ಬೆಂಗಳೂರು: ಕೆಸೆಟ್ ಪರೀಕ್ಷೆ- 2023ರ (KSET Exam 2023) ತಾತ್ಕಾಲಿಕ ಸ್ಕೋರ್ (provisional score list) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪದವಿ ಕಾಲೇಜು ಉಪನ್ಯಾಸಕರ (College lecturer) ಅರ್ಹತಾ ಪರೀಕ್ಷೆಯಾದ ʼಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ – ಕೆಸೆಟ್ʼ (KSET – Karnataka State Eligibility Test) ಇದರ 2023ನೇ ಸಾಲಿನ ಪರೀಕ್ಷೆಯನ್ನು ಕಳೆದ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆಗೆ ಬರೆದವರು ಈಗ ತಮ್ಮ ತಾತ್ಕಾಲಿಕ ಸ್ಕೋರ್ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು.
ಕೆಸೆಟ್-2023 ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿಯನ್ನು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ವಿಷಯವಾರು ಲಿಂಕ್ ಕ್ಲಿಕ್ ಮಾಡುವ ಮೂಲಕ ತಾತ್ಕಾಲಿಕ ಅಂಕಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು. ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು 2024ರ ಜನವರಿ 13ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿತ್ತು.
ನಂತರ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ದಿನಾಂಕ 04-04-2024ರಂದು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಪ್ರಸ್ತುತ ಕೆಸೆಟ್ ಪರೀಕ್ಷೆಯ ಪತ್ರಿಕೆ-1 ಮತ್ತು 41 ವಿಷಯಗಳ (ಪತ್ರಿಕೆ-2) ವಿಷಯವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಆಕ್ಷೇಪಣೆಗಳಿಗೆ ಆಹ್ವಾನ
ಪ್ರಸ್ತುತ ಕೆಇಎ ಬಿಡುಗಡೆ ಮಾಡಿರುವ ಕೆಸೆಟ್ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ವಿವರವಾದ ಮಾಹಿತಿಗಳೊಂದಿಗೆ ಸಲ್ಲಿಸಲು ಮೇ 10, 2024 ರವರೆಗೆ ಅವಕಾಶ ನೀಡಿದೆ. ಆಕ್ಷೇಪಣೆಯನ್ನು ಇಮೇಲ್ ವಿಳಾಸ -keakset2023@gmail.com ಗೆ ಕಳುಹಿಸಬಹುದು.
ವಿಶೇಷ ಸೂಚನೆ : ಈಗ ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಯು ಕೆಸೆಟ್-2023ರಲ್ಲಿ ಅರ್ಹತೆ ಪಡೆದಿದ್ದಾರೆಂದು ಭಾವಿಸಬಾರದು ಎಂದು ಕೆಇಎ ಸೂಚನೆ ನೀಡಿದೆ.
ತಾತ್ಕಾಲಿಕ ಅಂಕಪಟ್ಟಿ ಚೆಕ್ ಮಾಡುವ ವಿಧಾನ
ಕೆಇಎ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ತೆರೆದ ಮುಖಪುಟದಲ್ಲಿ ಇತ್ತೀಚಿನ ಪ್ರಕಟಣೆಗಳು ಎಂಬಲ್ಲಿ ಗಮನಿಸಿ.
ಮೇ 02ರಂದು ಕೆಸೆಟ್ ತಾತ್ಕಾಲಿಕ ಅಂಕಪಟ್ಟಿಗಳನ್ನು ವಿಷಯವಾರು ಬಿಡುಗಡೆ ಮಾಡಲಾಗಿದೆ.
ನೀವು ಪರೀಕ್ಷೆ ಬರೆದ ವಿಷಯವನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
ಪಿಡಿಎಫ್ ಫೈಲ್ ಓಪನ್ ಆಗುತ್ತದೆ.
ಹೆಸರು, ರಿಜಿಸ್ಟರ್ ನಂಬರ್ ಪ್ರಕಾರ ನಿಮ್ಮ ಅಂಕಗಳನ್ನು ಚೆಕ್ ಮಾಡಿಕೊಳ್ಳಿ.
ಆಕ್ಷೇಪಣೆಗಳು ಇದ್ದಲ್ಲಿ ಮೇಲೆ ತಿಳಿಸಿದಂತೆ ಸವಿವರ ಮಾಹಿತಿಗಳೊಂದಿಗೆ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.
ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್ ಅಪ್ ಲೋನ್‌ಗೆ ಅಪ್ಲೈ ಮಾಡಿ