತ್ತಾ ದೂರ ದೂರದಲ್ಲಿದ್ದವರು ಧಾವಿಸಿ ಬರುವರು. ಕನ್ನಡವನ್ನು ಪ್ರೇಮಿಸುವವರಲ್ಲಿ ಅಂತರಂಗದ ಅನುಭೂತಿಯೊಂದು ಕಂಪಿಸಿದಂತಾಗುವುದು. ಅದು ಮುಂದಿನ ಕಾರ್ಯಕ್ರಮಕ್ಕೆ ಮನಸ್ಸನ್ನು ಸಜ್ಜುಗೊಳಿಸುವುದು.
ಇದರ ನಂತರ ಬರುವುದೇ ಜೈ ಭಾರತ ಜನನಿಯ ತನುಜಾತೆ. ದೀಪ ಹಚ್ಚಿದ ಮೇಲೆ ತಾನೇ ಬೆಳಕಾಗುವುದು? ಬೆಳಕಾದ ಮೇಲೆ ತಾನೇ ಭಾರತ ಜನನಿಯೂ ಆಕೆಯ ತನುಜಾತೆ ಕನ್ನಡ ಮಾತೆಯೂ ಮೆರವಣಿಗೆ ಹೊರಬೇಕಿರುವುದು? ಕುವೆಂಪು ಅವರ ಹಾಡು ಕನ್ನಡ ಮಾತೆಯನ್ನು ಕೀರ್ತಿಸುತ್ತದೆ, ವರ್ಣಿಸುತ್ತದೆ, ಆಕೆಯ ಸೌಭಾಗ್ಯ ಸಂಪತ್ತುಗಳನ್ನು ಒತ್ತಿ ಹೇಳುತ್ತದೆ. ಆದರೆ ಕರ್ಕಿಯವರ ಹಾಡು ನಾವು ನಿತ್ಯ ಮಾಡಬೇಕಾದ ʼನುಡಿಯ ದೀಪ ಹಚ್ಚುವʼ ಕಾಯಕದತ್ತ ನಮ್ಮ ಮನಸ್ಸನ್ನು ಎಚ್ಚರಿಸುತ್ತದೆ. ಎರಡಕ್ಕೂ ಅದರದೇ ದಿವ್ಯತೆ, ಧನ್ಯತೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | 8 ವರ್ಷ ಶಬರಿಯಂತೆ ಕಾದು ಸಮ್ಮೇಳನ ನಡೆಸಲು ಸಜ್ಜಾಗಿದೆ ಏಲಕ್ಕಿ ನಾಡು ಹಾವೇರಿ
ಡಿ.ಎಸ್ ಕರ್ಕಿಯವರು 1949ರಲ್ಲಿ ಬರೆದ ಈ ಹಾಡಿಗೆ ಇಂದು ಭರ್ತಿ 73 ವರ್ಷ. ನಾಡಗೀತೆ ವಿವಾದಗಳಲ್ಲಿ ಸಿಲುಕಿಕೊಂಡಿತು, ಆದರೆ ಹಚ್ಚೇವು ಕನ್ನಡದ ದೀಪ ಅವಿವಾದಿತ. ಇದನ್ನು ಬರೆದ ಕರ್ಕಿಯವರು ಗಡಿನಾಡು ಬೆಳಗಾವಿಯ ಕವಿತಾ ಪ್ರತಿಭೆ. ಯಾವುದು ನಮ್ಮ ಕನ್ನಡ ನಾಡಗೀತೆಯಾಗಬೇಕು ಎಂಬ ಬಗ್ಗೆ ಚಿಂತನೆ ನಡೆದಾಗ ʼಹಚ್ಚೇವು ಕನ್ನಡದ ದೀಪʼ ಕೂಡಾ ಪರಿಗಣನೆಯಲ್ಲಿತ್ತು. ʼʼನಿಜಕ್ಕೂ ಹಚ್ಚೇವು ಕನ್ನಡದ ದೀಪ ನಾಡಗೀತೆಯಾಗಬಹುದಿತ್ತು. ನಾವು ಉತ್ತರ ಕರ್ನಾಟಕದವರು ಒತ್ತಡ ತರಲಿಲ್ಲʼʼ ಎಂದು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಹಿಂದೊಮ್ಮೆ ಹೇಳಿದ್ದರು.
ಹಾಗಂತ ಹಳಹಳಿಕೆಯೇನೂ ಬೇಕಿಲ್ಲ. ಜೈ ಭಾರತ ಜನನಿಗೆ ಅಧಿಕೃತ ನಾಡಗೀತೆ ಸ್ಥಾನಮಾನ ಇದೆ ಎಂಬುದನ್ನು ಹೊರತುಪಡಿಸಿದರೆ, ʼಹಚ್ಚೇವುʼ ಕೂಡಾ ಅದರಂತೆಯೇ ಕನ್ನಡ ಜನಮನದಲ್ಲಿ ದಿವ್ಯ ಸ್ಥಾನ ಪಡೆದ ಹಾಡು. ಕುವೆಂಪು ಅವರಿಗೆ ಸಿಕ್ಕಿದ ಜನಪ್ರಿಯತೆ ಕರ್ಕಿಯವರಿಗೆ ಸಿಗದೇ ಹೋಗಿರಬಹುದು; ಆದರೆ ಅವರನ್ನು ಅಜರಾಮರಗೊಳಿಸಿದ ಹಾಡು ಅದು. ಅವರ ಉಳಿದ ಹಾಡುಗಳು ಯಾರಿಗೂ ನೆನಪಿದ್ದಂತಿಲ್ಲ.
1907ರಲ್ಲಿ ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ಹುಟ್ಟಿದ ಕರ್ಕಿಯವರು ಹುಟ್ಟಿ, ಶಿಕ್ಷಕರಾಗಿ ಜೀವನ ನಿರ್ವಹಿಸಿ, ನವೋದಯ ಕಾಲದ ಉದಾತ್ತ ಆದರ್ಶಗಳನ್ನು ತಮ್ಮ ಕಾವ್ಯದಲ್ಲಿ ಕಾಣಿಸಿದವರು. ತೂಗು ಬಾ ತೊಟ್ಟಿಲನು ತಾಯೇ, ಗಾಂಧಿಯವರ ಬಗ್ಗೆ ʼತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರʼ ಎಂಬ ಹಾಡುಗಳನ್ನು ನೀವು ಕೇಳಿದ್ದರೆ, ಅವು ಇವರದೇ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಾವೇರಿಯಲ್ಲಿ ಇಂದಿನಿಂದ ಮೂರು ದಿನಗಳ ನುಡಿ ಜಾತ್ರೆಯ ಸಂಭ್ರಮ