Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಅಖಂಡ ಭಾರತದ ಕಲ್ಪನೆ ಮರೆತ ನೆರೆನಾಡು: ಎಚ್‌ಎಸ್‌ವಿ

hsv haveri

ಹಾವೇರಿ: ನಮ್ಮ ರಾಜ್ಯದ ಪಕ್ಕದ ಪ್ರಾಂತ್ಯದವರು ಅಖಂಡ ಭಾರತದ ಕಲ್ಪನೆಯನ್ನೇ ಮರೆತವರಂತೆ ವರ್ತಿಸುತ್ತಿದ್ದಾರೆ. ಇದು ನಾಡಿಗೆ ಸಂಬಂಧಿಸಿದಂತೆ ನಾವು ಎದುರಿಸುತ್ತಿರುವ ಅತ್ಯಂತ ಮುಖ್ಯವಾದ ಮೊದಲ ಬಿಕ್ಕಟ್ಟು ಎಂದು ನಿಕಟಪೂರ್ವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಕವಿ ಎಚ್‌.ಎಸ್‌ ವೆಂಕಟೇಶಮೂರ್ತಿ ಹೇಳಿದರು.

ಇದನ್ನು ಇಲ್ಲಿ ಸೇರಿರುವ ಪ್ರಭುಶಕ್ತಿ ಮತ್ತು ಪ್ರಜಾಶಕ್ತಿಯ ಗಮನಕ್ಕೆ ತರಲು ಬಯಸುತ್ತೇನೆ. ಎರಡನೆಯ ಸಮಸ್ಯೆಯಾಗಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ಇದು ಕನ್ನಡಕ್ಕೆ ಬಹು ದೊಡ್ಡ ಕುತ್ತು. ಇದನ್ನು ಸರಿಪಡಿಸಿಕೊಳ್ಳಬೇಕು. ಈ ಮಹಾಸಭೆಯಲ್ಲಿ ರಾಜಕಾರಣದ ಕ್ಷಾತ್ರಶಕ್ತಿಯಿದೆ. ಸಾಹಿತ್ಯದ ಚಿಂತನದ್ರವ್ಯವಿದೆ. ಕನ್ನಡದ ಅಭಿಮಾನದ ಅಸ್ಮಿತೆಯಿದೆ. ಎರಡು ವರ್ಷ ಹಿಂದೆ ನಾಡು ನುಡಿಗೆ ಸಂಬಂಧಿಸಿದ ಅನೇಕ ಬಿಕ್ಕಟ್ಟುಗಳನ್ನು ಚರ್ಚೆ ಮಾಡಲಾಯಿತು. ಈ ಸಮ್ಮೇಳನದಲ್ಲೂ ಅದು ಮುಂದುವರಿಯುತ್ತಿದೆ ಎಂದು ಎಚ್‌ಎಸ್‌ವಿ ನುಡಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶೀಘ್ರದಲ್ಲೇ ಕನ್ನಡ ಸಮಗ್ರ ಭಾಷಾ ಕಾಯ್ದೆ ಅನುಷ್ಠಾನ: ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಶ್ರೇಷ್ಠವಾದ ಸಾಹಿತ್ಯ ಸೃಷ್ಟಿಯಾಗಿದೆ. ಹಿಂದೆ ಸಾಹಿತ್ಯ ಎಂದರೆ ಮಾಸ್ತಿ ಬೇಂದ್ರೆ ಕುವೆಂಪು ಕಾರಂತ ಎನ್ನುತ್ತಿದ್ದೆವು. ಈಗ ಅಂಥ ಅನೇಕ ಘನವಾದ ಲೇಖಕರು ಇದ್ದಾರೆ. ಅನೇಕ ಅಪರೂಪದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡು ಜಗತ್ತಿನಾದ್ಯಂತ ಕನ್ನಡದ ಬಗೆಗೆ ಗಮನ ಸೆಳೆದಿವೆ. ಪೆಂಗ್ವಿನ್‌ನಂಥ ಶ್ರೇಷ್ಠ ಸಂಸ್ಥೆ ಕೂಡ ಕನ್ನಡ ಪುಸ್ತಕಗಳನ್ನು ಪ್ರಕಟಿಸಲು ಇಷ್ಟಪಡುತ್ತಿದೆ. ಇತ್ತೀಚೆಗೆ ಬಂದ ಒಂದು ಕನ್ನಡದ ಸಿನಿಮಾ ಜಗತ್ತಿನ ಗಮನ ಸೆಳೆದು ಅಲ್ಲೋಲಕಲ್ಲೋಲ ಉಂಟುಮಾಡಿತು. ಇದನ್ನೆಲ್ಲ ನಾವು ಇಲ್ಲಿ ಅಭಿಮಾನದಿಂದ ಸ್ಮರಿಸಬೇಕು. ಇಲ್ಲಿ ಅಂಥ ಅಪೂರ್ವವಾದ ಕೃತಿಗಳ ಸಂಗಮ, ಅವುಗಳ ಬಗ್ಗೆ ಚರ್ಚೆಯಾಗಬೇಕು ಎಂದು ಎಚ್‌ಎಸ್‌ವಿ ಹೇಳಿದರು.

ಕಳೆದ ಎರಡು ವರ್ಷಗಳ ಕಾಲ ಕೊರೊನಾದಿಂದಾಗಿ ಹೊರಗೆ ಓಡಾಡಿ ಕನ್ನಡದ ಕೆಲಸ ಮಾಡಲಾಗಲಿಲ್ಲ. ಆದರೆ ಮನೆಯಲ್ಲೇ ಕುಳಿತು ʼಬುದ್ಧಚರಣʼ ಮಹಾಕಾವ್ಯವನ್ನು ಬರೆದಿದ್ದೇನೆ. ಅದನ್ನು ಇಂದು ಕನ್ನಡ ಓದುಗರಿಗೆ ಸಮರ್ಪಿಸುತ್ತಿದ್ದೇನೆ ಎಂದರು.

ವೇದಿಕೆಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ಮುಖ್ಯಮಂತ್ರಿ ಮಹೇಶ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮುಂತಾದವರಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಾಂವಿಧಾನಿಕ ಚೌಕಟ್ಟಿನಲ್ಲೇ ಕನ್ನಡ ನಾಡು, ನೆಲದ ರಕ್ಷಣೆ: ಬಿ.ಎಸ್‌. ಯಡಿಯೂರಪ್ಪ

Exit mobile version