Site icon Vistara News

KS Eshwarappa: ಬಿಜೆಪಿಯಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ 6 ವರ್ಷ ಉಚ್ಚಾಟನೆ

KS Eshwarappa

ಬೆಂಗಳೂರು: ಶಿವಮೊಗ್ಗದ ಮಾಜಿ ಶಾಸಕ, ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಅವರು ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ. ಪಕ್ಷದ ಸೂಚನೆಯನ್ನು ಕಡೆಗಣಿಸಿ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ಈ ಬಗ್ಗೆ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಪಕ್ಷದ ಸೂಚನೆಯನ್ನು ಕಡೆಗಣಿಸಿ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಮುಂದಿನ 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಈಶ್ವರಪ್ಪ ಅವರಿಗೆ ಆದೇಶ ಪತ್ರದಲ್ಲಿ ಲಿಂಗರಾಜ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ | Neha Murder Case: ಒಂದು ಕೋಮನ್ನು ಓಲೈಸದೆ ಸರಿ ದಿಕ್ಕಿನಲ್ಲಿ ತನಿಖೆ ಮಾಡಿ: ಪ್ರಲ್ಹಾದ್‌ ಜೋಶಿ ಆಗ್ರಹ

ನಾಮಪತ್ರ ಹಿಂಪಡೆಯುವ ಸಾಧ್ಯತೆ ಇದ್ದ ಹಿನ್ನೆಲೆ ಈವರೆಗೂ ಬಿಜೆಪಿ ಕ್ರಮ ತೆಗೆದುಕೊಂಡಿರಲಿಲ್ಲ. ಆದರೂ ಈಶ್ವರಪ್ಪ ಅವರು ನಾಮಪತ್ರ ಹಿಂಪಡೆಯದ ಹಿನ್ನೆಲೆ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ಪುತ್ರನಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆ.ಎಸ್‌.ಈಶ್ವರಪ್ಪ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತಿದ್ದಾರೆ.

ಉಚ್ಚಾಟನೆ ನಿರೀಕ್ಷೆ ಮಾಡಿದ್ದೆ ಎಂದ ಈಶ್ವರಪ್ಪ

ಶಿವಮೊಗ್ಗ: ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ಉಚ್ಚಾಟನೆಯನ್ನು ನಿರೀಕ್ಷೆ ಮಾಡಿದ್ದೆ, ಅದಕ್ಕಾಗಿಯೇ ಕಾಯುತ್ತಿದ್ದೆ. ನಾನು ಯಾವ ಉಚ್ಚಾಟನೆಗೂ ಎದರಲ್ಲ. ಚುನಾವಣೆಯಲ್ಲಿ ನಿಲ್ಲೋದು ಸ್ಪಷ್ಟ, ಗೆಲ್ಲೋದು ಸ್ಪಷ್ಟ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಕೆ ಕೈ ಎತ್ತುತ್ತೇನೆ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧೆ ಮಾಡ್ತೇನೆ ಎಂದು ಹೇಳಿದ್ದೆ. ಹೀಗಾಗಿ ಯಾವ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನನ್ನ ನಾಮಪತ್ರ ವಾಪಸ್ ತೆಗೆದುಕೊಂಡಿಲ್ಲ‌, ಇವತ್ತು ಅಧಿಕೃತವಾಗಿ ಚಿಹ್ನೆ ಸಿಕ್ಕಿದೆ. ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಬಿಜೆಪಿ ಶುದ್ಧೀಕರಣ ಆಗಬೇಕೆಂದು ಹೋರಾಟ ಮಾಡುತ್ತಿದ್ದೇನೆ. ಜನರು ನನ್ನನ್ನು ಹೊಗಳುತ್ತಿದ್ದಾರೆ. ನಾನು ಸ್ಪರ್ಧೆ ಮಾಡಿರೋದು ಸಾಕಷ್ಟು ಜನರಿಗೆ ಖುಷಿ ತಂದಿದೆ. ರೈತರ ಹೆಸರಿಟ್ಟುಕೊಂಡು ನಾನು ಹೋರಾಟ ಮಾಡ್ತೇನೆ. ಕಮಲ ಚಿಹ್ನೆ ಯಿಂದ ತಾತ್ಕಾಲಿಕ ಹಿಂದೆ ಸರಿಯುತ್ತಿದ್ದೇನೆ. ಧರ್ಮಕ್ಕೆ ಜಯ ಸಿಗುತ್ತದೆ, ನನ್ನ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಹೇಳಿದ್ದಾರೆ.

Exit mobile version