ಯಾದಗಿರಿ: ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಜಿಗಿದಿರುವ ಬಾಬುರಾವ್ ಚಿಂಚನಸೂರ್ ಅವರ ನಡೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗೆಲ್ಲುವ ಬಿಜೆಪಿ ಲೆಕ್ಕಾಚಾರ ನುಚ್ಚುನೂರಾಗುವ ಸಾಧ್ಯತೆ ಇದೆ. ಬಾಬುರಾವ್ ಅವರು ಇಲ್ಲಿನ ಬಲಿಷ್ಠ ಕೋಲಿ ಸಮಾಜಕ್ಕೆ ಸೇರಿದವರಾಗಿದ್ದು, ಈ ಸಮುದಾಯದ ಮತಗಳು ಈಗ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ದಾಟಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಬಾಬುರಾವ್ ಚಿಂಚನಸೂರ್‌ರಿಂದ ಕೋಲಿ ಸಮಾಜದ ಮತಗಳು ಬಿಜೆಪಿಗೆ ಬರುತ್ತವೆಂಬ ಲೆಕ್ಕಾಚಾರ ರಾಜ್ಯ ಬಿಜೆಪಿ ಹೈಕಮಾಂಡ್‌ನದಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜದ ಮತಗಳು ಅಧಿಕವಾಗಿವೆ. ಚಿಂಚನಸೂರ ಮೂಲಕ ಸಮಾಜದ ಮತಗಳನ್ನು ಸೆಳೆದು ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಇತ್ತು. ಕಲ್ಯಾಣ ಕರ್ನಾಟಕ ಭಾಗದ 41 ಸ್ಥಾನಗಳಲ್ಲಿ 30ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಚಿಂಚನಸೂರ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುತ್ತಿದೆ.
ಚಿಂಚನಸೂರ ಶಕ್ತಿ ಮೂಲಕ ಇದೀಗ ಹೆಚ್ಚು ಸ್ಥಾನ ಗೆಲ್ಲುವ ತವಕವನ್ನು ಕೈ ಪಡೆ ಹೊಂದಿದೆ. ಗುರುಮಠಕಲ್, ಚಿತ್ತಾಪುರ, ಚಿಂಚೋಳಿ ಮೊದಲಾದ ಕ್ಷೇತ್ರಗಳಲ್ಲಿ ಕೋಲಿ ಸಮಾಜದ ಮತದಾರರು ಅಧಿಕ ಇದ್ದಾರೆ. ಚಿಂಚನಸೂರ ಕಾಂಗ್ರೆಸ್ ಸೇರ್ಪಡೆಯಿಂದ ಪ್ರಿಯಾಂಕ ಖರ್ಗೆ ಗೆಲುವು ಸುಲಭವಾಗಬಹುದು. ಚಿತ್ತಾಪುರ ಕ್ಷೇತ್ರದಲ್ಲಿ ಕೋಲಿ ಸಮಾಜದ ಮತದಾರರು ನಿರ್ಣಾಯಕ. ಚಿಂಚನಸೂರರಿಂದಾಗಿ ಕಾಂಗ್ರೆಸ್‌ಗೆ ಕೋಲಿ ಸಮಾಜದ ಮತಗಳು ಬಂದರೆ ಪ್ರಿಯಾಂಕ ಖರ್ಗೆಗೆ ಗೆಲುವು ಸುಲಭ. ಅದೇ ರೀತಿ ಗುರುಮಠಕಲ್‌ನಲ್ಲಿ ಮತ್ತೆ ಕಾಂಗ್ರೆಸ್ ಜಯಭೇರಿ ಭಾರಿಸಬಹುದು.
ತಾವೇ ಸೋಲಿಸಿದ ಖರ್ಗೆಯೆ ಮಡಿಲಿಗೆ ಮತ್ತೆ ಬಾಬುರಾವ್
ಬಿಜೆಪಿಗೆ ಪಕ್ಷ ತನ್ನ ತಾಯಿ ಇದ್ದಂತೆ ಎನ್ನುತ್ತಿದ್ದ ಬಾಬುರಾವ್ ಆಗಾಗ, ಬಿಜೆಪಿ ಬಿಟ್ಟರೆ ತಾಯಿಗೆ ದ್ರೋಹ ಮಾಡಿದಂತೆ ಎನ್ನುತ್ತಿದ್ದರು. ಯಾದಗಿರಿಗೆ ಆಗಮಿಸಿದಾಗಲೆಲ್ಲಾ ಬಿಜೆಪಿ ನನ್ನ ತಾಯಿ ಪಕ್ಷ ಎನ್ನುತ್ತಿದ್ದರು. ಬಿ ಫಾರ್ಮ್ ನನ್ನ ಜೇಬಲ್ಲೇ ಇದೆ ಎನ್ನುತ್ತಿದ್ದರು. ಆದರೆ ಬಿಜೆಪಿಯಿಂದ ಟಿಕೇಟ್ ಸಿಗದ ಬಗ್ಗೆ ಖಾತ್ರಿಯಾದುದರಿಂದ ಪಕ್ಷ ಬಿಡಲು ಮುಂದಾಗಿದ್ದಾರೆ.
2018ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದ ಅವರು ತಮಗೆ ರಾಜಕೀಯ ಪಾಠ ಕಲಿಸಿಕೊಟ್ಟ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ವಿರೋಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಸೋಲಿಗೆ ಪ್ರಮುಖ ಪಾತ್ರ ವಹಿಸಿದ್ದರು. ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಮತ್ತೆ ಖರ್ಗೆ ಮೇಲೆ ಬಾಬುರಾವ್ ಚಿಂಚನಸೂರಗೆ ಪ್ರೀತಿ ಉಕ್ಕಿದೆ. ಕಾಂಗ್ರೆಸ್‌ನಿಂದ ಗುರುಮಿಠಕಲ್ ಕ್ಷೇತ್ರದಲ್ಲಿ ಇವರಿಗೆ ಸ್ಪರ್ಧೆಗೆ ಖರ್ಗೆ ಗ್ರೀನ್ ಸಿಗ್ನಲ್ ನೀಡಿದ್ದರು ಎನ್ನಲಾಗುತ್ತಿದೆ. ಖರ್ಗೆ ಸಮ್ಮತಿಯಿಂದಲೇ ಬಾಬೂರಾವ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಪಕ್ಷಕ್ಕೆ ಎಲ್ಲಿ ಸೋಲಿನ ರುಚಿ ತೋರಿಸಿದ್ದರೋ ಅಲ್ಲೇ ಗೆಲುವಿನ ಪತಾಕೆ ಹಾರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: Karnataka Election: ಎಂಎಲ್‌ಸಿ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ ಖಚಿತ?