Site icon Vistara News

Karnataka Jobs Reservation: ಉರಿವ ಮನೆಯಿಂದ ಗಳ ಹಿರಿದ ಆಂಧ್ರಪ್ರದೇಶ; ʼನಮ್ಮಲ್ಲಿಗೇ ಬನ್ನಿʼ ಎಂದು ಖಾಸಗಿ ಉದ್ಯಮಗಳಿಗೆ ಭಿಕ್ಷಾಪಾತ್ರೆ ಒಡ್ಡಿದ ಸಚಿವ

Karnataka Jobs Reservation

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಮೀಸಲು (Karnataka Jobs Reservation) ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರದ (Karnataka Government) ನಿಲುವಿನಿಂದಾಗಿ ಸೃಷ್ಟಿಯಾದ ಗೊಂದಲದ ನಡುವೆ, ʼಉರಿಯುವ ಮನೆಯಲ್ಲಿ ಗಳ ಹಿರಿದರುʼ ಎಂಬಂತೆ ಲಾಭ ಮಾಡಿಕೊಳ್ಳಲು ಆಂಧ್ರಪ್ರದೇಶ (Andhra Pradesh) ಮುಂದಾಗಿದೆ.

ಕರ್ನಾಟಕ ಸರಕಾರದ ನಿಲುವಿನ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಾಸ್ಕಾಂ ಸಂಘಟನೆಯ ಟ್ವೀಟ್‌ ಅನ್ನು ಶೇರ್‌ ಮಾಡಿರುವ ಆಂಧ್ರಪ್ರದೇಶ ಮಾನವ ಸಂಪನ್ಮೂಲ ಇಲಾಖೆ ಸಚಿವ ಲೋಕೇಶ್‌ ನಾರಾ, ʼನಮ್ಮಲ್ಲಿಗೆ ಬನ್ನಿʼ ಎಂದು ಖಾಸಗಿ ಕಂಪನಿಗಳಿಗೆ ಕರೆ ನೀಡಿದ್ದಾರೆ.

“ನಿಮ್ಮ ನಿರಾಶೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ವೈಜಾಗ್‌ನಲ್ಲಿರುವ ನಮ್ಮ IT, IT ಸೇವೆಗಳು, AI ಮತ್ತು ಡೇಟಾ ಸೆಂಟರ್ ಕ್ಲಸ್ಟರ್‌ಗೆ ನಿಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಳಾಂತರಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ನಾವು ನಿಮಗೆ ಅತ್ಯುತ್ತಮ ದರ್ಜೆಯ ಸೌಲಭ್ಯಗಳು, ತಡೆರಹಿತ ವಿದ್ಯುತ್, ಮೂಲಸೌಕರ್ಯ ಮತ್ತು ನಿಮ್ಮ ಐಟಿ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ನಿರ್ಬಂಧಗಳಿಲ್ಲದೆ ಅತ್ಯಂತ ಸೂಕ್ತವಾದ ಕೌಶಲ್ಯಭರಿತ ಪ್ರತಿಭೆಗಳನ್ನು ನೀಡುತ್ತೇವೆ. ಆಂಧ್ರಪ್ರದೇಶ ನಿಮ್ಮನ್ನು ಸ್ವಾಗತಿಸಲು ಸಿದ್ಧವಾಗಿದೆ. ದಯವಿಟ್ಟು ಸಂಪರ್ಕದಲ್ಲಿರಿ!” ಎಂದು ನಾರಾ ಟ್ವೀಟ್‌ ಮಾಡಿದ್ದಾರೆ.

“ಕರ್ನಾಟಕದ ಜಿಡಿಪಿಗೆ ಖಾಸಗಿ ಉದ್ಯಮ ವಲಯ 25% ಕೊಡುಗೆ ನೀಡುತ್ತಿದೆ. ಆದರೆ ಕೌಶಲ್ಯಭರಿತ ಉದ್ಯೋಗಿಗಳ ಕೊರತೆಯಿದೆ. ಇಂಥ ಕಾನೂನು ತಂದರೆ ಉದ್ಯಮ ನಡೆಸುವುದು ಕಷ್ಟವಾಗಲಿದ್ದು, ಉದ್ಯಮಿಗಳು ಬೇರೆ ಕಡೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ” ಎಂದು ಔದ್ಯಮಿಕ ಒಕ್ಕೂಟ ನಾಸ್ಕಾಮ್‌ (NASSCOM) ಎಚ್ಚರಿಕೆ ನೀಡಿತ್ತು.

ಸರ್ಕಾರದ ನಿಲುವಿಗೆ ಬಿವೈ ವಿಜಯೇಂದ್ರ ಖಂಡನೆ

ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಒದಗಿಸುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲು ಬಗ್ಗೆ ವಿಧೇಯಕ ತಡೆಹಿಡಿದ ಸರಕಾರದ ಕ್ರಮವನ್ನು ಅವರು ಟೀಕಿಸಿದ್ದಾರೆ. ಈ ಬಗ್ಗೆ ಅವರು ʼಎಕ್ಸ್‌ʼನಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ? ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ?” ಎಂದು ಅವರು ಪ್ರಶ್ನಿಸಿದ್ದಾರೆ. “ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಖಂಡಿಸುವೆ” ಎಂದಿದ್ದಾರೆ.

“ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು ‘ಎಂದು ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ? ಮುಖ್ಯಮಂತ್ರಿಗಳು ಈ ಕುರಿತು ತಮ್ಮ X ಖಾತೆಯಲ್ಲಿ ಮೂರು ಬಾರಿ ‘ಯೂ ಟರ್ನ್ ಹೊಡೆದು’ ಕೊನೆಗೂ ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ಅಂಜುಬುರುಕ ನಿರ್ಧಾರದ ಹಿಂದೆ ನಾಡಿನ ಆತ್ಮ ಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ”

“ಇಂಡಿ ಕೂಟದಲ್ಲಿ ಯಾವಾಗ ಬಿರುಕು ಮೂಡುತ್ತದೋ ಎಂಬ ಭೀತಿಯಲ್ಲಿರುವ ದೆಹಲಿಯ ದೊಡ್ಡ ‘ಕೈ’ ಮುಖ್ಯಮಂತ್ರಿಗಳ ಕೈ ಕಟ್ಟಿಹಾಕಿರಲೇಬೇಕು, ಇಲ್ಲದಿದ್ದರೇ ಕನ್ನಡಿಗರ ಬದುಕು ಹಸನಾಗಿಸುವ ವಿಧೇಯಕವನ್ನು ಬದಿಗೆ ಸರಿಸುವ ಪಲಾಯನವಾದಿ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ? ಸದ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಮುತ್ತಿರುವ ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದ ತತ್ತರಿಸಿರುವ ಕಾಂಗ್ರೆಸ್ ತನ್ನ ಮುಖ ಮುಚ್ಚಿಕೊಳ್ಳಲು ಹಗರಣದ ಚರ್ಚೆ ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸಲು ಹಾಗೂ ಜನರ ಗಮನ ವಿಚಲಿತಗೊಳಿಸುವ ಕುತಂತ್ರದಿಂದ ಕನ್ನಡ ಪರ ವಿಧೇಯಕವನ್ನು ತಡೆಹಿಡಿದು ಗುರಾಣಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದರೆ ರಾಜ್ಯದ ಜನತೆ ಕಾಂಗ್ರೆಸ್ಸಿಗರನ್ನು ಎಂದಿಗೂ ಕ್ಷಮಿಸರು.”

“ವಿಧೇಯಕದ ಕುರಿತು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಬೀಗಿದ್ದ ಸಚಿವರುಗಳು ಹಾಗೂ ಕಾಂಗ್ರೆಸ್ ಮುಖಂಡರು ಕೆಲವೇ ಸಮಯದ ಅಂತರದಲ್ಲಿ ನಾಡ ಜನರ ಬಗೆಗಿನ ಐತಿಹಾಸಿಕ ವಿಧೇಯಕ ಹಿಂತೆಗೆದುಕೊಂಡ ಬಗ್ಗೆ ಸಮಸ್ತ ಕನ್ನಡ ಜನತೆಯ ಮುಂದೆ ತಲೆ ಎತ್ತಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಅರ್ಹತೆ ಇದ್ದರೂ ಉದ್ಯೋಗಾವಕಾಶಗಳಿಂದ ವಂಚಿತರಾಗಿ ಹತಾಶೆಗೊಳಗಾಗಿದ್ದ ಗ್ರಾಮೀಣ ಭಾಗದ ಲಕ್ಷಾಂತರ ನಿರುದ್ಯೋಗಿಗಳಿಗೆ ಭರವಸೆಯ ಬೆಳಕು ಮೂಡಿಸಿದ್ದ ಕನ್ನಡಿಗರ ಉದ್ಯೋಗ ಮೀಸಲಾತಿಯ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸಲಿ, ಇಲ್ಲವೇ ಕನ್ನಡಿಗರ ಆಕ್ರೋಶ ಎದುರಿಸಲು ಸಿದ್ದವಾಗಲಿ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Karnataka Jobs Reservation : ಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮೀಸಲಾತಿ ಮಸೂದೆಗೆ ತಾತ್ಕಾಲಿಕ ತಡೆ; ಉದ್ಯಮಿಗಳ ಒತ್ತಡ?

Exit mobile version