Site icon Vistara News

Karnataka Assembly Live: ವಿಧಾನಸಭೆಯಲ್ಲಿ ಶಾಸಕರಿಗೆ ಮಧ್ಯಾಹ್ನ ಮಲಗಲು ವ್ಯವಸ್ಥೆ ಮಾಡಿಸಿದ ಸ್ಪೀಕರ್!

Assembly monsoon session UT Khader karnataka assembly live

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ (Vidhan sabha Session) ಶಾಸಕರ ಹಾಜರಾತಿ ಕೊರತೆ ತುಂಬುವ ವಿಶಿಷ್ಟ ಪ್ರಯತ್ನವೊಂದನ್ನು ಸ್ಪೀಕರ್‌ ಯ.ಟಿ ಖಾದರ್‌ (Speaker UT Khader) ಕೈಗೊಂಡಿದ್ದಾರೆ. ಮಧ್ಯಾಹ್ನ ಭೋಜನದ ಬಳಿಕ ಶಾಸಕರು ವಿಶ್ರಾಂತಿ ಪಡೆಯಲು ಸುಖಾಸನಗಳನ್ನು (ರಿಕ್ಲೈನರ್ಸ್)‌ ಹಾಕಿಸಿದ್ದು, ಇಲ್ಲಿ ಶಾಸಕರು ವಿಶ್ರಾಂತಿ ಪಡೆಯಬಹುದಾಗಿದೆ. ಈ ವಿಚಾರವನ್ನು ಸ್ಪೀಕರ್‌ ಇಂದು ಕಲಾಪದಲ್ಲಿ (karnataka assembly live) ತಿಳಿಸಿದರು.

ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಲೇ ಸ್ಪೀಕರ್‌ ಈ ವಿಚಾರವನ್ನು ಪ್ರಸ್ತಾವಿಸಿದರು. ಹಾಜರಾತಿಯ ಕೊರತೆಯ ಬಗ್ಗೆ ಉಲ್ಲೇಖಿಸಿದರು. ಹಾಜರಾತಿ ಹೆಚ್ಚಿಸಲು ತಾವು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. “ಶಾಸಕರು ಬೆಳಗ್ಗೆ ಬೇಗ ಬರಲಿ ಅನ್ನುವ ಉದ್ದೇಶದಿಂದ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಿಸಿದೆ. ಆಮೇಲೆ ಮಧ್ಯಾಹ್ನ ಊಟಕ್ಕಾಗಿ ದೂರ ಹೋಗಿ ಬರುವುದಕ್ಕೆ ತಡವಾಗುತ್ತದೆ ಎಂಬ ಕಾರಣಕ್ಕಾಗಿ ಉತ್ತಮವಾದ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಕೆಲವರು ಊಟ ಚೆನ್ನಾಗಿತ್ತು, ಶಾಸಕರ ಭವನಕ್ಕೆ ಹೋಗಿ ನಿದ್ದೆ ಮಾಡಿ ಬರುತ್ತೇನೆ ಎಂದವನು ಬಳಿಕ ಬರುವುದೇ ಇಲ್ಲ. ಇದನ್ನು ತಡೆಯಲು ಇಲ್ಲೇ ಸುಖಾಸನಗಳನ್ನು (ರಿಕ್ಲೈನರ್ಸ್)‌ ಹಾಕಿಸಿದ್ದೇನೆ. ನಿದ್ರೆ ಬಂದರೆ ಇಲ್ಲೇ ಮಾಡಿ. ದೂರ ಹೋಗಬೇಡಿ. ನಿಮ್ಮ ಅಗತ್ಯ ಬಿದ್ದರೆ ಕೂಡಲೇ ಕರೆಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ” ಎಂದು ಸ್ಪೀಕರ್‌ ವಿವರಿಸಿದರು.

“ಸದ್ಯ ಪೈಲಟ್‌ ಪ್ರಾಜೆಕ್ಟ್‌ ಆಗಿ ಇದನ್ನು ಅಳವಡಿಸಿದ್ದೇವೆ. ಪರಿಣಾಮ ನೋಡಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಿ. ಸಕಾರಾತ್ಮಕ ಅಭಿಪ್ರಾಯ ಬಂದರೆ ಮುಂದಿನ ಅಧಿವೇಶನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುತ್ತೇವೆ” ಎಂದು ಖಾದರ್‌ ತಿಳಿಸಿದರು. ಸ್ಪೀಕರ್‌ ಕ್ರಮಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ʼಇನ್ನೂ ಎರಡು ವರ್ಷದಲ್ಲಿ ಏನೇನು ಮಾಡಿಸ್ತೀರೋ ನೀವುʼ ಎಂಬ ಉದ್ಗಾರವೂ ಶಾಸಕರ ಕಡೆಯಿಂದ ಕೇಳಿಬಂತು.

ʼಲಾಂಜ್‌ನಲ್ಲಿ ಶಿಸ್ತು ಕಾಪಾಡಿ. ಪಿಎಗಳನ್ನು ಮತ್ತಿತರರನ್ನು ಕರೆದುಕೊಂಡು ಸ್ಪೀಕರ್‌ ಕೊಠಡಿಗೆ ನುಗ್ಗಬೇಡಿ. ಮಾರ್ಷಲ್‌ಗಳ ಜೊತೆಗೆ ಗುದ್ದಾಡಬೇಡಿ. ಇದರಿಂದ ನಿಮ್ಮ ಘನತೆ ಹೆಚ್ಚುವುದಿಲ್ಲ. ಅವರು ನಮ್ಮ ಆದೇಶ ಪಾಲಿಸುತ್ತಾರೆ ಅಷ್ಟೇʼʼ ಎಂದು ಸ್ಪೀಕರ್‌ ಶಾಸಕರಿಗೆ ಕಿವಿಮಾತು ಹೇಳಿದರು.

ಕಲಾಪ ಮುಂದೂಡಿಕೆ

ಇಂದು ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಶುರುವಾಯಿತು. ವಾಲ್ಮೀಕಿ ಹಗರಣದಲ್ಲಿ (Valmiki corporation Scam) ದುಡ್ಡು ಹೊಡೆದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೂಗಿದರು. ಸದನದಲ್ಲಿ ಮತ್ತೆ ಹೋರಾಟ ಮಾಡಲು ಮುಂದಾದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ನಿಂತರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಕೂಡ ಎದ್ದುನಿಂತು ಕೂಗಾಡಿದರು. ಉಭಯ ಪಕ್ಷಗಳ ಸದಸ್ಯರನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದೆ ಸದನವನ್ನು ಸ್ಪೀಕರ್‌ ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಇದನ್ನೂ ಓದಿ: Karnataka Assembly Live: 4ನೇ ದಿನದ ವಿಧಾನಮಂಡಲ ಕಲಾಪದಲ್ಲೂ ವಾಲ್ಮೀಕಿ ಹಗರಣದ ಕರಿನೆರಳು ನಿರೀಕ್ಷೆ; ಅಸೆಂಬ್ಲಿ ಲೈವ್‌ ಇಲ್ಲಿದೆ ನೋಡಿ

Exit mobile version