ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಎಸ್ಸೆಸ್ಸೆಲ್ಸಿ 2024ರ (SSLC Result 2024) ಪರೀಕ್ಷೆ- 1ರ ಫಲಿತಾಂಶದ (SSLC exam Result 2024) ಸಮಯ ಸನ್ನಿಹಿತವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು (Students) ಕಾತರದಿಂದ ಕಾಯುತ್ತಿರುವ ಫಲಿತಾಂಶ ಪ್ರಕಟಣೆಗೆ ಮಂಡಳಿ ಮುಹೂರ್ತ ಫಿಕ್ಸ್ ಮಾಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮೇ 8ರಂದು ಎಸ್ಸೆಸ್ಸೆಲ್ಸಿ ರಿಸಲ್ಟ್ (SSLC result) ಪ್ರಕಟಿಸುವ ಸಾಧ್ಯತೆಗಳಿವೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಫಲಿತಾಂಶದ ಕ್ರೋಢೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ. ಮೇ 8ರಂದು ಪ್ರಕಟಿಸಲು ಮಂಡಳಿ ನಿರ್ಧರಿಸಿದೆ. ಕಂಪ್ಯೂಟರ್ ಕೆಲಸದಲ್ಲಿ ವಿಳಂಬವಾದರೆ ಮಾತ್ರವೇ ಫಲಿತಾಂಶ ಪ್ರಕಟಿಸುವ ದಿನಾಂಕ ಬದಲಾಗುವ ಸಾಧ್ಯತೆ ಇದೆ.
2023 & 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.25ರಿಂದ ಏ.6ರ ವರೆಗೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು & 4.28 ಲಕ್ಷ ಬಾಲಕಿಯರು ಸೇರಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು & 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.
ರಿಸಲ್ಟ್ ಎಲ್ಲಿ ನೋಡಬಹುದು?
ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಕರ್ನಾಟಕ ಶಾಲೆ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ನೋಡಬಹುದು. ಮೊದಲಿಗೆ ತಮ್ಮ ರಿಜಿಸ್ಟರ್ ನಂಬರ್/ ರೋಲ್ ನಂಬರ್ ಹೊಂದಿರಬೇಕು. ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕ ಕರ್ನಾಟಕ ಶಾಲೆ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು.
ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆಯುತ್ತಿದೆ. ಕರ್ನಾಟಕದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಮುಖ ಹಂತವಾಗಿರುವುದರಿಂದ, ಕಾತರ ಹೆಚ್ಚಿದೆ. ಫಲಿತಾಂಶ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದ್ದು, ಪರೀಕ್ಷಾ ಮಂಡಳಿ ಅಧಿಕಾರಿಗಳು ಕೂಡ ರಿಸಲ್ಟ್ ರಿವೀಲ್ ಮಾಡಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ.
ಮೂರು ಅವಕಾಶ
ಈ ಬಾರಿ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆ ಮೂರೂ ಪರೀಕ್ಷೆ ಬರೆದವರು ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಆ ಫಲಿತಾಂಶವನ್ನು ಉಳಿಸಿಕೊಳ್ಳುವ ಅವಕಾಶ ದೊರೆಯಲಿದೆ. ಪ್ರತಿ ವಿದ್ಯಾರ್ಥಿಗಳು ಮೂರೂ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ. ಮೊದಲ ಅಥವಾ ವಾರ್ಷಿಕ ಪರೀಕ್ಷೆಯಲ್ಲಿ ಬಂದ ಫಲಿತಾಂಶದಲ್ಲಿ ಸಮಾಧಾನವಿದ್ದರೆ ಎರಡನೇ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಸಮಾಧಾನ ಇಲ್ಲದಿದ್ದರೆ ಅಥವಾ ಕಡಿಮೆ ಅಂಕಗಳು ಬಂದಿದ್ದರೆ ಎರಡನೇ ಪರೀಕ್ಷೆ ಬರೆಯಬಹುದು. ಎರಡನೇ ಪರೀಕ್ಷೆಯ ಫಲಿತಾಂಶದಲ್ಲೂ ಸಮಾಧಾನ ಇಲ್ಲದಿದ್ದರೆ ಮೂರನೇ ಪರೀಕ್ಷೆ ಬರೆಯಬಹುದು. ಈ ರೀತಿ ಮೂರೂ ಪರೀಕ್ಷೆ ಬರೆದರೂ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಅಥವಾ ಮೂರೂ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಿರುವ ಬೇರೆ ಬೇರೆ ವಿಷಯಗಳ ಫಲಿತಾಂಶಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಪರಿಗಣಿಸಬಹುದಾಗಿದೆ.
ಹಾಲಿ ಇರುವ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಮತ್ತು ಪರೀಕ್ಷಾ ಆತಂಕವನ್ನು ಸೃಷ್ಟಿಸುತ್ತಿದೆ. ಆದರಿಂದ ವಿದ್ಯಾರ್ಥಿಗಳ ಜ್ಞಾನಧಾರಣೆ, ಅರ್ಥಪೂರ್ಣ ಕಲಿಕೆ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಈ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಫಲಿತಾಂಶದಲ್ಲಿ ಸಮಾಧಾನವಾಗದಿದ್ದರೆ ವಿದ್ಯಾರ್ಥಿ ಅದನ್ನು ತಿರಸ್ಕರಿಸಿ ಪೂರಕ ಪರೀಕ್ಷೆ ಬರೆಯಬಹುದಿತ್ತು. ಆದರೆ, ಪೂರಕ ಪರೀಕ್ಷೆಯಲ್ಲೇನಾದರೂ ಇನ್ನೂ ಕಳಪೆ ಫಲಿತಾಂಶ ಬಂದರೆ ಅಥವಾ ಫೇಲಾದರೆ ವಾರ್ಷಿಕ ಪರೀಕ್ಷೆಯ ಫಲಿತಾಂಶ ಉಳಿಸಿಕೊಳ್ಳಲು ಅವಕಾಶವಿರಲಿಲ್ಲ. ಈಗ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಉಳಿಸಿಕೊಳ್ಳಬಹುದು.
ಇದನ್ನೂ ಓದಿ: Which is best after SSLC: ಎಸ್‌ಎಸ್ಎಲ್‌ಸಿ ನಂತರ ಮುಂದೇನು? ಇಲ್ಲಿದೆ ಉಪಯುಕ್ತ ಮಾಹಿತಿ