Site icon Vistara News

Karnataka Election 2023 : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌; ಕನಕಪುರದಲ್ಲಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರ

d k shivakumar nomination approved by election commission

#image_title

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಕನಕಪುರ ವಿಧಾನಸಭಾ ಕ್ಷೇತ್ರದಿಂದ (Karnataka Election 2023) ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಅಂಗೀಕರಿಸಿದ್ದಾರೆ. ನಾಮಪತ್ರ ಅಂಗೀಕಾರಗೊಳ್ಳುವ ಬಗ್ಗೆ ಆತಂಕ ಹೊಂದಿದ್ದ ಶಿವಕುಮಾರ್‌ ಇದರಿಂದ ನಿರಾಳರಾಗಿದ್ದಾರೆ.

ನಾಮಪತ್ರ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ನಾಮಪತ್ರವನ್ನು ಒಪ್ಪಿದ್ದಾರೆ. ಡಿ ಕೆ ಶಿವಕುಮಾರ್‌ ಪರ ವಕೀಲರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಅವರು ಸಲ್ಲಿಸಿದ್ದ ನಾಲ್ಕು ನಾಮಪತ್ರಗಳೂ ಬಹುತೇಕ ಸ್ವೀಕೃತವಾಗಿವೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಬೇಕಾಗಿದೆ.

ಈ ಕುರಿತು ಮಾಹಿತಿ ನೀಡಿದ ಡಿ.ಕೆ. ಶಿವಕುಮಾರ್‌ ಪರ ವಕೀಲರು, ಬಿಜೆಪಿ ಎತ್ತಿದ್ದ ಎಲ್ಲ ಆಕ್ಷೇಪಣೆಗಳಿಗೆ ಸರಿಯಾದ ಉತ್ತರವನ್ನು ನಾವು ನೀಡಿದ್ದೇವೆ. ಲಿಖಿತವಾಗಿ ಎಲ್ಲ ಮಾಹಿತಿಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಆರ್‌. ಅಶೋಕ್‌ ಪರವಾಗಿ ಹಾಜರಾಗಿದ್ದ ವಕೀಲರು ತಾವು ಎತ್ತಿರುವ ಪ್ರಶ್ನೆಗಳ ಕುರಿತು ವಿವರಿಸಿದ್ದು, ಈ ಎಲ್ಲ ವಿಷಯಗಳ ಕುರಿತು ಮುಂದೆ ಕಾನೂನು ಹೋರಾಟ ನಡೆಸುವ ಅವಕಾಶ ಬಿಜೆಪಿ ಅಭ್ಯರ್ಥಿಯ ಮುಂದಿದೆ ಎಂದು ಹೇಳಿದ್ದಾರೆ.

ನಾಮಪತ್ರ ತಿರಸ್ಕೃತವಾಗುವ ಆಂತಕ ಇದ್ದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್‌ ಕೂಡ ಕೊನೆಯ ಕ್ಷಣದಲ್ಲಿ ಗುರುವಾರ ನಾಮ ಪತ್ರ ಸಲ್ಲಿಸಿದ್ದರು. ಇಂದು ಬೆಳಗ್ಗೆ ಕೂಡ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿ.ಕೆ. ಶಿವಕುಮಾರ್‌, ಕನಕಪುರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಮಾಹಿತಿ ಇದೆ. ಹೀಗಾಗಿ ನಾಮಪತ್ರ ತಿರಸ್ಕೃತವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು.

ನಾಮಪತ್ರ ಸಲ್ಲಿಸುವಾಗ ಎಲ್ಲ ಮಾಹಿತಿ ನೀಡಿದ್ದೇನೆ. ಆದರೂ ಇಲ್ಲದ ಕಾರಣ ನೀಡುವ ಸಾಧ್ಯತೆಗಳಿವೆ. ಹೀಗಾಗಿಯೇ ಸಹೋದರ ಡಿ ಕೆ ಸುರೇಶ್‌ ಕೂಡ ನಾಮಪತ್ರ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದರು. ಬಿಜೆಪಿಯು ತಮ್ಮನ್ನು ಗುರಿಯಾಗಿಸಿಕೊಂಡು ಎಲ್ಲ ರೀತಿಯಿಂದಲೂ ದಾಳಿ ನಡೆಸುತ್ತಿದೆ. ಕಾಂಗ್ರೆಸ್‌ ನಾಯಕರ ಮೇಲೆಲ್ಲಾ ಇದೇ ರೀತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದರು. ಇದಕ್ಕೆ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ, ಸೋನಿಯಾಗಾಂಧಿಯ ವಿರುದ್ಧ ಯಾವೆಲ್ಲಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬ ವಿವರವನ್ನು ನೀಡಿದ್ದರು.

ಇಂದು ಎಲ್ಲ ನಾಮಪತ್ರ ಪರಿಶೀಲನೆ ನಡೆದಿದ್ದು, ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಚಿವ ಆರ್‌. ಅಶೋಕ್‌ ನಡುವೆ ಸ್ಪರ್ಧೆ ನಡೆಯುವುದು ಖಚಿತಪಟ್ಟಿದೆ.

ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದರು!

ಇಂದು ಬೆಳಗ್ಗೆ ʻವಿಸ್ತಾರನ್ಯೂಸ್‌ʼ ನೊಂದಿಗೆ ಮಾತನಾಡಿದ್ದ ಸಂಸದ ಡಿ ಕೆ ಸುರೇಶ್‌ ಕೂಡ ʻಕನಕಪುರದಲ್ಲಿ ನಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆʼ ಎಂದು ಆರೋಪಿಸಿದ್ದರು.

ʻʻದೆಹಲಿಯ ಬಿಜೆಪಿ ನಾಯಕರೇ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆಂದು ಹೇಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಹ ನಮಗೆ ಹೇಳಿದ್ರು ನಿಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು. ಹೀಗಾಗಿಯೇ ನಮ್ಮ ಎಚ್ಚರಿಕೆಗಾಗಿ ನಾನು ಕೂಡ ನಾಮಪತ್ರ ಸಲ್ಲಿಸಿದ್ದೇನೆʼʼ ಎಂದು ಹೆಳಿದ್ದ ಡಿಕೆ ಸುರೇಶ್‌, ಇದನ್ನೆಲ್ಲಾ ಕನಕಪುರದ ಜನ ನೋಡುತ್ತಿದ್ದಾರೆ. ಇವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದರು.

ನಾವು ಷಡ್ಯಂತ್ರ ರಾಜಕಾರಣ ಮಾಡಲ್ಲ. ನಮ್ಮ ರಾಜಕಾರಣ ಏನಿದ್ದರೂ ನೇರಾ ನೇರ ಎಂದು ಹೇಳಿದ್ದ ಅವರು, ಪದ್ಮನಾಭನಗರದಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಇಲ್ಲ. ನಮ್ಮ ರಾಜಕಾರಣ ನಾವು ಮಾಡ್ತೀವಿ ಎಂದು ತಿಳಿಸಿದ್ದರು.

ಇದನ್ನೂ ಓದಿ: Karnataka Election : ಮತ್ತೆ ಆಡಳಿತಕ್ಕೆ ಬರಲಿದೆ ಡಬಲ್‌ ಎಂಜಿನ್‌ ಸರ್ಕಾರ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ

Exit mobile version