ಕೋಲಾರ: 2023 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿರುವ ತೆಲುಗು ಭಾಷಿಕರ ಮತ ಸೆಳೆಯಲು ನಾನಾ ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಪಕ್ಕದ ರಾಜ್ಯಗಳಿಂದ ಸ್ಟಾರ್ ಪ್ರಚಾರಕರನ್ನು ಸೆಳೆಯಲು ಮುಂದಾಗಿವೆ.
ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜ್ಯದ ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೆಲುಗಿನ ನಾಯಕರ ಪ್ರಭಾವ ಬೀರಿಸಲು ಮುಂದಾಗಿವೆ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಪ್ರಚಾರ ನಡೆಸಿದರೆ, ಇತ್ತ ಬಿಜೆಪಿ ಸಹ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಚುನಾವಣಾ ಪ್ರಚಾರಕ್ಕೆ ಇಳಿಸಲಿದೆ.
ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ತೆಲುಗು ಮಾತನಾಡುವ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರಕ್ಕೆ ತೆಲುಗು ಜನಪ್ರಿಯ ನಟನನ್ನು ಬಿಜೆಪಿ ನಿಯೋಜಿಸುವ ನಿರೀಕ್ಷೆ ಇದೆ. ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಇಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ದೆಹಲಿಯಲ್ಲಿ ಬೇಟಿ ಮಾಡಲಿದ್ದಾರೆ. ಏತನ್ಮಧ್ಯೆ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಕರ್ನಾಟಕದ ಪ್ರಾದೇಶಿಕ ಸಂಘಟನೆ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸಿ, ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ರಾಜ್ಯದಲ್ಲಿ ತೆಲುಗು ಮಾತನಾಡುವ ನಾಗರಿಕರು ಶೇಕಡಾ 15ರಷ್ಟು ಇದ್ದಾರೆ. ಬೆಂಗಳೂರಿನಲ್ಲಿ 25 ಲಕ್ಷ ತೆಲುಗು ಮಾತನಾಡುವ ಮತದಾರರಿದ್ದಾರೆ. ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ತೆಲುಗು ಪ್ರಭಾವ ಜಾಸ್ತಿ ಇದೆ. ತೆಲುಗು ಮತದಾರರು ನಿರ್ಣಾಯಕ ಪಾತ್ರವನ್ನು ವಹಿಸಬಹುದು. ಕನ್ನಡ ಮತ್ತು ಉರ್ದು ಮಾತನಾಡುವ ಮತದಾರರ ನಂತರ ಕರ್ನಾಟಕದಲ್ಲಿ ಮೂರನೇ ಅತಿ ದೊಡ್ಡ ಮತದಾರರು ತೆಲುಗರು.
ಕೋಲಾರ, ತುಮಕೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು, ಕಲಬುರಗಿ, ಚಿತ್ರದುರ್ಗ, ಬೀದರ್, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ತೆಲುಗು ಮಾತನಾಡುವ ಜನಸಂಖ್ಯೆ ಗಣನೀಯವಾಗಿದೆ. ಆಂಧ್ರ- ತೆಲಂಗಾಣದ ಕೆಲ ಪಕ್ಷಗಳು ಕೂಡ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ ಮತ್ತು ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಸುಮಾರು 40 ಸ್ಥಾನಗಳ ಮೇಲೆ ಕಣ್ಣಿಟ್ಟಿವೆ.
ಇದನ್ನೂ ಓದಿ: Karnataka Election: ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ದಾಳಿಗೆ ಮೋದಿ ಸರ್ಕಾರ ಸಿದ್ಧತೆ: ಸುರ್ಜೇವಾಲ ಆರೋಪ