Site icon Vistara News

Karnataka Job Reservation: ಕನ್ನಡಿಗರಿಗೆ ಮೀಸಲಾತಿ ನೀಡಲು ಕರವೇ ಆಗ್ರಹ; ʼಫೋನ್ ಪೇʼ ಬಾಯ್ಕಾಟ್ ಅಭಿಯಾನ ಶುರು!

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ (Karnataka Job Reservation) ಜಾರಿಗೆ ಆಗ್ರಹಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕನ್ನಡ ಪರ ಸಂಘಟನೆಗಳಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಕಾಯ್ದೆ ಜಾರಿ ಮಾಡುವುದಾಗಿ ಹೇಳಿದ ಬೆನ್ನಲ್ಲೇ ನಿರ್ಧಾರ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಮತ್ತೊಂದೆಡೆ ಕನ್ನಡಿಗರಿಗೆ ಮೀಸಲಾತಿ ಕಾಯ್ದೆಗೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ʼಫೋನ್ ಪೇʼ ಬಾಯ್ಕಾಟ್ ಅಭಿಯಾನ (‘PhonePe’ boycott campaign) ಶುರುವಾಗಿದೆ.

ಖಾಸಗಿ ಕಂಪನಿಗಳ ಒತ್ತಡಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯಬಾರದು. ಶೀಘ್ರವೇ ಮಸೂದೆ ಜಾರಿಗೊಳಿಸಬೇಕೆಂದು ಕನ್ನಡಪರ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆದಿದೆ. ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈಗೆ ಕನ್ನಡದ ನೆಲ, ಜಲ ಬೇಕು. ಆದರೆ, ಕನ್ನಡಿಗರಿಗೆ ನೌಕರಿ ಕೊಡಿ ಎಂದರೆ ಇವರಿಗೆ ತೊಂದರೆ. ನಾವು ಮುಂದಿನ ದಿನಗಳಲ್ಲಿ ಅವರ ಕಂಪನಿಗಳಿಗೆ ಮುತ್ತಿಗೆ ಹಾಕುತ್ತೇವೆ. ಸಿಎಂ ಮಸೂದೆ ಜಾರಿಗೆ ತರದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಕರವೇ ಪ್ರವೀಣ್ ಶೆಟ್ಟಿ ಹೇಳಿದರು.

ಈ ವೇಳೆ ಕಿರಣ್ ಮಜುಂದಾರ್ ಶಾ, ಮೋಹನ್‌ ದಾಸ್‌ ಪೈ ಭಾವಚಿತ್ರ ಹಿಡಿದು ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಫೋನ್ ಪೇ ಬಾಯ್ಕಾಟ್ ಮಾಡುವಂತೆ ಅಭಿಯಾನ ಆರಂಭ

ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡಿಗರ ವಿಷಯದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಉದ್ಧಟತನ ತೋರಿದ್ದಾರೆ. ಹೀಗಾಗಿ ಫೋನ್‌ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ. 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲಿಟ್ ಮಾಡುವಂತೆ ಅಭಿಯಾನ ಶುರು ಮಾಡಲಾಗಿದೆ.

ಇನ್ನು ಕೆಲ ನೆಟ್ಟಿಗರು, ಯಾರಾದರೂ ನನ್ನ ಹೆಸರಲ್ಲಿ ಫೋನ್ ಪೇ ಮಾಡಿ ಎಂದರೆ ಯಾರು ಮಾಡಬೇಡಿ. ಯಾಕೆಂದರೆ ನನ್ನ ಹತ್ತಿರ ಫೋನ್ ಪೇ ಇಲ್ಲ. ಕನ್ನಡಿಗರಿಗೆ ಕೆಲಸದಲ್ಲಿ ಮೀಸಲಾತಿ ಕೊಡುವುದಕ್ಕೆ ಎದುರು ಮಾಡಿರುವ ಫೋನ್‌ಪೇ ಸಿಇಒಗೆ ಬುದ್ಧಿ ಕಲಿಸಲು ಫೋನ್‌ಪೇ ಅನ್‌ಇನ್ಸ್ಟಾಲ್ ಮಾಡಿ. ಕನ್ನಡಿಗರ ಬಲ ತೋರಿಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

25,000 ಜನರಿಗೆ ಉದ್ಯೋಗ ಕೊಟ್ಟಿದ್ದೇನೆ, ನನ್ನ ಮಕ್ಕಳು ರಾಜ್ಯದಲ್ಲಿ ಕೆಲಸ ಮಾಡಬಾರದಾ?: ಫೋನ್‌ಪೇ ಸಿಇಒ

Sameer Nigam

ಬೆಂಗಳೂರು: ಕರ್ನಾಟಕದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75 ಮೀಸಲಾತಿ (Karnataka Jobs Reservation) ನಿಗದಿಪಡಿಸುವ ಕರಡು ಮಸೂದೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಸದ್ಯ ಈ ಬಗ್ಗೆ ಪರ-ವಿರೋಧ ಅಬಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆ ಫೋನ್‌ಪೇ (PhonePe) ಸಿಇಒ ಮತ್ತು ಸಹ ಸಂಸ್ಥಾಪಕ ಸಮೀರ್ ನಿಗಮ್ (Sameer Nigam) ಅವರು ಕರ್ನಾಟಕ ಸರ್ಕಾರದ ಖಾಸಗಿ ಉದ್ಯೋಗ ಕೋಟಾ ಮಸೂದೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Jobs Reservation: ಉರಿವ ಮನೆಯಿಂದ ಗಳ ಹಿರಿದ ಆಂಧ್ರಪ್ರದೇಶ; ʼನಮ್ಮಲ್ಲಿಗೇ ಬನ್ನಿʼ ಎಂದು ಖಾಸಗಿ ಉದ್ಯಮಗಳಿಗೆ ಭಿಕ್ಷಾಪಾತ್ರೆ ಒಡ್ಡಿದ ಸಚಿವ

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ನನಗೆ 46 ವರ್ಷ ವಯಸ್ಸು. ನಾನು ಯಾವುದೇ ರಾಜ್ಯದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ವಾಸಿಸಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ದೇಶಾದ್ಯಂತ ಕಾರ್ಯ ನಿರ್ವಹಿಸಿದ್ದಾರೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ಸ್ಥಾಪಿಸಿ ಭಾರತದಾದ್ಯಂತ 25,000+ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ಹಾಗಾದರೆ ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?ʼʼ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಈ ಮಸೂದೆಯನ್ನು ತಡೆಹಿಡಿಯುವ ಮೊದಲ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದರು.

Exit mobile version