ದೇವನಹಳ್ಳಿ: ಕರಗ ಹೊರುವ ವಿಚಾರವಾಗಿ ಮೂರು ಗುಂಪುಗಳ ನಡುವೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಬೂದಿಗೆರೆ ಶ್ರೀ ದ್ರೌಪದಮ್ಮ ದೇವಿ ಕರಗ ಮಹೋತ್ಸವವೇ (Karaga Festival) ರದ್ದಾಗಿದೆ. ಇದೀಗ ದ್ರೌಪಮ್ಮ ದೇಗುಲದ ಮುಂದೆ ಪೊಲೀಸರ ವ್ಯಾನ್ಗಳು ಹಾಗೂ ಬಂದೋಬಸ್ತ್ ಪಡೆಗಳು ನಿಲ್ಲುವಂತಾಗಿದೆ.
ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಕಾಮನ ಹುಣ್ಣಿಮೆಯಂದು ಪ್ರತಿ ವರ್ಷ ದ್ರೌಪದಿ ದೇವಿ ಕರಗ ಮಹೋತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಕರಗ ಹೊರುವ ವಿಚಾರವಾಗಿ ತಿಗಳ ಸಮುದಾಯದ ಮೂರು ಗುಂಪುಗಳ ನಡುವೆ ಕಿತ್ತಾಟ ಉಂಟಾಗಿತ್ತು. ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ಮೇ 27ರಂದು ವಿಚಾರಣೆ ನಡೆಯಲಿದೆ. ಆದರೆ ಶಾಸ್ತರದ ಪ್ರಕಾರ ಕರಗ ಮಾರ್ಚ್ 25ರಂದು ನಡೆಯಬೇಕಿತ್ತು. ಆದರೆ ಪ್ರಕರಣ ಇತ್ಯರ್ಥಗೊಳ್ಳದ ಕಾರಣ ಕರಗ ಆಚರಣೆಯೇ ರದ್ದಾಗಿದೆ.
ದಶಕಗಳಿಂದ ಇಲ್ಲಿ ಸಂಭ್ರಮ ಸಡಗರದಿಂದ ಶ್ರೀ ದ್ರೌಪದಮ್ಮ ಕರಗ ನಡೆಯುತ್ತಿತ್ತು. ಆದರೆ ಈ ಬಾರಿ ಕರಗ ನಡೆಯದೇ ಹೋಗಿರುವುದು ಭಕ್ತರ ಪಾಲಿಗೆ ಬೇಸರದ ವಿಷಯ ಎನಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ಇಂದಿನಿಂದ ಹೆಚ್ಚುವರಿ ವಿಶೇಷ ಬಸ್
ಕಾರವಾರ: ಶಿರಸಿಯಲ್ಲಿ ಮಾರ್ಚ್ 19ರಿಂದ (ಇಂದಿನಿಂದ) ಮಾ.27ರವರೆಗೆ ಜರುಗುವ ಶ್ರೀ ಮಾರಿಕಾಂಬಾ ದೇವಿ (Sri Marikamba Devi) ಜಾತ್ರೆಯ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ವಾ.ಕ.ರ.ಸಾ. ಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಹೆಚ್ಚುವರಿ ವಿಶೇಷ ಬಸ್‌ಗಳು ಕಾರ್ಯಾಚರಣೆ (Uttara Kannada News) ನಡೆಸಲಿವೆ.
ಇದನ್ನೂ ಓದಿ : BS Yediyurappa : ಹೊರನಾಡಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದಿಂದ ನವಚಂಡಿಕಾ ಯಾಗ
ಶಿರಸಿ ಹಳೆ ಬಸ್ ನಿಲ್ದಾಣದ ಸುತ್ತಮುತ್ತ ಜಾತ್ರಾ ಅಂಗಡಿ-ಮುಂಗಟ್ಟು ಹಾಕುವುದರಿಂದ ಬಸ್ ಸಂಚಾರಕ್ಕೆ ತೊಂದರೆಯಾಗಲಿದ್ದು, ಹಳೆ ಬಸ್ ನಿಲ್ದಾಣದ ಸಾರಿಗೆ ಕಾರ್ಯಾಚರಣೆಗಳನ್ನು ಹೊಸ ಬಸ್ ನಿಲ್ದಾಣದಿಂದ ಮಾಡಲಾಗುವುದು. ಶ್ರೀ ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತಾದಿಗಳಿಗೆ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲು ಹೆಚ್ಚುವರಿಯಾಗಿ ಶಿರಸಿಯಿಂದ ಹಾನಗಲ್, ಹಾವೇರಿ, ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ, ಯಲ್ಲಾಪುರ, ದಾಂಡೇಲಿ, ಅಂಕೋಲಾ, ಕಾರವಾರ ಮತ್ತು ಪ್ರಮುಖ ಊರುಗಳಿಗೆ ವಿಶೇಷ ಸಾರಿಗೆ ಸೌಲಭ್ಯವಿದೆ.
ಜಾತ್ರೆಯ ದಿನಗಳಲ್ಲಿ ಹಾನಗಲ್, ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಸಾರಿಗೆ ಬಸ್‌ಗಳು ಶಿರಸಿ ಹೊಸ ಬಸ್ ನಿಲ್ದಾಣದಿಂದ ಅಶ್ವಿನಿ ಸರ್ಕಲ್- ಮಾಸ್ತಿಕಟ್ಟಾ ಸರ್ಕಲ್ -ಎಪಿಎಂಸಿ- ಶಿರಸಿ ಘಟಕ-ವಿವೇಕಾನಂದ ಕ್ರಾಸ-ಚಿಪಗಿ ಸರ್ಕಲ್ ಮಾರ್ಗವಾಗಿ ಸಂಚರಿಸಲಿವೆ. ಶಿರಸಿ ಮಾರಿಕಾಂಬಾ ದೇವಸ್ಥಾನದ ಮುಂದಿನ ರಸ್ತೆಯನ್ನು ಬಸ್ ಸಂಚಾರಕ್ಕೆ ನಿಷೇಧಿಸಿರುವುದರಿಂದ ಬನವಾಸಿ ಮಾರ್ಗದ ಸಾರಿಗೆಗಳನ್ನು ರಾಮನಬೈಲ್ ಕ್ರಾಸ್‌ನಿಂದ ಕಾರ್ಯಾಚರಣೆ ನಡೆಸಲಾಗುವುದು.
ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಬಸ್‌ಗಳು ಶಿರಸಿ ಹೊಸ ಬಸ್ ನಿಲ್ದಾಣದಿಂದ ಪದ್ಮಶ್ರೀ ಸರ್ಕಲ್, ಹನುಮಾನ ವ್ಯಾಯಾಮ ಶಾಲೆ, ಐದು ರಸ್ತೆ ಸರ್ಕಲ್ ಮುಖಾಂತರ ಸಂಚರಿಸುತ್ತವೆ. ಪ್ರಯಾಣಿಕರು ಶಿರಸಿ ಹೊಸ ಬಸ್ ನಿಲ್ದಾಣ ಅಥವಾ ಹನುಮಾನ ವ್ಯಾಯಾಮ ಶಾಲೆ ಆವರಣ ಬಸ್ ತಂಗುದಾಣದಿಂದ ಪ್ರಯಾಣಿಸಬಹುದಾಗಿದೆ. ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಭಾಗದಿಂದ ಶಿರಸಿಗೆ ಬರುವ ಪ್ರಯಾಣಿಕರು ರಾಯಪ್ಪಾ ಹುಲೇಕಲ್ ಶಾಲಾ ತಂಗುದಾಣಕ್ಕೆ ಅಥವಾ ಹೊಸ ಬಸ್ ನಿಲ್ದಾಣದಲ್ಲಿ ಇಳಿಯಬಹುದಾಗಿದೆ.
ಅಶ್ವಿನಿ ವೃತ್ತ, ರಾಮನಬೈಲ್ ಕ್ರಾಸ್, ಎಪಿಎಂಸಿ ಕ್ರಾಸ್ (ಹುಬ್ಬಳ್ಳಿ ರಸ್ತೆ) ಹನುಮಾನ ವ್ಯಾಯಾಮ ಶಾಲೆ ಆವರಣ ಮತ್ತು ರಾಯಪ್ಪಾ ಹುಲೇಕಲ್ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ತಂದುದಾಣಗಳನ್ನು ನಿರ್ಮಿಸಲಾಗಿದೆ. ಈ ವ್ಯವಸ್ಥೆಯು ಹಳೆ ಬಸ್ ನಿಲ್ದಾಣದ ಜಾಗವನ್ನು ಖುಲ್ಲಾಪಡಿಸುವವರೆಗೆ ಜಾರಿಯಲ್ಲಿರುತ್ತದೆ.
ಸಾರಿಗೆ ವ್ಯವಸ್ಥೆಗಳ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760991725, 7760991702, 7760991713, 9980430323, 7795984168 ಮತ್ತು 08344-229952 ನ್ನು ಸಂಪರ್ಕಿಸಬಹುದಾಗಿದೆ ಎಂದು ಶಿರಸಿ ಉಪ ವಿಭಾಗದ ವಾ.ಕ.ರ.ಸಾ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ