Site icon Vistara News

Karnataka Budget Session 2024: ಸದನದಲ್ಲಿ ಬೊಮ್ಮಾಯಿ-ಸಿದ್ದರಾಮಯ್ಯ ಮಧ್ಯೆ ನಮ್ಮದು-ನಿಮ್ಮದು ವಾರ್!

Karnataka Budget Session 2024 talk war between Basavaraj Bommai and CM Siddaramaiah

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಹಾಲಿಗೆ ಪ್ರೋತ್ಸಾಹಧನ ನೀಡುವ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯಿತು. ಅಲ್ಲದೆ, ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಸರ್ಕಾರದ್ದು ಎಂದು ಹೇಳಿದ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಬೊಮ್ಮಾಯಿ, ಅವು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಾಗಿದ್ದು ಎಂದು ತಿರುಗೇಟು ಕೊಟ್ಟಿದ್ದಾರೆ. ಅಲ್ಲದೆ, ರಾಜ್ಯದ 8.65 ಲಕ್ಷ ಹಾಲು ಉತ್ಪಾದಕರಿಗೆ 757 ಕೋಟಿ ರೂ. ಪ್ರೋತ್ಸಾಹ ಧನ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದು, ಆರು ತಿಂಗಳಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಎದುರೇಟು ನೀಡಿದ್ದು, ನಮ್ಮ ಅವಧಿಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಕಡಿಮೆ ಆಗಿದೆ ಅನ್ನೋ ಆರೋಪ ಸುಳ್ಳು ಎಂದು ಪ್ರತಿಪಾದಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತ ರಾಜ್ಯಪಾಲರಿಂದ ಯಾವುದೇ ಸುಳ್ಳು ಹೇಳಿಸಿಲ್ಲ, ಸುಳ್ಳು ಹೇಳಿಸಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದರು. ಅವರ ಸವಾಲಿಗೆ ಪ್ರತ್ಯುತ್ತರ ನೀಡಿದ ಬಸವರಾಜ ಬೊಮ್ಮಾಯಿ, ಹಾಲು ಉತ್ಪಾದಕರು ಕಳೆದ ಆರು ತಿಂಗಳಿನಿಂದ ಯಾವುದೇ ಪ್ರೋತ್ಸಾಹ ಧನ ಬಂದಿಲ್ಲ ಅಂತ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲೂ ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದೀರಿ ಎಂದು ಹೇಳಿದರು.

ಅಲ್ಲದೇ ಐದು ಗ್ಯಾರೆಂಟಿ ಯೋಜನೆಗಳ ಜತಗೆ ಬಜೆಟ್‌ನಲ್ಲಿ ಘೋಷಿಸಿರುವ ಶೇ. 97 ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಅಂತ ಹೇಳಿಸಿದ್ದೀರಿ. ಸರ್ಕಾರ ಅಧಿಸೂಚನೆ ಹೊರಡಿಸಿರುವ ಯೋಜನೆಗಳು ಆರಂಭವೇ ಆಗಿಲ್ಲ. ಅದು ಸಳ್ಳಲ್ಲವಾ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದೂ ಹೊಸ ಬಸ್ ಖರೀದಿ ಮಾಡಿಲ್ಲ ಎಂದು ಸುಳ್ಳು ಹೇಳಿಸಿದ್ದೀರಿ. ಬಿಜೆಪಿ ಅವಧಿಯಲ್ಲಿ ನಾಲ್ಕು ನಿಗಮಗಳಿಗೆ ಬಸ್ ಖರೀದಿ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 3,526, ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ನಮ್ಮ ಅವಧಿಯಲ್ಲಿ ಬಿಎಂಟಿಸಿಗೆ 1,311 ಮತ್ತು ಕೆ ಎಸ್ ಆರ್ ಟಿಸಿಗೆ 50 ಪವರ್ ಪ್ಲಸ್ ಬಸ್ಸುಗಳು ಹಾಗೂ 20 ವೊಲ್ವೊ ಬಸ್‌ಗಳನ್ನು ಖರೀದಿಸಿದ್ದು, ಅವುಗಳು ಕಾರ್ಯಾಚರಣೆ’ ಪ್ರಾರಂಭಿಸಿದ್ದವು ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ನಮ್ಮ ಸಾಧನೆಯನ್ನು ನಿಮ್ಮದು ಎಂದು ಹೇಳಿದ್ದೀರಿ!

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3000 ಕೋಟಿ ಮೀಸಲಿಟ್ಟಿದ್ದು, ಸರ್ಕಾರ ಈಗಾಗಲೇ 5468 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಂಜೂರು ಮಾಡಿ, ನವೆಂಬರ್ ಹೊತ್ತಿಗೆ 1287 ಕಾಮಗಾರಿ ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ. ನಮ್ಮ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳನ್ನು ನಿಮ್ಮ ಸಾಧನೆ ಅಂತ ಹೇಳಿಕೊಂಡಿದ್ದೀರಿ ಎಂದು ಬಸವರಾಜ ಬೊಮ್ಮಾಯಿ ಪ್ರತ್ಯುತ್ತರ ನೀಡಿದರು.

ಇದನ್ನೂ ಓದಿ: Karnataka Budget Session 2024: ನಾವು ಹಣ ಕೊಡ್ತೀವಿ ಅಂದ್ರೂ ಕೇಂದ್ರ ಏಕೆ ಅಕ್ಕಿ ಕೊಡಲಿಲ್ಲ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ನಮ್ಮ ಅವಧಿಯಲ್ಲಿ ಉತ್ಪಾದನೆ ಕಡಿಮೆಯಾಗಿಲ್ಲ

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಹಾಲಿಗೆ ಪ್ರೋತ್ಸಾಹಧನವನ್ನು ಹೆಚ್ಚು ಮಾಡಿದ್ದು ನಾವು. ಹಾಲಿನ ಪ್ರೋತ್ಸಾಹ ಧನವನ್ನು ಬಿ.ಎಸ್. ಯಡಿಯೂರಪ್ಪ ‌ಅವರು 2 ರೂಪಾಯಿ ಹೆಚ್ಚಳ ಮಾಡಿದರು. ನಾವು 2 ರಿಂದ 3, ನಂತರ 3 ರಿಂದ 5 ರೂಪಾಯಿವರೆಗೆ ಹೆಚ್ಚಳ ಮಾಡಿದೆವು. ಅಲ್ಲದೆ, ನಮ್ಮ ಅವಧಿಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗಿಲ್ಲ. 2.86 ಲಕ್ಷ ಲೀಟರ್ ಹಾಲು ನಮ್ಮ ಅವಧಿಯಲ್ಲಿ ಹೆಚ್ಚಾಯಿತು. ನಮ್ಮ ಅವಧಿಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಕಡಿಮೆ ಆಗಿದೆ ಎಂಬ ಆರೋಪ ಸುಳ್ಳು ಎಂದು ಹೇಳಿದರು.

Exit mobile version