ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಡೆಸಲಿರುವ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆಯೇ, ಪಕ್ಷ ಸೇರ್ಪಡೆ ಅಥವಾ ತಾರಾ ಪ್ರಚಾರಕ ಆಗಲಿದ್ದಾರೆಯೇ ಎಂಬ ಬಗ್ಗೆ ಭಾರೀ ಊಹಾಪೋಹ ಸೃಷ್ಟಿಯಾಗಿದೆ.
ನಟ ಸುದೀಪ್ ನಡೆ ಎಲ್ಲೆಡೆ ತೀವ್ರ ಕುತೂಹಲ ಕೆರಳಿಸಿದೆ. ಇಂದು ಸಿಎಂ ಸುದ್ದಿಗೋಷ್ಠಿಯಲ್ಲಿ ಪ್ರಚಾರದ ಸಾಂಗ್ ಬಿಡುಗಡೆ ಮಾಡಲಿದ್ದು, ಅದರಲ್ಲಿ ಸುದೀಪ್ ಭಾಗವಹಿಸಲಿದ್ದಾರೆ. ಆದರೆ ಸುದೀಪ್ ಬಿಜೆಪಿಯನ್ನು ಅಧಿಕೃತವಾಗಿ ಸೇರಲಿದ್ದಾರೆಯೇ ಅಥವಾ ಸ್ಟಾರ್ ಪ್ರಚಾರಕನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈ ಹಿಂದೆ ಡಿಕೆ ಶಿವಕುಮಾರ್ ಅವರು ಸುದೀಪ್ ಜತೆ ಚರ್ಚೆ ಮಾಡಿದ್ದು, ನಟನನ್ನು ಆಹ್ವಾನಿಸಿದ್ದರು. ಆದರೆ ಸುದೀಪ್ ಕಾಂಗ್ರೆಸ್ ಆಫರ್ ತಿರಸ್ಕರಿಸಿದ್ದರು. ಇದೀಗ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಸುದೀಪ್ ಬಂದ್ರೆ ಬಿಜೆಪಿಗೆ ಎಷ್ಟು ಲಾಭ?
ಸುದೀಪ್ ರಾಜ್ಯದಲ್ಲಿ ಬಲಿಷ್ಠವಾಗಿರುವ ನಾಯಕ ಸಮುದಾಯಕ್ಕೆ ಸೇರಿದ್ದಾರೆ. ಇದು ಪರಿಶಿಷ್ಟ ಬುಡಕಟ್ಟು ಸಮುದಾಯವಾಗಿದ್ದು, ಲೋಕಸಭೆಯಲ್ಲಿ ಎರಡು ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ನಾಯಕ ಸಮುದಾಯದ ಪ್ರಾಬಲ್ಯವಿದೆ. ಹಾಗೆಯೇ ರಾಜ್ಯದಲ್ಲಿ 15 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಇದಲ್ಲದೇ ರಾಜ್ಯಾದ್ಯಂತ 224 ಕ್ಷೇತ್ರಗಳಲ್ಲೂ ನಾಯಕ ಸಮುದಾಯದ ಮತಗಳಿವೆ.
ಆದರೆ ಬಿಜೆಪಿಗೆ ಆ ಸಮುದಾಯದಲ್ಲಿ ವರ್ಚಸ್ವಿ ನಾಯಕನ ಕೊರತೆ ಇದೆ. ಶ್ರೀರಾಮುಲು ಅವರು ಇದ್ದರೂ ಭಾಷೆಯ ಸಮಸ್ಯೆ ಇದೆ. ಅವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಜಾರಕಿಹೊಳಿ ಬ್ರದರ್ಸ್ ಬೆಳಗಾವಿಗೆ ಸೀಮಿತರಾಗಿದ್ದಾರೆ. ಸುದೀಪ್ ಒಂದು ವೇಳೆ ಬಿಜೆಪಿಗೆ ಸೇರ್ಪಡೆಯಾದರೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಾಯಕ ಸಮುದಾಯದ ಮತಗಳನ್ನು ಹೆಚ್ಚು ಸೆಳೆಯಬಹುದು, ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರ. ಬಿಜೆಪಿ ಬಲೆಗೆ ಸುದೀಪ್ ಬೀಳ್ತಾರಾ ನೋಡಬೇಕಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಮರಳಿದ ಕಿಚ್ಚ
ಜಾಹೀರಾತಿನ ಚಿತ್ರೀಕರಣಕ್ಕೆಂದು ಹೈದಾರಾಬಾದ್‌ಗೆ ತೆರಳಿದ್ದ ಸುದೀಪ್, ಅಲ್ಲಿಂದ ಬೆಂಗಳೂರಿಗೆ ದೇವನಹಳ್ಳಿ ಏರ್‌ಪೋರ್ಟ್ ಮೂಲಕ ವಾಪಸ್ಸಾಗುತ್ತಿದ್ದಾರೆ. 3 ದಿನಗಳ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿರುವ ಅವರು, ಏರ್‌ಪೋರ್ಟ್‌ನಿಂದ ನೇರವಾಗಿ ಪತ್ರಿಕಾಗೋಷ್ಠಿಗೆ ಬರಬಹುದು ಎನ್ನಲಾಗಿದೆ.