ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲಿಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಸಂಕಷ್ಟ ಎದುರಾಗಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದ ಕುರಿತು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ ಸಮ್ಮತಿಯನ್ನು ಹಿಂಪಡೆದಿರುವ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ (High Court) ಆರಂಭಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ ತನಿಖೆಗೆ ಸಮ್ಮತಿ ಸೂಚಿಸಲಾಗಿತ್ತು. ಇದನ್ನು ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸರ್ಕಾರವು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಿಬಿಐ ಹಾಗೂ ಯತ್ನಾಳ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್, ನ್ಯಾ.ಉಮೇಶ್ ಎಂ. ಅಡಿಗ ಅವರ ನ್ಯಾಯಪೀಠವು ವಿಚಾರಣೆ ಆರಂಭಿಸಿದೆ.
#KarnatakaHighCourt hears petitions by BJP MLA Basangouda Patil Yatnal and CBI challenging withdrawal of consent for CBI probe into corruption allegations against Deputy CM DK Shivakumar.@BasanagoudaBJP @CBIHeadquarters
— Bar & Bench (@barandbench) April 5, 2024
Track thread for updates. pic.twitter.com/P43R6zHtPz
ಸಿಬಿಐ ಪರ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿದರು. “2020ರ ಮಾರ್ಚ್‌ನಿಂದಲೂ ಸಿಬಿಐ ತನಿಖೆ ನಡೆಸುತ್ತಿದೆ. ಈಗಲೂ ತನಿಖೆ ಪ್ರಗತಿಯಲ್ಲಿದೆ. ಆದರೆ, ತನಿಖೆಯ ಸಮ್ಮತಿ ಹಿಂಪಡೆದ ಸರ್ಕಾರದ ಕ್ರಮವು ಕಾನೂನುಬಾಹಿರವಾಗಿದೆ” ಎಂದು ಹೇಳಿದರು. ಇದಕ್ಕೆ ಹೈಕೋರ್ಟ್, “ಸಿಆರ್‌ಪಿಸಿ ಅಡಿಯಲ್ಲಿ ತನಿಖೆಗೆ ಕಾಲಮಿತಿ ಇಲ್ಲವೇ” ಎಂಬುದಾಗಿ ಪ್ರಶ್ನಿಸಿತು. ಇದಾದ ಬಳಿಕ ಏಪ್ರಿಲ್ 18ಕ್ಕೆ ವಿಚಾರಣೆಯನ್ನು ಮುಂದೂಡಿತು.
ಸಿಬಿಐ ತನಿಖೆ ಪ್ರಕರಣ ಮತ್ತು ಇಲ್ಲಿವರೆಗೆ ನಡೆದಿದ್ದೇನು?
- ಡಿ.ಕೆ ಶಿವಕುಮಾರ್ ಅವರು ಆದಾಯಕ್ಕಿಂತ ಅಧಿಕ ಆಸ್ತಿ ಸಂಗ್ರಹ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು.
- ಹಿಂದಿನ ಸರ್ಕಾರದ ಆದೇಶ ರದ್ದು ಕೋರಿ ಡಿಕೆ ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಡಿಕೆಶಿ ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿತ್ತು. ವಿಭಾಗೀಯ ಪೀಠದ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
- ಎರಡು ವಾರಗಳಲ್ಲಿ ಮೇಲ್ಮನವಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ (supreme court) ಹೈಕೋರ್ಟ್ನ ವಿಭಾಗೀಯ ಪೀಠ ನಿರ್ದೇಶನ ನೀಡಿತ್ತು. ಡಿಕೆಶಿ ಸಲ್ಲಿಸಿದ್ದ ಮೇಲ್ಮನವಿ ಅಂತಿಮ ತೀರ್ಪನ್ನು ನೀಡಲು ಹೈಕೋರ್ಟ್ ನವೆಂಬರ್ 29ರ ದಿನವನ್ನು ನಿಗದಿಪಡಿಸಿತ್ತು.
- ಈ ನಡುವೆ ಹಾಲಿ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ಹಿಂಪಡೆದಿತ್ತು. ಅದಾದ ಬಳಿಕ ಮಧ್ಯಂತರ ತಡೆ ಕೋರಿದ್ದ ಅರ್ಜಿಯನ್ನು ಹಿಂಪಡೆಯುವುದಾಗಿ ಸರ್ಕಾರ ಹೇಳಿದ್ದನ್ನು ಕೋರ್ಟ್ ಒಪ್ಪಿಕೊಂಡಿತ್ತು.
- ಪ್ರಕರಣವನ್ನು ತನ್ನ ಕೈಯಿಂದ ಹಿಂಪಡೆದು ಲೋಕಾಯುಕ್ತಕ್ಕೆ ಒಪ್ಪಿಸುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಿಬಿಐ ಕೋರ್ಟ್ ಮೊರೆ ಹೋಗಿತ್ತು.
ಇದನ್ನೂ ಓದಿ: DK Shivakumar: ಎಷ್ಟು ದಿನ ಇರ್ತೇನೋ ಗೊತ್ತಿಲ್ಲ ಎಂದ ಡಿಕೆಶಿ; ಅವರ ಕುರ್ಚಿಗೂ ಕಂಟಕ?