ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Corporation Scam) ಕುರಿತು ನಡೆಯುತ್ತಿರುವ ಚರ್ಚೆಯ ವೇಳೆ ವಿಧಾನಸಭೆ ಕಲಾಪ (Karnataka Assembly Live) ಗದ್ದಲದ ಗೂಡಾಯಿತು. ಸಿಎಂ ಸಿದ್ದರಾಮಯ್ಯ (CM Siddaramaiah) ಗೈರುಹಾಜರಿಯನ್ನು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ (Ashwath narayan) ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಅವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ನಡುವೆ ಮಾತಿನ ಚಕಮಕಿ ನಡೆದು ಗೊಂದಲ ಸೃಷ್ಟಿಯಾಯಿತು. ಸ್ಪೀಕರ್ ಯು.ಟಿ ಖಾದರ್ (Speaker UT Khader) ಸದನವನ್ನು ಮುಂದೂಡಿದರು.
ವಾಲ್ಮೀಕಿ ನಿಗಮದ ಹಗರಣದ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಇಂದು ಚರ್ಚೆಯನ್ನು ಮುಂದುವರಿಸಿದರು. ಆದರೆ ಈ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಗೈರುಹಾಜರಾಗಿದ್ದರು. ಇದಕ್ಕೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ʼನೇರವಾಗಿ ಇದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರʼ ಎಂದ ಅಶ್ವಥ್ ನಾರಾಯಣ್, ಕೂಡಲೇ ಅವರನ್ನು ಕರೆಸಿ ಎಂದು ಆಗ್ರಹಿಸಿದರು.
ಈ ವೇಳೆ ಸದನದಲ್ಲಿ ಎದ್ದು ನಿಂತ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದರು. ಸಚಿವ ಜಮೀರ್ ಅಹ್ಮದ್ ಖಾನ್, ಕೆಜೆ ಜಾರ್ಜ್ ಕೂಡ ಅವರಿಗೆ ಸಾಥ್ ನೀಡಿದರು. ʼಸಿಎಂಗೆ ಗೌರವ ಕೊಡೋದನ್ನು ಕಲಿಯಿರಿʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹಾಗೂ ಅಶ್ವಥ್ ನಾರಾಯಣ್ ನಡುವೆ ಮಾತಿಕ ಚಕಮಕಿ ನಡೆಯಿತು. ರೊಚ್ಚಿಗೆದ್ದ ಬಿಜೆಪಿ ಶಾಸಕರು ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ, ವಿಪಕ್ಷ ಶಾಸಕರ ನಡುವೆ ವಾಗ್ವಾದ ಹೆಚ್ಚಿ ಗೊಂದಲ ಮೂಡಿದ ಕಾರಣ ವಿಧಾನಸಭೆ ಕಲಾಪವನ್ನು ಸ್ಪೀಕರ್ ಹತ್ತು ನಿಮಿಷ ಮುಂದೂಡಿದರು.
ದದ್ದಲ್ ಜೊತೆಗೆ ಸ್ಪೀಕರ್ ಸಭೆ
ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಇಂದು ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಅವರು ಸಿಎಂ ಸಿದ್ದರಾಮಯ್ಯ, ಸಭಾಧ್ಯಕ್ಷ ಯುಟಿ ಖಾದರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಕೂಡ ಜೊತೆಗಿದ್ದರು. ಇದಕ್ಕೂ ಮುನ್ನ ದದ್ದಲ್, ಗೃಹ ಸಚಿವ ಪರಮೇಶ್ವರ್ ಜೊತೆಗೆ ಮಾತುಕತೆ ನಡೆಸಿದರು. ಇಂದು ಮುಂಜಾನೆ ದದ್ದಲ್ ಅವರಿಗೆ ಇಡಿ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದೆ ಎನ್ನಲಾಗಿದ್ದು, ತನಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ದದ್ದಲ್ ಹೇಳಿದ್ದಾರೆ. ಇದೀಗ ಸ್ಪೀಕರ್, ಸಿಎಂ ಜೊತೆಗಿನ ಅವರ ಮಾತುಕತೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Karnataka Assembly Live: ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಸೇಫ್ ಆದ ಬಸವನಗೌಡ ದದ್ದಲ್! ವಿಧಾನ ಮಂಡಲ ಕಲಾಪ ಲೈವ್ ಇಲ್ಲಿದೆ