ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಮೀಸಲು (Karnataka Jobs Reservation) ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರದ (Karnataka Government) ನಿಲುವಿನಿಂದಾಗಿ ಸೃಷ್ಟಿಯಾದ ಗೊಂದಲದ ನಡುವೆ, ನಾಲ್ವರು ಸಚಿವರು ಇಂದು ವಿಧಾನಸಭೆಯಲ್ಲಿ (Vidhan sabha) ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಈ ವಿಚಾರದಲ್ಲಿ ಕಾನೂನಾತ್ಮಕ ಸಮಸ್ಯೆ ಇದ್ದು, ಇದರ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಮಂಗಳವಾರ (ಜು.16) ಅನುಮೋದನೆ ನೀಡಿತ್ತು. ಇದಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಇನ್ನೂ ಅನೇಕ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಮುಜುಗರಕ್ಕೆ ಒಳಗಾದ ಸರಕಾರ, ವಿಧೇಯಕ ಜಾರಿಗೆ ಹಿಂದೇಟು ಹಾಕಿದೆ. ಈ ಹಿನ್ನೆಲೆಯಲ್ಲಿ ಇಂದು (ಜು.18) ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಾಲ್ವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.
ʼಕನ್ನಡಿಗರ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಿದೆ. ನಮ್ಮ ಮಾನವ ಸಂಪನ್ಮೂಲಕ್ಕೆ ಖಾಸಗಿ ವಲಯದಲ್ಲಿ ಸಾಕಷ್ಟು ಡಿಮ್ಯಾಂಡ್ ಇದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕವನ್ನು ಕಾನೂನಾತ್ಮಕವಾಗಿ ನೋಡಬೇಕಾಗುತ್ತೆ. ಹರ್ಯಾಣ, ಆಂಧ್ರಪ್ರದೇಶದಲ್ಲಿ ಈ ಬಿಲ್‌ಗೆ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ ಹೀಗಾಗಿ ಜಾರಿಗೆ ಮುನ್ನ ಸಾಕಷ್ಟು ಚರ್ಚೆ ಮಾಡಬೇಕಾಗಿದೆʼ ಎಂದು ಖರ್ಗೆ ತಿಳಿಸಿದರು.
ಕರಡು ವಿಧೇಯಕ ಸಚಿವ ಸಂಪುಟದ ಮುಂದೆ ಇದೆ. ವಿಧೇಯಕ ಅನುಷ್ಠಾನಕ್ಕೆ ಸಾಕಷ್ಟು ಪ್ರಕ್ರಿಯೆಗಳಿವೆ. ಈ ಬಿಲ್ ವಿಚಾರವಾಗಿ ಇನ್ನಷ್ಟು ಚರ್ಚೆ ಮಾಡಬೇಕಿದೆ. ಆಂಧ್ರಪ್ರದೇಶದವರೂ ಅದೇ ಬಿಲ್ ಮಾಡಿ ಕೈ ಸುಟ್ಟುಕೊಂಡರು. ಇದೀಗ ಅಲ್ಲಿನ ಸಚಿವ ನಾರಾ ಲೋಕೇಶ್ ಅವರು ಐಟಿ ಕಂಪನಿಗಳಿಗೆ ಆಹ್ವಾನ ನೀಡಿ ಟ್ವೀಟ್ ಮಾಡಿದ್ದಾರೆ. ಮಾಡಲಿ. ಆದರೆ ಇಲ್ಲಿ ಬಂಡವಾಳ ಸೃಷ್ಟಿ, ಉದ್ಯೋಗ ಸೃಷ್ಟಿ ಮಾಡುವ ಅವಕಾಶವನ್ನು ಕರ್ನಾಟಕ ಕಳೆದುಕೊಳ್ಳುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ನಾರಾ ಲೋಕೇಶ್ ಟ್ವೀಟ್
ಈ ಗೊಂದಲದ ನಡುವೆ, ʼಉರಿಯುವ ಮನೆಯಲ್ಲಿ ಗಳ ಹಿರಿದರುʼ ಎಂಬಂತೆ ಲಾಭ ಮಾಡಿಕೊಳ್ಳಲು ಆಂಧ್ರಪ್ರದೇಶ (Andhra Pradesh) ಮುಂದಾಗಿದೆ. ಕರ್ನಾಟಕ ಸರಕಾರದ ನಿಲುವಿನ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಾಸ್ಕಾಂ ಸಂಘಟನೆಯ ಟ್ವೀಟ್ ಅನ್ನು ಶೇರ್ ಮಾಡಿರುವ ಆಂಧ್ರಪ್ರದೇಶ ಮಾನವ ಸಂಪನ್ಮೂಲ ಇಲಾಖೆ ಸಚಿವ ಲೋಕೇಶ್ ನಾರಾ, ʼನಮ್ಮಲ್ಲಿಗೆ ಬನ್ನಿʼ ಎಂದು ಖಾಸಗಿ ಕಂಪನಿಗಳಿಗೆ ಕರೆ ನೀಡಿದ್ದಾರೆ.
“ನಿಮ್ಮ ನಿರಾಶೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ವೈಜಾಗ್‌ನಲ್ಲಿರುವ ನಮ್ಮ IT, IT ಸೇವೆಗಳು, AI ಮತ್ತು ಡೇಟಾ ಸೆಂಟರ್ ಕ್ಲಸ್ಟರ್‌ಗೆ ನಿಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಳಾಂತರಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ನಾವು ನಿಮಗೆ ಅತ್ಯುತ್ತಮ ದರ್ಜೆಯ ಸೌಲಭ್ಯಗಳು, ತಡೆರಹಿತ ವಿದ್ಯುತ್, ಮೂಲಸೌಕರ್ಯ ಮತ್ತು ನಿಮ್ಮ ಐಟಿ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ನಿರ್ಬಂಧಗಳಿಲ್ಲದೆ ಅತ್ಯಂತ ಸೂಕ್ತವಾದ ಕೌಶಲ್ಯಭರಿತ ಪ್ರತಿಭೆಗಳನ್ನು ನೀಡುತ್ತೇವೆ. ಆಂಧ್ರಪ್ರದೇಶ ನಿಮ್ಮನ್ನು ಸ್ವಾಗತಿಸಲು ಸಿದ್ಧವಾಗಿದೆ. ದಯವಿಟ್ಟು ಸಂಪರ್ಕದಲ್ಲಿರಿ!” ಎಂದು ನಾರಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Karnataka Jobs Reservation: ಉದ್ಯೋಗ ವಿಚಾರದಲ್ಲಿ ಕನ್ನಡಿಗರೊಂದಿಗೆ ಸರ್ಕಾರ ಚೆಲ್ಲಾಟ: ವಿಜಯೇಂದ್ರ ಆಕ್ರೋಶ