Site icon Vistara News

ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ

Kendra Sahitya Akademi Award

Kendra Sahitya Akademi Award For Karnataka's Shruti BR And Krishnamurthy Biligere

ನವದೆಹಲಿ/ಬೆಂಗಳೂರು: ದೇಶದ 23 ಲೇಖಕರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು (Kendra Sahitya Akademi Award) ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಶ್ರುತಿ ಬಿ.ಆರ್.‌ (Shruti BR) ಅವರಿಗೆ ಯುವ ಪುರಸ್ಕಾರ ಘೋಷಿಸಿದ್ದರೆ, ಕೃಷ್ಣಮೂರ್ತಿ ಬಿಳಿಗೆರೆ (Krishnamurthy Biligere) ಅವರಿಗೆ ಬಾಲ ಪುರಸ್ಕಾರ ಘೋಷಣೆ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.

ಶ್ರುತಿ ಬಿ.ಆರ್.‌ ಅವರು ಚಿಕ್ಕಮಗಳೂರಿನ ತರೀಕೆರೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಕೆಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನವಾದ ‘ಜೀರೋ ಬ್ಯಾಲೆನ್ಸ್’‌ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಐದು ಚಿನ್ನದ ಪದಕಗಳೊಂದಿಗೆ ಪಡೆದಿದ್ದು, ಪಿಎಚ್‌.ಡಿಯನ್ನೂ ಪಡೆದಿದ್ದಾರೆ. ಇವರ ಲೇಖನಗಳು, ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿಳಿಗೆರೆ ಅವರು ಇದೇ ಜಿಲ್ಲೆಯ ಹುಳಿಯಾರಿನ ಬಿಎಂಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಯವ ಕೃಷಿ, ಬೀಜ ನಾಟಿ, ನೀರು ಸಂಗ್ರಹ ಸೇರಿ ಹಲವು ಚಳವಳಿಗಳಲ್ಲೂ ಸಕ್ರಿಯರಾಗಿರುವ ಇವರು, ಸಾಹಿತ್ಯ ಕೃಷಿಯಲ್ಲೂ ನಾಡಿನಾದ್ಯಂತ ಹೆಸರು ಗಳಿಸಿದ್ದಾರೆ. ಕಾವ್ಯ, ಕತೆ, ನಾಟಕಗಳ ರಚನೆ ಮೂಲಕ ಇವರು ನಾಡಿನ ಮನೆಮಾತಾಗಿದ್ದಾರೆ. ಇವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ದೊರೆತಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನೂ ಒಳಗೊಂಡ ತೀರ್ಪುಗಾರರ ಸಮಿತಿ ಮಾಡಿದ ಶಿಫಾರಸಿನಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ.

ಕನ್ನಡದ ಖ್ಯಾತ ಬರಹಗಾರ ಲಕ್ಷ್ಮೀಶ ತೋಳ್ಪಾಡಿ ಅವರಿಗೆ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತದ ಅನುಸಂಧಾನದ ಭಾರತಯಾತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಆನಂದ ಝುಂಜರವಾಡ ಮತ್ತು ಜೆ. ಎನ್. ತೇಜಶ್ರೀ ಅವರಿದ್ದರು.

ಇದನ್ನೂ ಓದಿ: Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

Exit mobile version