ಬೆಂಗಳೂರು: ವಿಧಾನ ಮಂಡಲದ ಮೂರನೇ ದಿನದ ಕಲಾಪ (Karnataka Assembly Live) ಗದ್ದಲದಲ್ಲೇ ಮುಗಿದಿದ್ದು, ನಾಲ್ಕನೇ ದಿನವೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಪ್ರತಿಪಕ್ಷಗಳು (Opposition parties) ಮುಂದಾಗಿವೆ. ವಾಲ್ಮೀಕಿ ನಿಗಮ ಹಗರಣದ (Valmiki Corporation Scam) ಕುರಿತ ವಿಪಕ್ಷಗಳ ಆರೋಪಗಳಿಗೆ ನಿನ್ನೆ ಉತ್ತರ ನೀಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಆರಂಭಿಸಿದ್ದು, ಇಂದು ಕೂಡ ಮುಂದುವರಿಸಲಿದ್ದಾರೆ.
ನಿನ್ನೆ ಸಿಎಂ ವಿಧಾನಸಭೆ (Vidhan Sabha) ಕಲಾಪದಲ್ಲಿ ಉತ್ತರ ನೀಡಲು ಆರಂಭಿಸುತ್ತಿದ್ದಂತೆ ಆಕ್ಷೇಪ ತೆಗೆದಿದ್ದ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲ ಆರಂಭಿಸಿದ್ದರು. ವಾಲ್ಮಿಕಿ ನಿಗಮದ ಹಗರಣ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಎಂಬವರ ಡೆತ್ ನೋಟ್ ಓದುವಾಗ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನೇ ಬಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ (R Ashok) ಆರೋಪಿಸಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸದನದ ಬಾವಿಗೆ ಇಳಿದ ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡುವಾಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿರುವ ಹಿನ್ನೆಲೆಯಲ್ಲಿಯ ಸ್ಪೀಕರ್ ಯುಟಿ ಖಾದರ್ (Speaker UT Khader) ಸಂಧಾನ ಸಭೆ ಕರೆದರು. ಆಡಳಿತ ಪಕ್ಷದ ಕಡೆಯಿಂದ ಸಿದ್ದರಾಮಯ್ಯ, ಎಚ್ ಕೆ ಪಾಟೀಲ್, ಜಾರ್ಜ್ ಹಾಗೂ ವಿಪಕ್ಷಗಳಿಂದ ಆರ್ ಆಶೋಕ್, ವಿಜೇಯೇಂದ್ರ, ಸುರೇಶ್ ಬಾಬು ಇದ್ದರು. ಸಂಧಾನ ಸಭೆ ನಡೆಸಿದ ಬಳಿಕವೂ ವಿಪಕ್ಷಗಳ ಸದಸ್ಯರು ತಮ್ಮ ಹೋರಾಟ ಮುಂದುವರಿಸಿದ ಕಾರಣ ಕಲಾಪ ಬಹುತೇಕ ಗದ್ದಲದಲ್ಲಿಯೇ ಅಂತ್ಯಗೊಂಡಿತು.
ನಿಯಮ 69ರ ಅಡಿಯಲ್ಲಿ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮ ಕುರಿತಾದ ಚರ್ಚೆಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ದರು. ನಿಮ್ಮಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಇದಕ್ಕೂ ಹಿಂದಿನ ದಿನ ಮಾತನಾಡಿದ್ದ ಪ್ರತಿಪಕ್ಷ ನಾಯಕ ಅಶೋಕ್, ಸರ್ಕಾರದ ತಪ್ಪು ನಡೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಲು ನಿಗಮದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದಿದ್ದ ಅಶೋಕ್, 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಣ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೇಗೆ ವಿನಿಯೋಗವಾಗಬೇಕಿತ್ತು, ಹೇಗೆ ಅಕ್ರಮವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಈ ನಡುವೆ, ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲು ಕಡ್ಡಾಯ ವಿಧೇಯಕದ ಕುರಿತ ಚರ್ಚೆಯೂ ಭುಗಿಲೆದ್ದಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಇನ್ನೂ ಪ್ರತಿಪಕ್ಷ ಅವಕಾಶ ಕೇಳಿಲ್ಲ ಹಾಗೂ ಸರಕಾರವೂ ಅದನ್ನು ಪ್ರಸ್ತಾಪಿಸಿಲ್ಲ. ಆದರೆ ವಾಲ್ಮೀಕಿ, ಮುಡಾ ಹಗರಣಗಳಿಂದ ಗಮನವನ್ನು ಬೇರೆಡೆಗೆ ಹರಿಸಲು ಸಿದ್ದರಾಮಯ್ಯ ಸರಕಾರ ಈ ಭಾವನಾತ್ಮಕ ವಿಷಯ ಎತ್ತಿಹಾಕಿದೆ ಎಂಬ ಆರೋಪ ಪ್ರತಿಪಕ್ಷಗಳದ್ದಾಗಿದೆ. ಪ್ರತಿಪಕ್ಷಗಳ ಆ ಆರೋಪದ ಬಿಸಿ ಕಲಾಪದಲ್ಲೂ ಪ್ರತಿಧ್ವನಿಸಬಹುದು.
ಇದಕ್ಕೂ ಮುನ್ನ, ಜಿಟಿ ಮಾಲ್‌ನಲ್ಲಿ ನಡೆದ ರೈತನಿಗೆ ಅವಮಾನ ಸಂಗತಿಯೂ ಸದನದಲ್ಲಿ ಪ್ರಸ್ತಾವವಾಗಿತ್ತು. ಈ ಘಟನೆಯ ಕುರಿತು ಸರ್ಕಾರದ ನಿಲುವು ಏನು ಎಂದು ಸ್ಪೀಕರ್ ಪ್ರಶ್ನಿಸಿದ್ದರು. ಮಾಲ್ ಅನ್ನು ಏಳು ದಿನ ಮುಚ್ಚಿಸಲಾಗುವುದು ಎಂದು ನಗರಾಭೀವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದರು. ಅದರಂತೆ ಇಂದಿನಿಂದ ಜಿಟಿ ಮಾಲ್ ಮುಚ್ಚಿ ಸೀಲ್ ಮಾಡಲಾಗಿದೆ.