ಬೆಂಗಳೂರು: ನಮ್ಮ ಸರ್ಕಾರ ಇಡೀ ದೇಶಕ್ಕೆ ಕರ್ನಾಟಕ ಮಾದರಿಯನ್ನು ಪರಿಚಯಿಸಿದೆ. ಬಸವಣ್ಣನವರ ನುಡಿದಂತೆ ನಡೆಯಬೇಕು ಎನ್ನುವ ತತ್ವದಂತೆ, ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತಿನಂತೆ ನಡೆದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಬಜೆಟ್ (Karnataka Budget Session 2024) ಮೇಲಿನ ಭಾಷಣದ ಬಗ್ಗೆ ಬಿಜೆಪಿಯವರು ಮಾಡಿದ ಟೀಕೆಗೆ ಡಿಕೆಶಿ ಕಿಡಿಕಾರಿದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ, ನಾವು ಆರಂಭಿಸಿದ ಗ್ಯಾರಂಟಿಗಳನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ, ಈಗ ಅದನ್ನೇ ಪ್ರಚಾರಕ್ಕೆ ಬಳಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಮಾಡಲಾಗುವುದನ್ನು ನಾವು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಇದನ್ನು ವಿರೋಧ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ ಎಂದು ಹೇಳಿದರು.
ಕೇಸರಿ ಯಾರ ಮನೆಯ ಆಸ್ತಿಯಲ್ಲ
ಬಿಜೆಪಿ ನಾಯಕರು ಕೇಸರಿ ಶಾಲು (saffron shawls) ಧರಿಸಿ ಸದನಕ್ಕೆ ಬಂದ ಬಗ್ಗೆ ಮಾಧ್ಯಮದವರು ಮಾಡಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, “ಅವರು ಏನಾದರೂ ಹಾಕಿಕೊಂಡು ಬರಲಿ. ಕೇಸರಿ ಅವರ ಮನೆ ಆಸ್ತಿಯೇ? ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ. ಅವರು ಕೇಸರಿಯಾದರೂ ಧರಿಸಲಿ, ಕಪ್ಪಾದರೂ ಧರಿಸಲಿ. ನಮ್ಮ ರಾಜ್ಯದ ಹಿತಕ್ಕೆ ಬೇಕಾದ ಕೆಲಸ ನಾವು ಮಾಡುತ್ತೇವೆ ಎಂದರು.
ಬಿಜೆಪಿ ಯೋಜನೆಗಳು ತನ್ನದೆಂದ ಸಿದ್ದರಾಮಯ್ಯ: ಆರ್.ಅಶೋಕ್
ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸುಳ್ಳುಗಳನ್ನು ಹೇಳಿಸಿದೆ. ಈ ಹಿಂದೆ ಬಿಜೆಪಿ ತಂದಿದ್ದ ಯೋಜನೆಗಳನ್ನು ತಾನೇ ತಂದದ್ದು ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಹೇಳಿಸಿದ್ದಾರೆ. ಗ್ಯಾರಂಟಿಗಳಿನ್ನೂ ಪೂರ್ಣವಾಗಿ ಜಾರಿಯಾಗಿಲ್ಲ. ಕಂತುಕಂತಿನಲ್ಲಿ ಬರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ, ಬೆಂಗಳೂರಿನ ಮೆಟ್ರೋ ಯೋಜನೆಗಳನ್ನೂ ತಮ್ಮದೆಂದು ಹೇಳಿಕೊಂಡಿದ್ದಾರೆ. ಇವೆಲ್ಲವೂ ಕೇಂದ್ರ ಸಹಕಾರದ ಯೋಜನೆಗಳು. ರಾಜ್ಯಪಾಲರಿಂದಲೇ ಸುಳ್ಳು ಹೇಳಿಸಿ ಅವರಿಗೂ ಅವಮಾನ ಮಾಡಿದ್ದಾರೆ ಎಂದು ಆರ್. ಅಶೋಕ್ ಹೇಳಿದರು.
ʻʻಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿರುವ ಸರ್ಕಾರದ ಆಡಳಿತದಲ್ಲಿ ಕೋಮುಭಾವನೆ ಎಲ್ಲೆ ಮೀರಿದೆ. ಕನ್ನಡ ಹೋರಾಟಗಾರರನ್ನು ಬಂಧಿಸಿ ಈಗ ಕನ್ನಡ ಪರ ಕಾನೂನು ಜಾರಿ ತರುತ್ತೇವೆ ಎನ್ನುತ್ತಾರೆ ಎಂದು ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಜಾರಿಯೇ ಆಗಿಲ್ಲ. ಒಬ್ಬ ನಿರುದ್ಯೋಗಿ ಯುವಕನಿಗೂ ಒಂದು ರೂಪಾಯಿಯೂ ಸಿಕ್ಕಿಲ್ಲ. ಅದರೂ ಯೋಜನೆ ಜಾರಿಯಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಬರ ಪರಿಹಾರವಾಗಿ ರೈತರಿಗೆ ಎರಡು ಸಾವಿರ ಹಣ ಕೊಟ್ಟಿಲ್ಲ, ಆದರೆ, ಮೊದಲ ಕಂತು ಕೊಟ್ಟಿದ್ದಾಗಿ ಹೇಳಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಬರ ಪರಿಸ್ಥಿತಿ ಎದುರಿಸಲು 25 ಸಾವಿರ ಪರಿಹಾರ ನೀಡಬೇಕು ಅಂತ ನಾವೇ ಒತ್ತಾಯ ಮಾಡಿದ್ದೇವೆ. ಆದರೆ, ಇವರು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರ್. ಅಶೋಕ್ ಹೇಳಿದರು.
ರಾಜ್ಯ ಸರ್ಕಾರ ಮಕ್ಕಳಿಗೆ ಚಿಕ್ಕಿ, ಮೊಟ್ಟೆ ಕೊಡ್ತಾ ಇದ್ದೇವೆ ಅಂತಾರೆ. ಆದರೆ, ಮಕ್ಕಳಿಗೆ ಮೊಟ್ಟೆ, ಚಿಕ್ಕಿ ಕೊಟ್ಟು ಶೌಚಾಲಯ ಕ್ಲಿನ್ ಮಾಡಿಸುವ ಕೆಲಸ ಮಾಡ್ತಾ ಇದ್ದಾರೆ ಎಂದು ಅಶೋಕ್ ಕಿಡಿಕಾರಿದರು. ರಾಜ್ಯದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಆಗುತ್ತಿದೆ. ಭಯೋತ್ಪಾದಕ ಚಟುವಟಿಕೆ ಜಾಸ್ತಿ ಆಗಿವೆ. ಇಷ್ಟೆಲ್ಲ ಆದರೂ ಶಾಂತಿ ಸುವ್ಯವಸ್ಥೆ ಕಾಪಾಡ್ತೀನಿ ಅಂತ ಹೇಳುತ್ತಿರುವುದು ನಾಚಿಕೆಗೇಡು ಎಂದು ಆರ್. ಅಶೋಕ್ ಹೇಳಿದರು.
ಎಸ್‌ಸಿ-ಎಸ್‌ಟಿಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿ, ಪರಿಶಿಷ್ಟರಿಗೆ ಮೋಸ ಮಾಡಿದ್ದಾರೆ. ಕಳೆದು ಎಂಟು ತಿಂಗಳಲ್ಲಿ ಒಂದು ರೂಪಾಯಿಯನ್ನು ಅಭಿವೃದ್ಧಿಗೆ ಕೊಟ್ಟಿಲ್ಲ. ಈ ಸರ್ಕಾರದಡಿ ಒಂದೇ ಒಂದೇ ಕಾಮಗಾರಿ ಆಗಿಲ್ಲ ಎಂದು ಹೇಳಿದ ಅಶೋಕ್, ರಾಜ್ಯ ಸರ್ಕಾರ ಶೇ. 40ರಷ್ಟು ಕಮಿಷನ್ ದಂಧೆ ನಡೆಸುತ್ತಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರೇ ಹೇಳಿದ್ದಾರೆ ಎಂದರು.
ಪ್ರತಿಕ್ರಿಯೆ ನೀಡಲೂ ಅರ್ಹವಲ್ಲದ ಭಾಷಣ: ಬಿ.ವೈ ವಿಜಯೇಂದ್ರ
ʻʻಇಂದಿನ ರಾಜ್ಯಪಾಲರ ಭಾಷಣ ಪ್ರತಿಕ್ರಿಯೆ ನೀಡಲೂ ಅರ್ಹವಲ್ಲದ ಭಾಷಣ. ಸರ್ಕಾರ ವೈಫಲ್ಯ ಮುಚ್ಚಿಕೊಳ್ಳಲು ಮಾಡಿಸಿದ ಭಾಷಣ ಇದಾಗಿದೆ. ನಮ್ಮ ಸರ್ಕಾರದ ಅವಧಿಯ ಯೋಜನೆಗಳನ್ನು ತಮ್ಮ ಸರ್ಕಾರದ ಸಾಧನೆ ಎಂದು ಬಿಂಬಿಸಿಕೊಳ್ಳುವ ಕೆಲಸವನ್ನು ಈ ಸರ್ಕಾರ ಮಾಡಿದೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.
ʻʻಈ ಸರ್ಕಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದು 50% ಸರ್ಕಾರ. ಅವರದ್ದೇ ಪಕ್ಷದ ಮಾಜಿ ಸಚಿವ ಬಿ ಶಿವರಾಮ್ ಇದನ್ನು ಹೇಳಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡ ಇದನ್ನೇ ಹೇಳಿದ್ದಾರೆʼʼ ಎಂದ ಅವರು, ಎಲ್ಲ ರಂಗದಲ್ಲೂ ವಿಫಲವಾಗಿರುವ ಸರ್ಕಾರ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ ಎಂದರು.
ಧರ್ಮರಾಯನ ಬಾಯಲ್ಲಿ ಸುಳ್ಳು ಹೇಳಿಸಿದ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ
ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯಿಸಿ, ಧರ್ಮರಾಯನ ಬಾಯಲ್ಲಿ ಸುಳ್ಳು ಹೇಳಿಸಿದಂತೆ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಕೇಂದ್ರ ಸಹಕಾರದ ಯೋಜನೆಗಳನ್ನು ಮುಚ್ಚಿಟ್ಟು ಎಲ್ಲವೂ ತನ್ನದೇ ಎಂದು ಹೇಳಿಕೊಂಡಿದೆ ಎಂದರು.
ಇದನ್ನೂ ಓದಿ: Karnataka Budget Session 2024: ಕೇಸರಿ ಶಾಲು ಧರಿಸಿ ಬಂದ ಬಿಜೆಪಿ ಶಾಸಕರು; ಎಡವಿದ ಎಸ್.ಟಿ. ಸೋಮಶೇಖರ್
ʻʻಎಂಟು ತಿಂಗಳಿಂದ ಅಭಿವೃದ್ಧಿ. ಆಗಿಲ್ಲ. ಆದರೆ ತಮ್ಮ ಸರ್ಕಾರದ ಈ ಅವಧಿಯನ್ನು ಅಭಿವೃದ್ಧಿ ಶಕೆ ಎಂದು ಹೇಳಿಸಿದ್ದಾರೆ. ಅವರು ಎಂಟು ಮೀಟರ್ ರಸ್ತೆ ಮಾಡಿಸಿರೋದನ್ನು ತೋರಿಸಲಿ ಸಾಕುʼʼ ಎಂದರು.