Site icon Vistara News

Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

Keir Starmer

Keir Starmer becomes UK prime minister after meeting King Charles

ಲಂಡನ್: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಲೇಬರ್‌ ಪಕ್ಷವು (Labour Party) ಅಭೂತಪೂರ್ವ ಗೆಲುವು ಸಾಧಿಸಿದ್ದು, ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ 61 ವರ್ಷದ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಅರಸ ಕಿಂಗ್‌ ಚಾರ್ಲ್ಸ್‌ III (King Charles III) ಅವರನ್ನು ಭೇಟಿಯಾಗಿ, ನೂತನ ಸರ್ಕಾರ ರಚಿಸುವ ಕುರಿತು ಮನವಿ ಮಾಡಿದರು. ಕಿಂಗ್‌ ಚಾರ್ಲ್ಸ್‌ III ಅವರು ಅನುಮೋದನೆ ನೀಡುತ್ತಲೇ ಅಧಿಕೃತವಾಗಿ ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿ ಎನಿಸಿದ್ದಾರೆ.

ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ದೇಶದ ಜನರ ಸೇವೆ ಮಾಡುವುದೇ ನಮಗೆ ಭಾಗ್ಯವಾಗಿದೆ. ನೀವು ಲೇಬರ್‌ ಪಕ್ಷಕ್ಕೆ ಮತ ಹಾಕಿದ್ದೀರೋ, ಬಿಟ್ಟಿದ್ದೀರೋ ಅದು ಬೇಕಾಗಿಲ್ಲ. ದೇಶದ ಪ್ರತಿಯೊಬ್ಬರಿಗೂ ಉತ್ತಮ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದೆ. ರಾಜಕೀಯ ಎಂದರೆ ಉತ್ತಮ ಆಡಳಿತ ನೀಡುವುದು, ರಾಜಕೀಯವನ್ನು ಸಕಾರಾತ್ಮಕ ಸಂಗತಿಗಾಗಿ ಬಳಸಿಕೊಳ್ಳುತ್ತೇವೆ. ಮತಗಳನ್ನು ನೀಡಿ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಕೀರ್‌ ಸ್ಟಾರ್ಮರ್‌ ಅವರು ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರ ಆಡಳಿತವನ್ನೂ ಹೊಗಳಿದ್ದು ವಿಶೇಷವಾಗಿತ್ತು.

ನರೇಂದ್ರ ಮೋದಿ ಅಭಿನಂದನೆ

ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ಅವರು ಆಯ್ಕೆಯಾಗುತ್ತಲೇ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೀರ್‌ ಸ್ಟಾರ್ಮರ್‌ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್‌ ಒಗ್ಗೂಡಿ, ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳ ಏಳಿಗೆಗೆ ಶ್ರಮಿಸುವ ವಿಶ್ವಾಸವಿದೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಇದುವರೆಗೆ ಆಡಳಿತ ನಡೆಸಿದ, ಭಾರತದ ಮೂಲದ ರಿಷಿ ಸುನಕ್‌ ಅವರ ಬಗ್ಗೆಯೂ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟಿದೆ. ಕನ್ಸರ್ವೇಟಿವ್‌ ಪಕ್ಷವು ಮುಖಭಂಗ ಅನುಭವಿಸಿದ್ದು, ಕೇವಲ 81 ಸ್ಥಾನಗಳನ್ನು ಪಡೆದಿದೆ. ಫಲಿತಾಂಶ ಪ್ರಕಟವಾಗುತ್ತಲೇ ರಿಷಿ ಸುನಕ್‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಭಾರತದ ಬಗ್ಗೆ ಸ್ಟಾರ್ಮರ್‌ ನಿಲುವೇನು?

ಜಾಗತಿಕ ಭದ್ರತೆ, ಹವಾಮಾನ ಭದ್ರತೆ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದುವ ಬಗ್ಗೆ ಸ್ಟಾರ್ಮರ್‌ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಚುನಾವಣಾ ಭಾಷಣದಲ್ಲಿ ಮಾತನಾಡುತ್ತಾ ಅವರು, ನಮ್ಮ ಲೇಬರ್‌ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಅಲ್ಲದೇ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಬಯಸುತ್ತದೆ. ಜಾಗತಿಕ ಭದ್ರತೆ, ಹವಾಮಾನ ಭದ್ರತೆ, ಆರ್ಥಿಕ ಭದ್ರತೆಗಾಗಿ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: UK Election: ಯುಕೆ ಎಲೆಕ್ಷನ್‌ನಲ್ಲಿ ಹೀನಾಯ ಸೋಲು; ರಿಶಿ ಸುನಕ್‌ ಫಸ್ಟ್‌ ರಿಯಾಕ್ಷನ್‌

Exit mobile version