Site icon Vistara News

Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

shiradi ghat train karnataka rian news

ಹಾಸನ: ಹಾಸನ ಜಿಲ್ಲೆಯ (Hassan news) ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟ (Karnataka Rain News) ಮುಂದುವರಿದಿದ್ದು, ಶಿರಾಡಿ ಘಾಟಿಯ (Shiradi Ghat) ರೈಲ್ವೆ ಹಳಿಯ (Railway Track) ಮೇಲೆ ಮಣ್ಣು ಕುಸಿತ (landslide) ಆಗಿದೆ. ಸಕಲೇಶಪುರ (Sakaleshpur) ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದ್ದು, ಈ ಮಾರ್ಗದ ಎಲ್ಲಾ ರೈಲುಗಳ‌ ಸಂಚಾರ ಬಂದ್ (Trains cancelled) ಮಾಡಲಾಗಿದೆ. ಜೊತೆಗೆ ಶಾಂತಿಗ್ರಾಮ ಬಳಿ ಚಲಿಸುತ್ತಿರುವ ರೈಲಿನ ಮೇಲೆಯೇ ಮಣ್ಣು ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರಿ ಅಪಾಯ ತಪ್ಪಿದೆ.

ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ‌ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

ನಿನ್ನೆ ಸಂಜೆಯಿಂದ ಹಳಿ ದುರಸ್ತಿ ಹಾಗು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಸಂಜೆಯಿಂದಲೇ ಬೆಂಗಳೂರು ಮಂಗಳೂರು ನಡುವಿನ ಎಲ್ಲಾ ಪ್ರಯಾಣಿಕ ಹಾಗು ಗೂಡ್ಸ್ ರೈಲು ಸಂಚಾರ ರದ್ದುಪಡಿಸಲಾಗಿದ್ದು, ರೈಲ್ವೆ ಇಲಾಖೆ ನಿನ್ನೆ ರೈಲಿನಲ್ಲಿ ಸಿಲುಕಿದ್ದವರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ. ಅಪಾರ ಪ್ರಮಾಣದ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ಶಿರಾಡಿಘಾಟ್ ಬಳಿಕ ಶಾಂತಿಗ್ರಾಮ ಬಳಿಯೂ ರೈಲ್ವೆ ಟ್ರ್ಯಾಕ್ ಮೇಲೆ ಗುಡ್ಡ ಕುಸಿದಿದೆ. ಗೂಡ್ಸ್ ರೈಲು ಚಲಿಸುವಾಗಲೇ ಗುಡ್ಡ ಕುಸಿತವಾಗಿದ್ದು, ರೈಲಿನ ಬೋಗಿ ಹಳಿ ತಪ್ಪಿದೆ. ಇಂದು ಮುಂಜಾನೆ 5.45ರ ಸುಮಾರಿಗೆ ಹಳಿ ಮೇಲೆ ಮಣ್ಣು ಕುಸಿದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಮಣ್ಣು ತೆರವುಗೊಳಿಸಿದ ಸಿಬ್ಬಂದಿ ರೈಲು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಹಾಸನ- ಬೆಂಗಳೂರು, ಬೆಂಗಳೂರು- ಹಾಸನ ರೈಲುಗಳ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ. ಮಣ್ಣು ತೆರವು ಬಳಿಕ ಹಾಸನ ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಪುನಾರಂಭವಾಗಲಿದೆ.

ಸಕಲೇಶಪುರ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಗೆ ರಸ್ತೆ ಜಲಾವೃತಗೊಂಡು ಜನ, ವಾಹನಗಳು ಪರದಾಡಿದ್ದಾರೆ. ಸಕಲೇಶಪುರ ತಾಲೂಕಿನ‌ ಹಾನುಬಾಳು ಹೋಬಳಿಯ ಹಾನುಬಾಳು- ವೆಂಕಟಹಳ್ಳಿ- ರಾಗಿಗುಂಡಿ- ಅಗ್ನಿ ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರು ಪರದಾಡಿದರು. ಇಲ್ಲಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಹಿಂದಿನಿಂದಲೂ ಆಗ್ರಹಿಸುತ್ತಿದ್ದಾರೆ.

ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ (ಘಟ್ಟ ಪ್ರದೇಶಗಳು) ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು 40-50ಕಿ.ಮೀ ತಲುಪುವ ಸಾಧ್ಯತೆಯಿದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಾಳಿಯ ವೇಗದೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Uttara Kannada Landslide: ಶಿರೂರು ಗುಡ್ಡಕುಸಿತ; ಅರ್ಜುನ್‌ ಶೋಧಕ್ಕೆ ಸಿಎಂ ಸಿದ್ದರಾಮಯ್ಯಗೆ ಪಿಣರಾಯಿ ಮೊರೆ

Exit mobile version