ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಹಾಗೂ ಮುಡಾ ಸೈಟ್ ಪ್ರಕರಣದ ವಿಧಾನ ಮಂಡಲ ಅಧಿವೇಶನದ (Karnataka Assembly) ಮೂರನೇ ದಿನವನ್ನೂ ಹಾಳುಗಡೆವಿತು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮುಂದಾದರೆ, ಕಾಂಗ್ರೆಸ್ ಮುಜುಗರದಿಂದ ತಪ್ಪಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿತು. ಆದರೆ ಪ್ರತಿಭಟನೆ ಹಾಗೂ ಪ್ರತಿರೋಧಗಳಿಂದಾಗಿ ಕಲಾಪದ ಅವಧಿ ನಷ್ಟವಾಯಿತು.
ವಾಲ್ಮಿಕಿ ನಿಗಮದ ಹಗರಣ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಎಂಬುವರ ಡೆತ್ ನೋಟ್ ಓದುವಾಗ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನೇ ಬಿಟ್ಟಿದ್ದಾರೆ ಎಂಬುದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅರೋಪಿಸಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸದನದ ಬಾವಿಗೆ ಇಳಿದ ಪ್ರತಿಭಟನೆ ನಡೆಸಿದರು.
ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನ ಸೌಧದ ಗೇಟ್ ಬಳಿಯೂ ಪ್ರತಿಭಟನೆ ನಡೆಸಿದರು. ಸರ್ಕಾರವು ಹಗರಣಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ವಿಪಕ್ಷಗಳ ಸದಸ್ಯರು ಈ ವೇಳೆ ಆರೋಪಿಸಿದರು.
ಸಂಧಾನ ಸಭೆ
ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡುವಾಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿರುವ ಹಿನ್ನೆಲೆಯಲ್ಲಿಯ ಸ್ಪೀಕರ್ ಯುಟಿ ಖಾದರ್ ಸಂಧಾನ ಸಭೆ ಕರೆದರು. ಆಡಳಿತ ಪಕ್ಷದ ಕಡೆಯಿಂದ ಸಿದ್ದರಾಮಯ್ಯ, ಎಚ್ ಕೆ ಪಾಟೀಲ್ ,ಜಾರ್ಜ್ ಹಾಗೂ ವಿಪಕ್ಷಗಳಿಂದ ಆರ್ ಆಶೋಕ್, ವಿಜೇಯೇಂದ್ರ, ಸುರೇಶ್ ಬಾಬು ಇದ್ದರು.
ಸಂಧಾನ ಸಭೆ ನಡೆಸಿದ ಬಳಿಕವೂ ವಿಪಕ್ಷಗಳ ಸದಸ್ಯರು ತಮ್ಮ ಹೋರಾಟವನ್ನ ಮುಂದುವರಿಸಿದ ಕಾರಣ ಕಲಾಪ ಬಹುತೇಕ ಗದ್ದಲದಲ್ಲಿಯೇ ಅಂತ್ಯಗೊಂಡಿತು.
ಅಹಿಂದಕ್ಕೆ ಅನ್ಯಾಯ ಮಾಡುವ ಕೆಲಸ ಸಿಎಂ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣದಿಂದ ಹೆಂಡ ಹಚ್ಚಿದ್ದಾರೆ. ಡೆತ್ ನೋಟ್ ನಲ್ಲಿ ಅಧಿಕಾರಿಗಳ ಹೆಸರನ್ನು ಮಾತ್ರ ಉಲ್ಲೇಖ ಮಾಡ್ತಾರೆ. ಸಚಿವರ ಹೆಸರು ಉಲ್ಲೇಖ ಮಾಡುತ್ತಾರೆ. ಇದೇ ವೇಳೆ ನಾಗೇಂದ್ರ ಕ್ಲಿನ್ ಚಿಟ್ ಪಡೆದು ಹೊರಗೆ ಬರ್ತಾರೆ ಅಂತ ಡಿಕೆ ಶಿವಕುಮಾರ್ ಹೇಳ್ತಾರೆ. ಸರ್ಕಾರದ ಮುಖವಾಡ ಬಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲೂ ಇದೇ ರೀತಿ ಪರಿಸ್ಥಿತಿ ಮುಂದುವರಿಯಿತು. ಹೆಚ್ಚು ಚರ್ಚೆಗಳು ನಡೆಯದೇ ಆರೋಪಗಳಲ್ಲೇ ಕೊನೆಯಾಯಿತು.
ಸಿಎಂ ಉತ್ತರ
ನಿಯಮ 69ರ ಅಡಿಯಲ್ಲಿ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮ ಕುರಿತಾದ ಚರ್ಚೆಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ. ಆರ್.ಅಶೋಕ್, ವಿಜಯೇಂದ್ರ ನನ್ನ ರಾಜೀನಾಮೆ ಕೇಳಿದ್ದಾರೆ. ಆರಗ ಜ್ಞಾನೇಂದ್ರ ಮಾಜಿ ಗೃಹ ಸಚಿವರು. ಇವರು ಎಸ್ಐಟಿ ಹಿಂದಕ್ಕೆ ಪಡೆಯಿರಿ ಎಂದು ಹೇಳಿದ್ದಾರೆ. ನೀವು ಗೃಹ ಮಂತ್ರಿ ಆಗಿದ್ದಾಗಲೂ ಎಸ್ಐಟಿ ಬಗ್ಗೆ ಹೀಗೆ ಹೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
26-5-2024 ರಂದು ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಇವರು ತಮಿಳುನಾಡಿನ ಬೋವಿ ಸಮುದಾಯದವರು. ವಿರೋಧ ಪಕ್ಷದವರು ಸಾವಿರ ಸಾರಿ ದಲಿತ, ದಲಿತ ಅಂತ ಹೇಳುತ್ತಿದ್ದಾರೆ ಎಂದರು.
ಈ ಎಲ್ಲಾ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ. 2013 ಡಿಸೆಂಬರ್ ನಲ್ಲಿ ಎಸ್ಸಿಪಿ, ಟಿಸಿಪಿ ಕಾಯ್ದೆ ಜಾರಿ ಮಾಡಿದೆ. ನಾನು ಮುಖ್ಯಮಂತ್ರಿಯಾಗಿಯೇ ಜಾರಿ ಮಾಡಿದೆ. 24.1% ಅಭಿವೃದ್ಧಿ ಹಣ ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಡ್ಡಾಯ ಮಾಡಿದ್ದು ನಾನು. ಪ್ರತಿಪಕ್ಷಗಳು ಬರಿ ಮೊಸಳೆ ಕಣ್ಣೀರು ಹರಿಸುತ್ತವೆ ಎಂದರು.
ನಾನು ಹಿಂದಿನ ಸಿದ್ದರಾಮಯ್ಯ ಅಲ್ಲ ಅಂತ ಯತ್ನಾಳ್ ಅವರು ಹೇಳಿದರು. ಯತ್ನಾಳ್ ಅವರು ಕೂಡ ವಾಜಪೇಯಿ ಅವರ ಸಂಪುಟದಲ್ಲಿದ್ದ ಯತ್ನಾಳ್ ಆಗಿ ಉಳಿದಿಲ್ಲ ಎಂದರು. ಆರ್.ಅಶೋಕ್ ಮೂರು ಗಂಟೆ ನಾಲ್ಕು ನಿಮಿಷ ಸದನದಲ್ಲಿ ಆರೋಪಿಸಿದ್ದೆಲ್ಲಾ ಪತ್ರಿಕಾ ಸುದ್ದಿಗಳ ಆಧಾರದಲ್ಲಿ ಮಾತ್ರ. ಪರಿಶಿಷ್ಠ ಸಮುದಾಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕೇಂದ್ರದ ಬಿಜೆಪಿಯಾಗಲಿ, ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲಿ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ದರು. ನಿಮ್ಮಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.