ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ (Govt Employees) ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಆಗ್ರಹಿಸುತ್ತಲೇ ಇದೆ. ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಗೈರುಹಾಜರಿ ಮುಷ್ಕರ ಆರಂಭಿಸುವುದಾಗಿ ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ (CS Shadakshari) ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಿ ನೌಕರರ ಸಂಘದಿಂದ ಜುಲೈ 12ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
7ನೇ ವೇತನ ಆಯೋಗ ಜಾರಿ, ಹಳೇ ಪಿಂಚಣಿ ಪದ್ಧತಿಯನ್ನು ಮತ್ತೆ ಜಾರಿಗೆ ತರುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜುಲೈ 12ರಂದು ಬೆಂಗಳೂರಿನ ವಿಕಾಸಸೌಧದಲ್ಲಿರುವ ಗಾಂಧಿ ಪ್ರತಿಮೆ ಎದುರು ಮಧ್ಯಾಹ್ನ 1.30ಕ್ಕೆ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಸಚಿವಾಲಯಗಳ ಅಧಿಕಾರಿಗಳು ಅಥವಾ ನೌಕರರೊಂದಿಗೆ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಎಲ್ಲ ನೌಕರರು ಭಾಗವಹಿಸಬೇಕು ಎಂದು ಸಂಘವು ಕೋರಿದೆ.
ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು
1) ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸುವುದು: ರಾಜ್ಯ 7ನೇ ವೇತನ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಯಥಾವತ್ತಾಗಿ 01-07-2022ರಿಂದ ಅನ್ವಯವಾಗುವಂತೆ ವೇತನ ನಿಗದಿಪಡಿಸಿ, ದಿ: 01-04-2024 ರಿಂದ ಆರ್ಥಿಕ ಸೌಲಭ್ಯವನ್ನು ನೀಡಿ ಸರ್ಕಾರಿ ಆದೇಶ ಹೊರಡಿಸುವುದು.
2) ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು: ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತೀಸ್ ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್.
ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.
3) ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಯನ್ನು ಜಾರಿಗೆ ತರಲು ಈ ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ದಿನಾಂಕ: 05-09-2022 ರಂದು ಸರ್ಕಾರಿ ಆದೇಶ ಹೊರಡಿಸಿರುತ್ತದೆ. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ಚಿಕಿತ್ಸೆ ಪಡೆಯಲು ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವುದು.
ವೇತನ ಆಯೋಗ ವರದಿ
ರಾಜ್ಯ 6ನೇ ವೇತನ ಆಯೋಗದ ವರದಿಯು ಅನುಷ್ಟಾನಗೊಂಡು ದಿ: 31-06-2022ಕ್ಕೆ 5 ವರ್ಷ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ದಿನಾಂಕ:01-07-2022ರಿಂದ ಪರಿಷ್ಕರಣೆಗೊಳಿಸಬೇಕಾಗಿತ್ತು. ಸಂಘವು ಸರ್ಕಾರಕ್ಕೆ ಒತ್ತಡ ತಂದ ಹಿನ್ನೆಲೆಯಲ್ಲಿ; ಈ ಹಿಂದಿನ ಸರ್ಕಾರವು 19-11-2022 ರಂದು ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಕೆ.ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗವನ್ನು ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು. ಆಯೋಗವು ದಿ:16-03-2024ರಂದು ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದೆ. ವೇತನ ಆಯೋಗ ರಚನೆಯಾಗಿ ಇಂದಿಗೆ 19 ತಿಂಗಳು ಕಳೆದಿದ್ದು, ಇಂದಿಗೆ ಸರ್ಕಾರ ವರದಿ ಪಡೆದು 04 ತಿಂಗಳು ಪೂರ್ಣಗೊಳ್ಳುತ್ತಿದೆ.
ಈ ಮಧ್ಯೆ ಸಂಘವು ದಿನಾಂಕ: 01-03-2023 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡ ಪರಿಣಾಮ ಸರ್ಕಾರವು ದಿನಾಂಕ: 01-04-2023 ರಿಂದ ಅನ್ವಯವಾಗುವಂತೆ ಶೇ. 17 ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಸರ್ಕಾರಿ ಆದೇಶ ಹೊರಡಿಸಿತ್ತು. 27-02-2024ರಂದು ರಾಜ್ಯ ಮಟ್ಟದ ಮಹಾ ಸಮ್ಮೇಳನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ, 7ನೇ ವೇತನ ಆಯೋಗವು ವರದಿ ನೀಡಿದ ನಂತರ ಜಾರಿಗೊಳಿಸುವ ಸ್ಪಷ್ಟ ಭರವಸೆಯನ್ನು ನೌಕರರಿಗೆ ನೀಡಿದ್ದರು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಸಂಘದ ನಿಯೋಗ
ಹಲವಾರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಹಳೇ ಪಿಂಚಣಿ ಯೋಜನೆ
ಸಂಘದ ಮತ್ತೊಂದು ಪ್ರಮುಖ ಬೇಡಿಕೆಯಾದ 2006ರ ನಂತರ ಸರ್ಕಾರಿ ಸೇವೆಗೆ ನೇಮಕವಾದ ನೌಕರರ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ದಿ: 01-03-2023 ರಂದು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯು ಇದುವರೆವಿಗೂ ಒಂದೂ ಸಭೆಯನ್ನು ನಡೆಸಿಲ್ಲ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನವನ್ನೂ ಸಹ ನಡೆಸಿಲ್ಲ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೆ ಯಾವುದೇ ವರದಿಯನ್ನು ಇಲ್ಲಿಯವರೆಗೂ ನೀಡಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನು ನೀಡಿದೆ. ಎನ್.ಪಿ.ಎಸ್. ಯೋಜನೆಯಲ್ಲಿ ನೇಮಕಗೊಂಡು ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ ಮಾಸಿಕ ಕೇವಲ ರೂ.1500 ಪಿಂಚಣಿ ಲಭ್ಯವಾಗುತ್ತಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2.50 ಲಕ್ಷ ಎನ್.ಪಿ.ಎಸ್ ಯೋಜನೆ ವ್ಯಾಪ್ತಿಯ ನೌಕರರ ಸಂಧ್ಯಾ ಕಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ದುಸ್ತರಗೊಳ್ಳುತ್ತಿದೆ.
ಆರೋಗ್ಯ ಸಂಜೀವಿನಿ ಯೋಜನೆ
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಗೆ ಈ ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೋಜನೆಯ ರೂಪ-ರೇಷೆಗಳನ್ನು ಸಿದ್ಧಪಡಿಸಿ ನಿರ್ವಹಣೆ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಜವಾಬ್ದಾರಿಯನ್ನು ನೀಡಿ 5-9-2022 ರಂದು ಸರ್ಕಾರಿ ಆದೇಶ ಹೊರಡಿಸಿದೆ. ಹಿಂದಿನ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಈ ಯೋಜನೆಯನ್ನು 20-03-2023
ರಂದು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದ್ದರು. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ರಾಜ್ಯದ ಬಹಳಷ್ಟು ಸಿ ಮತ್ತು ಡಿ ವರ್ಗದ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಗಂಭೀರ ಸ್ವರೂಪದ ಖಾಯಿಲೆಗಳಾದಲ್ಲಿ ಲಕ್ಷಾಂತರ ರೂಗಳನ್ನು ಭರಿಸಲು ಕಷ್ಟವಾಗುತ್ತಿದೆ ಎನ್ನುವುದನ್ನು ಷಡಾಕ್ಷರಿ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ: Job Alert: KSRTCಯಿಂದ ಬೃಹತ್ ನೇಮಕಾತಿ; 13,000 ಚಾಲಕ ಹುದ್ದೆಗಳಿಗೆ 7ನೇ ತರಗತಿ ಪಾಸಾದವರು ಅಪ್ಲೈ ಮಾಡಿ