Site icon Vistara News

Bharat Mata Ki Jai : ‘ಭಾರತ್​ ಮಾತಾ ಕಿ ಜೈ’ ಮುಸ್ಲಿಮ್​ ವ್ಯಕ್ತಿಯ ಕೊಡುಗೆ; ಕಿಡಿ ಹಚ್ಚಿದ ಕೇರಳ ಸಿಎಂ ಹೇಳಿಕೆ

pinarayi Vijayan

ತಿರುವನಂತಪುರ: ‘ಭಾರತ್ ಮಾತಾ ಕಿ ಜೈ’ ಮತ್ತು ‘ಜೈ ಹಿಂದ್’ ಘೋಷಣೆಗಳನ್ನು ಮುಸ್ಲಿಮ್ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಸೃಷ್ಟಿಸಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿ ಸೇರಿದಂತೆ ಪ್ರಮುಖ ನಾಯಕರ ವಿರೋಧಕ್ಕೆ ಕಾರಣವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ವಿರುದ್ಧ ಸೋಮವಾರ ನಡೆದ ರ್ಯಾಲಿಯಲ್ಲಿ ಪಿಣರಾಯಿ ವಿಜಯನ್ ಈ ಹೇಳಿಕೆ ನೀಡಿದ್ದರು.

“ಈಗ ಎಲ್ಲ ಕಾರ್ಯಕ್ರಮಗಳಲ್ಲಿ ಕೆಲವು ಸಂಘ ಪರಿವಾರದ ನಾಯಕರು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆ ಜನರಿಗೆ ಹೇಳುತ್ತಾರೆ. ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯನ್ನು ರಚಿಸಿದವರು ಯಾರು? ಅದು ಸಂಘ ಪರಿವಾರದ ನಾಯಕರೇ? ಸಂಘ ಪರಿವಾರಕ್ಕೆ ಈ ಮಾಹಿತಿ ತಿಳಿದಿದೆಯೇ ಎಂಬುದೂ ನನಗೆ ಗೊತ್ತಿಲ್ಲ. ರಚಿಸಿದವರ ಹೆಸರು ಅಜೀಮುಲ್ಲಾ ಖಾನ್. ಅವರು ಸಂಘ ಪರಿವಾರದ ನಾಯಕರಲ್ಲ” ಎಂದು ಕೇರಳ ಸಿಎಂ ಹೇಳಿದ್ದಾರೆ.

“ಅಜೀಮುಲ್ಲಾ ಖಾನ್​ 19 ನೇ ಶತಮಾನದಲ್ಲಿ ಮರಾಠಾ ದೊರೆ ಪೇಶ್ವೆ ನಾನಾ ಸಾಹೇಬ್ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದವರು. ಅವರು ಭಾರತ್ ಮಾತಾ ಕಿ ಜೈ ಎಂಬ ಪದವನ್ನು ರಚಿಸಿದರು. ಇದೀಗ ಅವರ ಹೆಸರು ಗೊತ್ತಾದ ಮೇಲೆ ಸಂಘ ಪರಿವಾರವು ಈ ಘೋಷಣೆಯನ್ನು ಹೇಳದಿರಲು ನಿರ್ಧರಿಸುತ್ತದೆಯೇ ” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Ravneet Singh Bittu : ಕಾಂಗ್ರೆಸ್​ ‘ಬಿಟ್ಟು’ ಬಿಜೆಪಿ ಸೇರಿದ ಪಂಜಾಬ್​ನ ಮೂರು ಬಾರಿಯ ಸಂಸದ

ಮಾಜಿ ರಾಜತಾಂತ್ರಿಕ ಅಧಿಕಾರಿ ಅಬಿದ್ ಹಸನ್ ಅವರು ‘ಜೈ ಹಿಂದ್’ ಎಂಬ ಪದವನ್ನು ರಚಿಸಿದರು. ಹೀಗಾಗಿ ಜೈ ಹಿಂದ್ ಕೂಡ ಮುಸ್ಲಿಮರ ಕೊಡುಗೆ ಎಂದು ಹೇಳಬಹುದು. ಮುಸ್ಲಿಮರು ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳುವ ಸಂಘ ಪರಿವಾರವು ಈ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದು ನಾನು ಹೇಳಲು ಬಯಸುತ್ತೇನೆ ಎಂದು ಪಿಣರಾಯಿ ಹೇಳಿದ್ದಾರೆ. ಸಿಎಎ ಅನುಷ್ಠಾನದ ಬಗ್ಗೆ ಪಿಣರಾಯಿ ವಿಜಯನ್, ನರೇಂದ್ರ ಮೋದಿ ಸರ್ಕಾರದ ಮೇಲೆ ದಾಳಿ ನಡೆಸಿದರು. ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯ ಪ್ರತಿರೋಧ

ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿದ ಕೇರಳ ಬಿಜೆಪಿ ನಾಯಕ ಪಿ.ಕೆ.ಕೃಷ್ಣದಾಸ್, ಮುಸ್ಲಿಮರು ರಚಿಸಿದ ಘೋಷಣೆಗಳನ್ನು ಸಿಎಂ ಮತ್ತು ಇತರ ಎಡಪಂಥೀಯ ನಾಯಕರು ಆಯ್ಕೆಮಾಡಿಕೊಳ್ಳಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೂ ಮುನ್ನ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಕೂಡ ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿ, ಮತಗಳಿಗಾಗಿ ಧರ್ಮ ವಿಭಜಕ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಜನರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇದ್ದಾರೆ. ಹೀಗಾಗಿ ಎಡಪಂಥೀಯರ ಹಳಸಲು ಹಾಗೂ ಶತಮಾನಗಳಷ್ಟು ಹಳೆಯ ರಾಜಕೀಯ ನೀತಿಯನ್ನೇ ಅನುಸರಿಸುತ್ತಾರೆ ಎಂದು ಬಿಜೆಪಿ ಹೇಳಿದೆ.

Exit mobile version