ಬೆಂಗಳೂರು: ಪಂಚೆ ಧರಿಸಿ ಬಂದ ಹಾವೇರಿಯ ರೈತರಿಗೆ ಒಳಬಿಡದ ರಾಜಧಾನಿಯ ಜಿಟಿ ವರ್ಲ್ಡ್ ಮಾಲ್ (GT World Mall) ಮೇಲೆ ಶಿಸ್ತು ಕ್ರಮವಾಗಿ ಮಾಲ್ ಅನ್ನು 7 ದಿನಗಳ ಕಾಲ ಮುಚ್ಚಲು ಸೂಚನೆ ನೀಡುವುದಾಗಿ ವಿಧಾನಸಭೆ ಕಲಾಪದಲ್ಲಿ (Karnataka Assembly Live) ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಘೋಷಿಸಿದ್ದಾರೆ.
ಇಂದು ಆರಂಭವಾದ ಮೂರನೇ ದಿನದ ವಿಧಾನಸಭೆ ಕಲಾಪ (Karnataka Assembly Live) ಆರಂಭದಲ್ಲೇ ಈ ವಿಷಯ ಪ್ರಸ್ತಾಪವಾಯಿತು. ಹಲವರು ಸದಸ್ಯರು ರೈತರಿಗೆ ಅವಮಾನ ಆದ ವಿಷಯವನ್ನು ಪ್ರಸ್ತಾಪಿಸಿದರು. ವಿಸ್ತಾರ ನ್ಯೂಸ್ ನಿನ್ನೆ ಇಡೀ ದಿನ ಈ ಘಟನೆಯನ್ನು ಪ್ರಸಾರ ಮಾಡಿದ್ದಲ್ಲದೆ, ರೈತರನ್ನು ಮರಳಿ ಜಿಟಿ ಮಾಲ್‌ಗೆ ಕರೆದೊಯ್ದು ಪ್ರವೇಶ ಕೊಡಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಹಾಗೂ ರೈತಪರ ಸಂಘಟನೆಗಳು ಈ ವಿಚಾರದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಕೈಜೋಡಿಸಿದ್ದವು. ನಂತರ ಸಚಿವ ಸಂತೋಷ್ ಲಾಡ್ ಕೂಡ ಈ ವಿಚಾರದಲ್ಲಿ ಮಾಲ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಧಾನಸಭೆ ಕಲಾಪದ ಆರಂಭದ ಹೊತ್ತಿಗೆ ಸ್ವತಃ ಸ್ಪೀಕರ್ ಯು.ಟಿ ಖಾದರ್ ಅವರು ಈ ವಿಚಾರ ಎತ್ತಿದರು. ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚಿಸಿದರು. ಸದಸ್ಯರು ಪಕ್ಷಾತೀತವಾಗಿ ಮಾಲ್ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. 7 ದಿನಗಳ ವರೆಗೆ ಬಂದ್ ಮಾಡಿಸಬಹುದು. ಎಚ್ಚರಿಕೆ ನೀಡಿ ಏಳು ದಿನಗಳ ಕಾಲ ಮಾಲ್ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿಕೆ ನೀಡಿ, ಬೆಂಗಳೂರಿನ ಕ್ಲಬ್‌ಗಳ ಒಳಗೆ ಕೂಡ ಸಾಕಷ್ಟು ಷರತ್ತುಗಳಿವೆ ಎಂದು ಪ್ರಸ್ತಾವಿಸಿದರು. ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್‌ನಲ್ಲಿ ಚಪ್ಪಲಿ ಹಾಕಿಕೊಂಡು ಹೋಗುವ ಹಾಗಿಲ್ಲ. ಟೀ ಶರ್ಟ್ ಕೂಡ ಹಾಕಿಕೊಂಡು ಹೋಗುವ ಹಾಗಿಲ್ಲ. ಅವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ಅಂತಹ ಕ್ಲಬ್‌ಗೆ ನೀವು ಯಾಕೆ ಹೋಗ್ತೀರಾ ಅಂತ ಸುರೇಶ್ ಕುಮಾರ್ ಅವರು ಅಶೋಕ್ ಪಟ್ಟಣ್ ಕಾಲೆಳೆದರು.
ಏನಿದು ಪ್ರಕರಣ?
ಮಂಗಳವಾರ ಸಂಜೆ ಘಟನೆ ನಡೆದಿತ್ತು. ಹಾವೇರಿಯ ರೈತ ಫಕೀರಪ್ಪ ಅವರು ಪಂಚೆ ಧರಿಸಿ, ಮಗನ ಸಮೇತ ಸಿನಿಮಾ ನೋಡಲು ಬಂದಿದ್ದರು. ʼಪಂಚೆ ಧರಿಸಿ ಮಾಲ್ ಒಳಗೆ ಬರುವಂತಿಲ್ಲʼ ಎಂದು ಸೆಕ್ಯುರಿಟಿ ತಡೆದಿದ್ದರು. ಇದನ್ನು ರೈತರ ಮಗ ಪ್ರಶ್ನಿಸಿದ್ದರು. ನಂತರ ʼವಿಸ್ತಾರ ನ್ಯೂಸ್ʼ ಈ ವಿಚಾರವನ್ನು ಎತ್ತಿಕೊಂಡು ನಿನ್ನೆ ಇಡೀ ದಿನ ಕವರೇಜ್ ಮಾಡಿತ್ತು. ಪಂಚೆಯ ಹೆಸರಿನಲ್ಲಿ ರೈತರಿಗೆ ಆಗುತ್ತಿರುವ ಅವಮಾನದ ವಿರುದ್ಧ ಸಿಡಿದೆದ್ದು ಪ್ರಶ್ನೆ ಮಾಡಿತ್ತು.
ಬಳಿಕ ಇದನ್ನು ಕನ್ನಡ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕೈಗೆತ್ತಿಕೊಂಡಿದ್ದವು. ಮಾಲ್ ಮುಂದೆ ತೀವ್ರ ಹೋರಾಟ ಹಾಗೂ ಪ್ರತಿಭಟನೆ ನಡೆದಿತ್ತು. ʼವಿಸ್ತಾರ ನ್ಯೂಸ್ʼ ಈ ಬಗ್ಗೆ ಕಾರ್ಯಕ್ರಮ ಮಾಡಿದ್ದಲ್ಲದೆ, ಅದೇ ರೈತರನ್ನು ಕರೆದೊಯ್ದು ಮಾಲ್‌ಗೆ ಪ್ರವೇಶ ಕೊಡಿಸಿತ್ತು. ಈ ಸಂದರ್ಭದಲ್ಲಿ ಮಾಲ್‌ನ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ತಮ್ಮ ಸಿಬ್ಬಂದಿಯಿಂದ ಆದ ಅವಮಾನಕ್ಕೆ ಕ್ಷಮೆ ಕೇಳಿದ್ದರು. ರೈತ ಫಕೀರಪ್ಪಗೆ ಹಾರ ಹಾಕಿ ಸನ್ಮಾನ ಮಾಡಿದ್ದರು. ರೈತ- ಕನ್ನಡ ಸಂಘಟನೆಗಳ ಕಾರ್ಯಕರ್ತರು ಪಂಚೆ ಧರಿಸಿ ಮಾಲ್‌ಗೆ ಪ್ರವೇಶಿಸಿದ್ದರು.
ರೈತರಿಗೆ ಪ್ರವೇಶ ನಿರಾಕರಣೆ ಮಾಡಿದ ಜಿಟಿ ಮಾಲ್ ಕ್ರಮವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಖಂಡಿಸಿದ್ದು, ಈ ವಿಚಾರದಲ್ಲಿ ಸೂಕ್ತ ನಿಯಮ ರೂಪಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ. ʼನಾವು ಇದನ್ನ ಖಂಡಿಸುತ್ತೇವೆ. ಕೆಲ ವರ್ಷಗಳ ಹಿಂದೆ ಪಂಚೆ ಕಟ್ಟಿಕೊಂಡು ಹೋದರೆ ಕ್ಲಬ್‌ಗಳಲ್ಲಿ ಬಿಡುತ್ತಿರಲಿಲ್ಲ. ಶೂ ಇಲ್ಲದೇ ಪಂಚೆ ಹಾಕಿಕೊಂಡು ಕ್ಲಬ್‌ಗೆ ಹೋಗಬಹುದು ಅಂತ ನಮ್ಮ ಸರ್ಕಾರ ನಿರ್ಧಾರ ಮಾಡಿತ್ತು. ಇದನ್ನು ನಾವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆವು. ಈಗಲೂ ಇದಕ್ಕೆ ಸರ್ಕಾರ ನಿಯಮ ತರಬೇಕುʼ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: GT World Mall: ಅನ್ನದಾತನಿಗೆ ಅವಮಾನ ಮಾಡಿದ ಜಿಟಿ ಮಾಲ್ ಮುಂದೆ ಪಂಚೆ ಉಟ್ಟು ಪ್ರತಿಭಟನೆ, ಕ್ಷಮೆ ಕೇಳಿದ ಮಾಲೀಕ