ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ನೆರೆ ಪೀಡಿತ ಪ್ರದೇಶಗಳಿಗೆ (Karnataka Flood) ಭೇಟಿ ನೀಡುವ ಉದ್ದೇಶದಿಂದ ರಾಜ್ಯ ಬಿಜೆಪಿಯು 6 ತಂಡಗಳನ್ನು ರಚನೆ ಮಾಡಿದ್ದು,, ಜುಲೈ 30 ಮತ್ತು 31ರಂದು ಈ ತಂಡಗಳು ಪ್ರವಾಹ ಪೀಡಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಶಾಸಕರಾದ ಅರಗ ಜ್ಞಾನೇಂದ್ರ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ನೇತೃತ್ವದಲ್ಲಿನ ತಂಡಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿವೆ.
ಆರ್. ಅಶೋಕ್ ಅವರ ತಂಡವು ಮಂಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ, ಆರಗ ಜ್ಞಾನೇಂದ್ರ ಅವರ ತಂಡವು ಶಿವಮೊಗ್ಗ ಜಿಲ್ಲೆಯಲ್ಲಿ, ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರ ತಂಡವು ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ, ಛಲವಾದಿ ನಾರಾಯಣಸ್ವಾಮಿ ತಂಡವು ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ, ಅರವಿಂದ ಬೆಲ್ಲದ್ ಅವರ ತಂಡವು ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ, ಬಿ. ಶ್ರೀರಾಮುಲು ಅವರ ತಂಡವು ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.
ಇದನ್ನೂ ಓದಿ | BJP-JDS Padayatra: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್
ಪಾದಯಾತ್ರೆಗೂ ಮುನ್ನ ಪ್ರವಾಹ ಸ್ಥಳಗಳಿಗೆ ಭೇಟಿ: ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಹೆಚ್ಚಾಗಿದೆ. ಹೀಗಾಗಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲು ಬಿಜೆಪಿಯಿಂದ 6 ತಂಡ ರಚನೆ ಮಾಡಿದ್ದೇವೆ. ವಿಪಕ್ಷ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅರವಿಂದ ಬೆಲ್ಲದ್ ಸೇರಿ 6 ನಾಯಕರ ನೇತೃತ್ವದಲ್ಲಿ 6 ತಂಡ ರಚನೆಯಾಗಿದೆ. ಮಂಗಳವಾರ, ಬುಧವಾರ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮೈಸೂರು ಚಲೋ ಪಾದಯಾತ್ರೆ ಪೂರ್ವಭಾವಿ ಸಭೆ ಬಳಿಕ ಅವರು ಮಾತನಾಡಿದರು. ಇನ್ನು ಬಿಜೆಪಿ ಪಾದಯಾತ್ರೆ ಆರಂಭಿಸಲು ಸಕಾರಣಗಳು ಇವೆ, ಬಿಜೆಪಿ ಅವಧಿಯಲ್ಲಿ ನಮ್ಮ ಮೇಲೆ ಸಾಕಷ್ಟು ಅಪಪ್ರಚಾರ ಮಾಡಲು ಕಾಂಗ್ರೆಸ್ ಯಶಸ್ವಿಯಾಯಿತು. ಶೇ.40 ವಿಚಾರದಲ್ಲಿ ಯಶಸ್ವಿಯಾಗಿ ಅಪಪ್ರಚಾರ ಮಾಡಿ, ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೆ, ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಿಕೊಡಿ ಅಂತ ಸಿಎಂ ಪತ್ರ ತೆಗೆದುಕೊಂಡು ಹೋದರೆ ಏ ಏನ್ರೀ ಅಭಿವೃದ್ಧಿ ಕೆಲಸ, ಗ್ಯಾರಂಟಿ ಕೊಡುತ್ತಿಲ್ಲವೇನ್ರೀ, ಅದೇ ಅಭಿವೃದ್ಧಿ ಕೆಲಸ ಎಂದು ಸಿಎಂ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಗೆ ಮೂರು ದಿನಗಳ ಮುಂಚೆ ಗೃಹ ಲಕ್ಷ್ಮೀ ಯೋಜನೆ ಹಣ ಖಾತೆಗೆ ಹೋಗಿದೆ, ಬಳಿಕ ಸ್ಥಗಿತ ಆಗಿದೆ. ಚುನಾವಣೆ ಹತ್ತಿರ ಬಂದಾಗ ಖಾತೆಗೆ ಜಮಾ ಆಗುತ್ತದೆ, ಚುನಾವಣೆ ಮುಗಿದ ಬಳಿಕ ಬಂದ್ ಆಗುತ್ತದೆ, ಇದು ಕಾಂಗ್ರೆಸ್ ಗ್ಯಾರಂಟಿ. ಇನ್ನೆರಡು ತಿಂಗಳು ಹೋದರೆ ಕೆಎಸ್ಆರ್‌ಟಿಸಿಗೆ ಬೀಗ ಹಾಕುತ್ತಾರೆ ಅಷ್ಟೇ. ವಾಲ್ಮೀಕಿ ನಿಗಮ ಅಧೀಕ್ಷಕ ಚಂದ್ರಶೇಖರ ಡೆತ್ ನೋಟ್ ನೋಡಿದ ಮೇಲೆ ಕೂಡ ವಾಲ್ಮೀಕಿ ನಿಗಮದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಎಂ ಹೇಳುತ್ತಾರೆ. ಇನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಡವರಿಗೆ ತಲುಪಬೇಕಿದ್ದ ಮೂರರಿಂದ ನಾಲ್ಕು ಸಾವಿರ ಕೋಟಿ ಬೆಲೆ ಬಾಳುವ ಸೈಟುಗಳು ಉಳ್ಳವರ ಪಾಲಾಗಿವೆ ಎಂದು ಆರೋಪಿಸಿದರು.
ನಿವೇಶನ ಹಗರಣ ನಡೆದಿದೆ, ಯಾವುದೇ ಕಾರಣಕ್ಕೂ ನಿವೇಶನ ಹಂಚಿಕೆ ಆಗಬಾರದು ಅಂತ ಮುಡಾ ಅಧ್ಯಕ್ಷ ಮರಿಗೌಡ ಅವರೇ ಕಮಿಷನರ್‌ಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ತನಿಖೆ ಸರಿ ಇದೆ ಎಂದು ಒಪ್ಪಿಕೊಳ್ಳುತ್ತಾರೆ. ಬಳಿಕ ಮುಡಾ ಸೈಟ್ ಹಂಚಿಕೆ ನಿಲ್ಲಿಸಬೇಕು ಅಂತ ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದೇಶದ ಬಳಿಕವೂ ಯತೇಚ್ಛವಾಗಿ ಸೈಟ್ ಹಂಚಿಕೆ ಮಾಡುತ್ತಾರೆ. ತನಿಖಾ ವರದಿ ಕೂಡ ಇದೆ. ಇದಾದ ಮೇಲೂ ಮುಡಾ ಕಮಿಷನರ್ ಸೈಟ್ ಹಂಚಿಕೆ ಮಾಡುತ್ತಾರೆ. ಅವರ ಹಿಂದಿರೋ ಶಕ್ತಿ ಯಾವುದು ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮ ಹಗರಣ ಹಾಗೂ ಮುಡಾ ಹಗರಣದಿಂದ ಪರಿಶಿಷ್ಟರಿಗೆ, ಬಡವರಿಗೆ ಅನ್ಯಾಯ ಆಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಬೇಕಿದೆ. ಬಿಜೆಪಿ ಹೋರಾಟದಿಂದ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಸದನದಲ್ಲಿ ವಾಲ್ಮೀಕಿ ಹಗರಣ ಚರ್ಚೆ ಮಾಡಿದ್ದರು. ಆದರೆ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿಲ್ಲ. ಇವರ ಹಣೆಬರಹ ಬಯಲಿಗೆ ಬರಲಿದೆ ಅಂತ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ಬಂಡವಾಳ ಹೊರ ಬರಲಿದೆ ಅಂತ ಸದನದಲ್ಲಿ ಚರ್ಚೆಗೆ ಅವಕಾಶವೇ ನೀಡಲಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ | KRS Dam: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ; ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ
ಆಗಸ್ಟ್ 3ರಿಂದ ಮೈಸೂರು ಚಲೋ ಪಾದಯಾತ್ರೆ
ಕಾಂಗ್ರೆಸ್ ಅವರ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಹೆದರಲ್ಲ. ನಿಮ್ಮ ವಿರುದ್ಧ ಹೋರಾಟ ಮಾಡದಿದ್ದರೆ ಭಗವಂತ ಕೂಡ ಮೆಚ್ಚಲ್ಲ. ನಿಮ್ಮ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ. ನಮ್ಮ ಪಕ್ಷದ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಹಿರಿಯರು ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡಿದ್ದೇವೆ. ಆಗಸ್ಟ್ 3ರಿಂದ ಪಾದಯಾತ್ರೆ ಆರಂಭವಾಗಿ, ಆಗಸ್ಟ್ 10ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಡವರ ಪರವಾಗಿ ಈ ಹೋರಾಟ ನಡೆಯಲಿದೆ.