Site icon Vistara News

Jayalalitha: ಬೆಂಗಳೂರಿನಿಂದ ಜಯಯಲಿತಾ ಚಿನ್ನಾಭರಣ ಕೊಂಡೊಯ್ಯಲು ತಮಿಳುನಾಡಿನಿಂದ ಬರಲಿದೆ 6 ಟ್ರಕ್ಕು!

j jayalalitha

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ (Illeagal assets) ಬೆಂಗಳೂರಿನಲ್ಲಿ ನ್ಯಾಯಾಲಯದಿಂದ ವಿಚಾರಣೆಗೀಡಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ (J Jayalalitha) ಅವರ ಚಿನ್ನಾಭರಣಗಳು (Gold ornaments) ಹಾಗೂ ಬೆಲೆಬಾಳುವ ಸೊತ್ತುಗಳನ್ನು ಮರಳಿ ತಮಿಳುನಾಡಿಗೆ (Tamil Nadu) ಕೊಂಡೊಯ್ಯಲು 6 ಟ್ರಕ್ಕುಗಳು ಬರಲಿವೆ!

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸಲು ಕರ್ನಾಟಕ ಹೈಕೋರ್ಟ್ ದಿನಾಂಕ ನಿಗದಿ ಮಾಡಿದೆ. ಆ ದಿನ ಸ್ವತಃ ಬಂದು ಜಯಲಲಿತಾ ಚಿನ್ನಾಭರಣ ಇತ್ಯಾದಿ ಮರಳಿ ಪಡೆಯಲು ತಮಿಳುನಾಡು ಗೃಹ ಕಾರ್ಯದರ್ಶಿಗೆ ಆದೇಶಿಸಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಭರಣಗಳಿ ಸದ್ಯ ಕರ್ನಾಟಕ ಸರ್ಕಾರದ ವಶದಲ್ಲಿದ್ದು, ಅವುಗಳನ್ನು ಹಿಂಪಡೆಯುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಮಾರ್ಚ್ 6 ಮತ್ತು 7ರಂದು ಖುದ್ದು ಹಾಜರಾಗಿ ಸ್ವೀಕರಿಸುವಂತೆ ತಮಿಳುನಾಡು ರಾಜ್ಯ ಗೃಹ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ತಗಲಿದ ವೆಚ್ಚಕ್ಕಾಗಿ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕೂಡ ಕೋರ್ಟ್ ಆದೇಶಿಸಿದೆ.

1996ರಲ್ಲಿ ಜಯಲಲಿತಾ ಆದಾಯ ಮೀರಿ ಆಸ್ತಿ ಸೇರಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಇಲಾಖೆ ಪ್ರಕರಣ ದಾಖಲಿಸಿತ್ತು. ಜಯಲಲಿತಾ ಅವರ ಬೋಯಸ್ ಗಾರ್ಡನ್ ನಿವಾಸದ ಮೇಲೆ ನಡೆದ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ವಜ್ರಾಭರಣಗಳು, ಬೆಳ್ಳಿ ವಸ್ತುಗಳು, ಕೈಗಡಿಯಾರಗಳು, ಪಾದರಕ್ಷೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಯಲಲಿತಾ ಅವರ ಆಸ್ತಿ ಪ್ರ ಕರಣ ಬೆಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿದ್ದುದರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿದಂತೆ ಎಲ್ಲ ವಸ್ತುಗಳನ್ನು ಇಲ್ಲಿನ ಖಜಾನೆಯಲ್ಲಿ ಇಡಲಾಗಿತ್ತು.

2016ರಲ್ಲಿ ಅನಾರೋಗ್ಯದಿಂದ ಜಯಲಲಿತಾ ನಿಧನರಾಗಿದ್ದರು. ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ತಪ್ಪಿತಸ್ಥರೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು ಮತ್ತು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಇದಾದ ಬಳಿಕ ಶಶಿಕಲಾ ಸೇರಿದಂತೆ ಮೂವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು.

ಈ ನಡುವೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಜಯಲಲಿತಾ ಅವರ ವಸ್ತುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು
ಕಲ್ಯಾಣ ಯೋಜನೆಗಳಿಗೆ ಬಳಸಬೇಕು ಎಂದು ಆಗ್ರಹಿಸಿದರು. ಜಯಲಲಿತಾ ಅವರ ಸೊಸೆ ಜೆ.ದೀಪಾ ಅವರು, ಸರ್ಕಾರ ಜಪ್ತಿ ಮಾಡಿರುವ ಜಯಲಲಿತಾ ಅವರ ಆಸ್ತಿಗಳ ಮೇಲೆ ತನಗೆ ಹಕ್ಕಿದೆ ಮತ್ತು ಅವುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು. ಅವರ ಅರ್ಜಿಯನ್ನು ವಜಾಗೊಳಿಸಲಾಗಿತ್ತು.

ಈ ಎಲ್ಲಾ ಆಭರಣಗಳು ಈಗ ಕರ್ನಾಟಕದ ಖಜಾನೆಯಲ್ಲಿವೆ. ಇತ್ತೀಚೆಗೆ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಯಲಲಿತಾ ಅವರಿಗೆ ಸೇರಿದ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬಂದಾಗ, ಆಭರಣಗಳನ್ನು ಹರಾಜು ಮಾಡುವ ಬದಲು ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಮೂಲಕ ತಮಿಳುನಾಡಿಗೆ ವರ್ಗಾಯಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟು, ತಮಿಳುನಾಡು ಸರ್ಕಾರವು ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಿ ಆಭರಣಗಳನ್ನು ಸಂಗ್ರಹಿಸಲು ಪೊಲೀಸರೊಂದಿಗೆ ಬರುವಂತೆ ಆದೇಶಿಸಿತು.

ಈ ಪ್ರಕರಣದಲ್ಲಿ ತಮಿಳುನಾಡು ಗೃಹ ಕಾರ್ಯದರ್ಶಿ ಖುದ್ದು ಹಾಜರಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣವನ್ನು ಮಾರ್ಚ್ 6 ಮತ್ತು 7ರಂದು ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ. ಚಿನ್ನಾಭರಣ ಪಡೆಯುವ ದಿನದಂದು ಅಗತ್ಯ ಭದ್ರತಾ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಬೆಂಗಳೂರಿನಿಂದ 6 ಟ್ರಕ್‌ಗಳಲ್ಲಿ ಜಯಲಲಿತಾ ಅವರಿಗೆ ಸೇರಿದ 28 ಕೆಜಿ ಚಿನ್ನ, ವಜ್ರಾಭರಣಗಳು, 800 ಕೆಜಿ ಬೆಳ್ಳಿ ಆಭರಣಗಳು, 11,344 ದುಬಾರಿ ರೇಷ್ಮೆ ಸೀರೆಗಳು ಮತ್ತು 740 ದುಬಾರಿ ಸ್ಯಾಂಡಲ್‌ಗಳನ್ನು ಕೊಂಡೊಯ್ದು ತಮಿಳುನಾಡಿಗೆ ತಲುಪಿಸಲಾಗುತ್ತದೆ.

ಇವುಗಳ ಮೌಲ್ಯ ಹಲವು ಕೋಟಿಗಳಾಗಿರಬಹುದು ಎಂದು ಹೇಳಲಾಗಿದೆ. ಅವುಗಳನ್ನು ತಮಿಳುನಾಡು ಸರ್ಕಾರದ ಖಜಾನೆಯಲ್ಲಿ ಇರಿಸಲಾಗುವುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Jayalalitha Case : ಜಯಲಲಿತಾ ಕೈಲಿದ್ದ 7 ಕೆಜಿ ಚಿನ್ನ, 11,344 ರೇಷ್ಮೆ ಸೀರೆ, 740 ಚಪ್ಪಲಿಗಳನ್ನು ಏನ್ಮಾಡ್ತಾರೆ?

Exit mobile version