ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ವಿಧಾನಸಭೆಯಲ್ಲಿ (Karnataka Assembly Live) ನಡೆದಿರುವ ಚರ್ಚೆಯ ನಡುವೆ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna Case) ಪ್ರಕರಣ ಉಲ್ಲೇಖಗೊಂಡು ಕೆಲ ಕಾಲ ಗದ್ದಲ ಎಬ್ಬಿಸಿತು. ಆಡಳಿತ ಪಕ್ಷದ ಶಾಸಕರ ಮಾತಿನಿಂದ ರೊಚ್ಚಿಗೆದ್ದ ರೇವಣ್ಣ ಅವರು, ಪ್ರಕರಣ ದಾಖಲಿಸಿಕೊಂಡ ಡಿಜಿ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ವಾಲ್ಮೀಕಿ ನಿಗಮ ಚರ್ಚೆಯ ಸಂದರ್ಭದಲ್ಲಿ ಆರೋಪಿತರ ಜಾಮೀನು ವಿಷಯವನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರು ಉಲ್ಲೇಖಿಸಿದರು. ʼವಾಲ್ಮೀಕಿ ಹಗರಣದ ಪ್ರಮುಖ ಆರೋಪಿಗಳು ಇನ್ನು ಆರಾಮಾಗಿ ಓಡಾಡಿಕೊಂಡಿದ್ದಾರೆ. ಆದರೆ ರೇವಣ್ಣ ಅವರ ಪ್ರಕರಣದಲ್ಲಿ ಜಾಮೀನಿಗಾಗಿ ಅವರು ಎಷ್ಟೊಂದು ಒದ್ದಾಡಬೇಕಾಯಿತುʼ ಎಂದು ಹೇಳಿದರು.
ಆಗ ಮಧ್ಯಪ್ರವೇಶ ಮಾಡಿದ ಶಾಸಕ ರಿಜ್ವಾನ್, ʼರೇವಣ್ಣ ಹಾಗೂ ವಾಲ್ಮೀಕಿ ನಿಗಮದ ಪ್ರಕರಣ ತುಲನೆ ಮಾಡೋದು ಸರಿಯಲ್ಲ. ರೇವಣ್ಣ ಪ್ರಕರಣದಲ್ಲಿ ರಾಜ್ಯದ ಹೆಣ್ಣು ಮಕ್ಕಳ ಮಾನಹರಣವಾಗಿದೆ. ಹೆಣ್ಣು ಮಕ್ಕಳು ತಲೆ ತಗ್ಗಿಸುವಂತಾಗಿದೆ. ಹಣ ವಾಪಸ್ ಬರಬಹುದು, ಆದರೆ ಮಾನ ಮರಳಿ ಬರುವುದಿಲ್ಲʼ ಎಂದು ರಿಜ್ವಾನ್ ಟೀಕಿಸಿದರು.
ಈ ವೇಳೆ ಎದ್ದು ನಿಂತ ಶಾಸಕ ರೇವಣ್ಣ, ʼನನ್ನ ಹೆಸರು ಹೇಳಿದ್ದಾರೆ. ಆದ್ದರಿಂದ ನಾನು ಮಾತಾಡಬೇಕು. ನಾನು ತಪ್ಪು ಮಾಡಿದ್ರೆ ನನ್ನ ಗಲ್ಲಿಗೆ ಹಾಕಲಿ. ನನ್ನ ಮಗ ತಪ್ಪು ಮಾಡಿದ್ದರೆ ಅವನನ್ನು ಗಲ್ಲಿಗೆ ಹಾಕಲಿ. ಆದರೆ ನಾನು 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಯಾವುದೋ ಹೆಣ್ಣುಮಗಳನ್ನು ಕರೆತಂದು ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಸ್ವತಃ ಡಿಜಿ ಮುಂದೆ ಕುಳಿತುಕೊಂಡು ಕೇಸ್ ಬರೆದುಕೊಳ್ಳುತ್ತಾನೆ. ಡಿಜಿ ಆಗಲು ಆತ ನಾಲಾಯಕ್ʼ ಎಂದು ಕಿಡಿ ಕಾರಿದರು. ಈ ಹಂತದಲ್ಲಿ ರೇವಣ್ಣ ಭಾವುಕರಾದರು.
ನಂತರ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ʼರೇವಣ್ಣ ಅಧಿಕಾರಿಗಳ ಮೇಲೆ ಆರೋಪ ಮಾಡಿದ್ದಾರೆ. ಅವರಿಗೆ ಅನ್ಯಾಯ ಆಗಿದ್ರೆ ನೋಟೀಸ್ ಕೊಟ್ಟು ಚರ್ಚೆ ಮಾಡಲಿʼ ಎಂದು ಹೇಳಿದರು. ಇದಕ್ಕೆ ರೇವಣ್ಣ ಸಮ್ಮತಿಸಿದರು.
ಡಿಸಿಎಂ- ಅಶ್ವಥ್ ನಾರಾಯಣ ಚಕಮಕಿ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ನಡೆಯುತ್ತಿರುವ ಚರ್ಚೆಯ ವೇಳೆ ವಿಧಾನಸಭೆ ಗದ್ದಲದ ಗೂಡಾಯಿತು. ಸಿಎಂ ಗೈರುಹಾಜರಿಯನ್ನು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಅವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದು ಗೊಂದಲ ಸೃಷ್ಟಿಯಾಯಿತು. ಸ್ಪೀಕರ್ ಯು.ಟಿ ಖಾದರ್ ಸದನವನ್ನು ಮುಂದೂಡಿದರು.
ವಾಲ್ಮೀಕಿ ನಿಗಮದ ಹಗರಣದ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಇಂದು ಚರ್ಚೆಯನ್ನು ಮುಂದುವರಿಸಿದರು. ಆದರೆ ಈ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಗೈರುಹಾಜರಾಗಿದ್ದರು. ಇದಕ್ಕೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ʼನೇರವಾಗಿ ಇದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ಹಣಕಾಸು ಸಚಿವರಾಗಿರೋ ಸಿಎಂ ಅವರ ಮೇಲೆ ಇದರಲ್ಲಿ ನೇರವಾಗಿ ಗಂಭೀರ ಆರೋಪ ಇದೆʼ ಎಂದ ಅಶ್ವಥ್ ನಾರಾಯಣ್, ಕೂಡಲೇ ಅವರನ್ನು ಕರೆಸಿ ಎಂದು ಆಗ್ರಹಿಸಿದರು.
ಈ ವೇಳೆ ಸದನದಲ್ಲಿ ಎದ್ದು ನಿಂತ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದರು. ಸಚಿವ ಜಮೀರ್ ಅಹ್ಮದ್ ಖಾನ್, ಕೆಜೆ ಜಾರ್ಜ್ ಕೂಡ ಅವರಿಗೆ ಸಾಥ್ ನೀಡಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಶಾಸಕರು ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲರೂ ಎದ್ದು ನಿಂತು ʼನೀವೇನು ಎಲ್ಲರಿಗೂ ಗೊತ್ತಿದೆʼ ಎಂದು ಕಿಡಿಕಾರಿದರು. ಆಡಳಿತ, ವಿಪಕ್ಷ ಶಾಸಕರ ನಡುವೆ ವಾಗ್ವಾದ ಹೆಚ್ಚಿ ಗೊಂದಲ ಮೂಡಿದ ಕಾರಣ ವಿಧಾನಸಭೆ ಕಲಾಪವನ್ನು ಸ್ಪೀಕರ್ ಹತ್ತು ನಿಮಿಷ ಮುಂದೂಡಿದರು.