ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ (KPCC President) ಬದಲಾವಣೆ ಸುಳಿವು ಸಿಕ್ಕಿದ್ದು, ಅಧಿವೇಶನದ ಬಳಿಕ ಕೆಪಿಸಿಸಿ ನೂತನ ಸಾರಥಿ ಆಯ್ಕೆ ಸಾಧ್ಯತೆ ಇವೆ ಎನ್ನಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೈ ಹೈಕಮಾಂಡ್ ಇಂಗಿತ ಹೊಂದಿದ್ದು, ಇದರ ಸುಳಿವು ಸಿಗುತ್ತಿದ್ದಂತೆ ಅಧ್ಯಕ್ಷಗಿರಿ ಪಟ್ಟಕ್ಕಾಗಿ ಲಾಬಿ ಜೋರಾಗಿದೆ. ದಲಿತರು, ಬ್ರಾಹ್ಮಣರು, ಒಕ್ಕಲಿಗರ ಕೋಟಾ ಮುಗಿದಿದೆ, ಈ ಬಾರಿ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಜತೆಗೆ ನಮಗೂ ಅವಕಾಶ ಕೊಡಿ ಎಂದು ವಾಲ್ಮೀಕಿ ಸಮುದಾಯದ ನಾಯಕರೂ ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಬಿ.ಕೆ. ಹರಿಪ್ರಸಾದ್ ಲಾಬಿ ನಡೆಸುತ್ತಿದ್ದಾರೆ. ಅಲ್ಲದೇ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಹೆಸರುಗಳು ಮುನ್ನೆಲೆಗೆ ಬಂದಿವೆ. ಈಗಾಗಲೇ ನಾನು ಅಧ್ಯಕ್ಷನಾಗಲು ಸಿದ್ಧ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಮತ್ತೊಂದೆದೆ ಹಿಂದುಳಿದ ವರ್ಗಗಳ ಕೋಟಾದಡಿ ಬಿ.ಕೆ. ಹರಿಪ್ರಸಾದ್ ಹೆಸರು ಚರ್ಚೆಯಾಗುತ್ತಿದೆ. ಆದರೆ ಜಾತಿ ಮತ್ತು ಪ್ರಾದೇಶಿಕ ಆಧಾರಿತವಾಗಿ ಅಧ್ಯಕ್ಷರ ಆಯ್ಕೆ ಮಾಡಲು ಹೈ ಕಮಾಂಡ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಈ ಬಾರಿ ಲಿಂಗಾಯತ ಹಾಗೂ ಕಲ್ಯಾಣ ಕರ್ನಾಟಕದ ನಾಯಕರಿಗೆ ಮಣೆ ಹಾಕುವ ಸಾಧ್ಯತೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ಅವರ ಹೆಸರು ಮುನ್ನೆಲೆಯಲ್ಲಿದೆ.
ದೆಹಲಿ ಮಟ್ಟದಲ್ಲಿ ನಡೆದಿದೆ ಚರ್ಚೆ
ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ನವ ದೆಹಲಿಯಲ್ಲಿ ಭೇಟಿಯಾದ ಬೆನ್ನಲ್ಲೇ ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ದೆಹಲಿ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆದಿದ್ದು, ಡಿ.ಕೆ. ಶಿವಕುಮಾರ್ ಬಳಿಯೇ ಎರಡು ಪ್ರಬಲ ಖಾತೆಗಳಿವೆ, ಇದು ಪಕ್ಷ ಸಂಘಟನೆಗೆ ಅನುಕೂಲವಲ್ಲ. ಹೀಗಾಗಿ ಅಧ್ಯಕ್ಷರ ಬದಲಾವಣೆ ಮಾಡಿದರೆ ಸೂಕ್ತ ಎಂದು ರಾಜ್ಯ ನಾಯಕರಿಂದ ಒತ್ತಾಯ ಕೇಳಿಬಂದಿದೆ.
ಇನ್ನು ಹೈ ಕಮಾಂಡ್ ನಾಯಕರಿಂದಲೂ ಕೆಪಿಸಿಸಿಗೆ ನೂತನ ಸಾರಥಿ ನೀಡುವ ಬಗ್ಗೆ ಒಲವು ಹೆಚ್ಚಿದೆ ಎನ್ನಲಾಗಿದೆ. ನೂತನ ಅಧ್ಯಕ್ಷರ ಆಯ್ಕೆಯಾದರೇ ಕಾಂಗ್ರೆಸ್ ಒಳಗಿನ ಸಮಸ್ಯೆಗಳಿಗೆ ಇತಿಶ್ರೀ ಹಾಡಬಹುದು ಎಂದು ದೆಹಲಿ ಭೇಟಿ ವೇಳೆ ರಾಜ್ಯ ನಾಯಕರು ಹೇಳಿದ್ದಾರೆ. ಹೀಗಾಗಿ ರಾಜ್ಯ ನಾಯಕರ ಮಾತಿಗೆ ಬಹುತೇಕ ಮನ್ನಣೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ | CM Siddaramaiah: ಡಾ.ರಾಜ್‍ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ಎಂದ ಸಿದ್ದರಾಮಯ್ಯ
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ತನಕ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಮುಂದುವರಿಯುವ ಇರಾದೆ ಹೊಂದಿದ್ದಾರೆ. ಆದರೆ, ಮತ್ತೊಂದೆಡೆ ರಾಜ್ಯ ನಾಯಕರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹೈ ಕಮಾಂಡ್ ಒಲವು ಹೊಂದಿದೆ ಎನ್ನಲಾಗಿದ್ದು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.