Site icon Vistara News

ವಿಸ್ತಾರ ಸಂಪಾದಕೀಯ: ಉಗ್ರರ ವಿರುದ್ಧ ಕಾಶ್ಮೀರಿ ಮುಸ್ಲಿಮರ ಪ್ರತಿಭಟನೆ ಮಹತ್ವದ ಬೆಳವಣಿಗೆ

Kashmiri Muslims protest against terrorists is a significant development

Kashmiri Muslims

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಪಂಡಿತರೊಬ್ಬರನ್ನು ಹತ್ಯೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಪಂಡಿತರ ಹತ್ಯಾ ಸರಣಿ ತೊಂಬತ್ತರ ದಶಕದಿಂದ ಆರಂಭಿಸಿ ಇಂದಿಗೂ ನಡೆಯುತ್ತಲೇ ಇದೆ. ಇದು ಹೊಸ ಘಟನೆಯೇನಲ್ಲ. ಆದರೆ ಮಹತ್ವದ ಬೆಳವಣಿಗೆ ಅಂದರೆ, ಈ ಬಾರಿ ಪಂಡಿತನ ಹತ್ಯೆ ನಡೆಸಿದ ಉಗ್ರರ ವಿರುದ್ಧ ಸ್ಥಳೀಯ ಮುಸಲ್ಮಾನರೇ ತಿರುಗಿ ಬಿದ್ದಿದ್ದಾರೆ. ಮೃತ ಪಂಡಿತರ ಕುಟುಂಬಕ್ಕೆ ಸ್ಥಳೀಯ ಮುಸ್ಲಿಮರು ಆತ್ಮೀಯ ನೆರವು ನೀಡಿದ್ದಾರೆ. ತಾವೇ ಕಟ್ಟಿಗೆ ಸಂಗ್ರಹಿಸಿ ತಂದು ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದ್ದಾರೆ. ಇಷ್ಟೇ ಅಲ್ಲ, ಹತ್ಯಾಕಾಂಡದ ವಿರುದ್ಧ ಸ್ಥಳೀಯ ಮುಸಲ್ಮಾನರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ 33 ವರ್ಷಗಳಿಂದ ಇಲ್ಲಿನ ಮುಸಲ್ಮಾನರು ಮತ್ತು ಹಿಂದೂಗಳು ಉಗ್ರರ ಹಿಂಸೆಯಿಂದ ತತ್ತರಿಸಿದ್ದಾರೆ. ಹಿಂಸೆಯಿಂದ ಸಾವಿರಾರು ಕುಟುಂಬಗಳು ನಾಶಗೊಂಡಿವೆ. ಪಂಡಿತರ ಕುಟುಂಬದ ನೋವು ನಮಗೆ ಅರ್ಥವಾಗುತ್ತದೆ ಎಂದು ಸ್ಥಳೀಯ ಮುಸ್ಲಿಮರು ಹೇಳಿರುವುದು ಮಾರ್ಮಿಕವಾಗಿದೆ. ಇಸ್ಲಾಂ ಎಂದಿಗೂ ಶಾಂತಿ ಮತ್ತು ಭ್ರಾತೃತ್ವಕ್ಕೆ ಉತ್ತೇಜನ ನೀಡುವ ಧರ್ಮವಾಗಿದೆ. ಧರ್ಮದ ಹೆಸರಿನಲ್ಲಿ ಜನರನ್ನು ಕೊಲ್ಲುವವರು ಭಯೋತ್ಪಾದಕರು ಎಂದು ಪುಲ್ವಾಮಾದ ಮುಸ್ಲಿಮರು ಹೇಳಿರುವುದು ಗಮನಾರ್ಹ. ಇತ್ತೀಚಿನ ತಿಂಗಳಲ್ಲಿ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ನೂರಾರು ಉಗ್ರರನ್ನು ಹೊಡೆದುರುಳಿಸಿವೆ. ಸ್ಥಳೀಯರು ಉಗ್ರರ ಇರುವಿಕೆಯ ಬಗ್ಗೆ ಸ್ಥಳೀಯರು ಹೆಚ್ಚು ಹೆಚ್ಚು ಸುಳಿವು ನೀಡುತ್ತಿದ್ದಾರೆ ಎನ್ನುವುದೂ ಇಲ್ಲಿ ಗಮನಾರ್ಹ ಬೆಳವಣಿಗೆ. ಸ್ಥಳೀಯ ಮುಸಲ್ಮಾನರು ಇದೇ ರೀತಿ ಕಾಶ್ಮೀರದಾದ್ಯಂತ ಉಗ್ರರ ವಿರುದ್ಧ ತಿರುಗಿ ಬಿದ್ದರೆ ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿ ನೆಲೆಸುವುದು ಖಚಿತ.

ತೊಂಬತ್ತರ ದಶಕದ ಪಂಡಿತರ ಹತ್ಯಾಕಾಂಡದ ಬಗ್ಗೆ ನಾವು ಇದುವರೆಗೆ ಓದಿರುವ ವರದಿಗಳಲ್ಲಿ ಕಂಡುಕೊಂಡಿರುವ ಒಂದು ಅಂಶ ಅಂದರೆ, ಸ್ಥಳೀಯ ಮುಸ್ಲಿಮರು ಈ ಹತ್ಯಾಕಾಂಡದ ಬಗೆಗೆ ಚಕಾರ ಎತ್ತಿರಲಿಲ್ಲ ಅನ್ನುವುದು. ಇದು ಭಯೋತ್ಪಾದಕರಿಗೆ, ಪ್ರತ್ಯೇಕತಾವಾದಿಗಳಿಗೆ ತಮ್ಮ ಹೀನ ಕೃತ್ಯಗಳನ್ನು ಮುಂದುವರಿಸಲು ರಹದಾರಿ ನೀಡಿದಂತಾಗಿತ್ತು. ಆದರೆ, ಇದಕ್ಕೆ ಭಿನ್ನವಾದ ಹಲವು ಸಂಗತಿಗಳನ್ನೂ ಹತ್ಯಾಕಾಂಡದಿಂದ ತಪ್ಪಿಸಿಕೊಂಡು ನಿರಾಶ್ರಿತರಾಗಿ ಗುಳೆ ಬಂದ ಪಂಡಿತರು ಹೇಳಿದ್ದುಂಟು. ಹತ್ಯಾಕಾಂಡದ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳ ಮುಸ್ಲಿಮರು ಪಂಡಿತರಿಗೆ ಆಶ್ರಯ ನೀಡಿದ್ದನ್ನು, ಉಗ್ರರಿಂದ ರಕ್ಷಿಸಿದ್ದನ್ನೂ ಹಲವರು ನೆನೆದುಕೊಂಡಿದ್ದಾರೆ. ನಿಜವಾದ ಭಾರತೀಯತೆ, ಸೌಹಾರ್ದತೆ, ಮಾನವೀಯತೆ ಇಂಥ ಪ್ರಕರಣಗಳಲ್ಲಿ ವ್ಯಕ್ತವಾಗುತ್ತದೆ.

ಭಯೋತ್ಪಾದನೆ ಕಡಿಮೆಯಾಗಬೇಕು, ಭ್ರಾತೃತ್ವ ಹೆಚ್ಚಾಗಬೇಕು ಎಂಬುದು ಎಲ್ಲ ಪ್ರಜ್ಞಾವಂತರ ಆಶಯ. ಮತಾಂಧರು ತಮ್ಮ ಕೇಡಿನ ಕೃತ್ಯಗಳನ್ನು ನಡೆಸುವ ಸಂದರ್ಭದಲ್ಲಿ ಅದನ್ನು ಆಯಾ ಮತದವರೇ ಖಂಡಿಸಿದಾಗ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಕೆಲವೊಮ್ಮೆ ಮುಸ್ಲಿಂ ಯುವಕರು ಐಸಿಸ್‌ ಮುಂತಾದ ಉಗ್ರ ಸಂಘಟನೆಗಳಿಂದ ಆನ್‌ಲೈನ್‌ ದುರ್ಬೋಧನೆಗೆ ತುತ್ತಾಗಿ ಜಿಹಾದ್‌ನಲ್ಲಿ ತೊಡಗಿದ ಅನೇಕ ಪ್ರಕರಣಗಳಿವೆ. ಇಂಥದನ್ನು ಮುಸ್ಲಿಮರು ಒಗ್ಗಟ್ಟಾಗಿ ಖಂಡಿಸಿದಾಗ, ಇಂಥ ಕೃತ್ಯಗಳಿಗೆ ತಮ್ಮ ಮತದಲ್ಲಿ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅಂಥವರಿಗೆ ರವಾನಿಸಿದಂತಾಗುತ್ತದೆ. ಇದರಿಂದ ಉಗ್ರ ಮತೀಯವಾದಿಗಳಿಗೆ ನಿರಾಶೆಯಾಗುತ್ತದೆ ಹಾಗೂ ಅಂಥವರಿಗೆ ಹಿನ್ನಡೆಯಾಗುತ್ತದೆ. ಒಂದು ಸೆಕ್ಯುಲರ್‌ ದೇಶವಾದ ಭಾರತ ಮುಸ್ಲಿಮರಿಂದಲೂ, ಎಲ್ಲ ಮತೀಯರಿಂದಲೂ ಇದನ್ನು ಅಪೇಕ್ಷಿಸುತ್ತದೆ.

ಇದನ್ನೂ ಓದಿ: Kashmiri Pandit Shot Dead: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಗುಂಡಿಗೆ ಪಂಡಿತ ಬಲಿ

ಸದ್ಯ ಕಾಶ್ಮೀರದಲ್ಲಿಯೂ, ಭಾರತದ ಇತರೆಡೆಯೂ ಆಗಬೇಕಾದುದು ಇದೇ ಆಗಿದೆ. ಕಾಶ್ಮೀರಕ್ಕಂತೂ ಇದು ಅತ್ಯವಶ್ಯ. ಕಾಶ್ಮೀರದಲ್ಲಿದ್ದ ಆರ್ಟಿಕಲ್‌ 370 ರದ್ದುಪಡಿಸಿದ ಬಳಿಕ ಬದಲಾವಣೆ ಕಾಣಿಸುತ್ತಿದೆ. ಆದರೆ ಅಲ್ಲಿನ ಮತಾಂಧತೆ, ಪ್ರತ್ಯೇಕತಾವಾದ ಇನ್ನೂ ಪೂರ್ತಿ ತೊಲಗಿಲ್ಲ. ಉಗ್ರರನ್ನೇನೋ ಭದ್ರತಾ ಪಡೆಗಳು ಮಟ್ಟ ಹಾಕಬಹುದು. ಆದರೆ ಇತರರಲ್ಲಿ ಮನಸ್ಸು ಪರಿವರ್ತನೆಯಾಗುವುದು ತುಂಬಾ ಅಗತ್ಯ. ಕಾಶ್ಮೀರದ ಆರ್ಥಿಕ- ವಾಣಿಜ್ಯ- ಸಾಮಾಜಿಕ ಬೆಳವಣಿಗೆಗೆ ಇದು ಅನಿವಾರ್ಯವಾಗಿದೆ. ಪಂಡಿತರು ಕಾಶ್ಮೀರಕ್ಕೆ ಮರಳುವಷ್ಟೇ ಅಗತ್ಯವಾದುದು ಅವರನ್ನು ಅಲ್ಲಿನ ಮುಸ್ಲಿಮರು ಸ್ವಾಗತಿಸುವುದು ಕೂಡ ಆಗಿದೆ.

Exit mobile version