Site icon Vistara News

Ashwamedha Bus: ಏನಿದು ಸ್ಪೆಷಲ್ ಅಶ್ವಮೇಧ ಬಸ್‌; ಇದರಲ್ಲೂ ಮಹಿಳೆಯರಿಗೆ ಫ್ರೀ

Ashwamedha Classic Bus

ಬೆಂಗಳೂರು: ಶಕ್ತಿ‌ ಯೋಜನೆ ಜಾರಿ ಬಳಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಓಡಾಟವೂ ಜಾಸ್ತಿಯಾಗಿದೆ. ಆದರೆ ಬಸ್‌ಗಳ ಕೊರತೆಯಿಂದ‌ ಜನ ಪರದಾಡುವಂತಾಗಿತ್ತು. ಈ ಸಮಸ್ಯೆ ನಿವಾರಣೆಗೆ ಕೆಎಸ್‌ಆರ್‌ಟಿಸಿಗೆ ಹೊಸದಾಗಿ 800 ಬಸ್‌ ಸೇರ್ಪಡೆಯಾಗಲು ಸಜ್ಜಾಗಿದ್ದು, ಸೋಮವಾರ ಮೊದಲ‌ ಹಂತದಲ್ಲಿ ಹೊಸ ವಿನ್ಯಾಸದ 100 ಅಶ್ವಮೇಧ ಕ್ಲಾಸಿಕ್‌ ಬಸ್‌ಗಳ (Ashwamedha Bus) ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿದ್ದಾರೆ.

ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭವಾದ ದಿನದಿಂದ ಸಾರಿಗೆ ಬಸ್‌ಗಳು ತುಂಬಿ ತುಳುಕುತ್ತಿವೆ. ನಿತ್ಯ ಪ್ರಯಾಣಿಕರ ಗೋಳಾಟ, ನಿರ್ವಾಹಕರ ಪರದಾಟ, ಗೊಂದಲ-ಗಲಾಟೆಗಳು ಸಾರಿಗೆ ಸಂಸ್ಥೆಗೆ ತಲೆನೋವು ತರಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ʼಅಶ್ವಮೇಧ ಯಾಗʼ ಶುರುಮಾಡಿದ್ದು, ಇದರಿಂದ ಶಕ್ತಿ ಯೋಜನೆಯ ಒತ್ತಡಕ್ಕೆ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು

ಶಕ್ತಿ ಯೋಜನೆಯಡಿ ಐರಾವತ ಕ್ಲಬ್​ ಕ್ಲಾಸ್​, ಅಂಬಾರಿಯಂತಹ ವಿಶೇಷ ಸ್ಲೀಪರ್ ಎಸಿ ಬಸ್​​ಗಳನ್ನು ಹೊರತುಪಡಿಸಿ ಇತರ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಅದರಂತೆ, ಈ ಹೊಸ ವಿನ್ಯಾಸದ ನಾನ್‌ ಎಸಿ ಅಶ್ವಮೇಧ ಕ್ಲಾಸಿಕ್‌ ಅಶ್ವಮೇಧ – ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್‌ಗಳಲ್ಲೂ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ | KSRTC Buses: 100 ಹೊಸ ವಿನ್ಯಾಸದ ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಲೋಕಾರ್ಪಣೆ ಮಾಡಿದ ಸಿಎಂ

ಬಣ್ಣ ಬಣ್ಣದ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿರುವ 100 ಅಶ್ವಮೇಧ – ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್​ಗಳಿಗೆ ಸೋಮವಾರ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಸಿರು ನಿಶಾನೆ ತೋರಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ‌ ಕೆಎಸ್ಆರ್‌ಟಿಸಿ ಅಧ್ಯಕ್ಷ ಎಸ್. ಶ್ರೀನಿವಾಸ್ ಮತ್ತಿತರರು ಇದ್ದರು.

ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜನರ ಸುರಕ್ಷಿತ ಪ್ರಯಾಣಕ್ಕೆ ಬೇಕಾದ ಎಲ್ಲಾ ಸೌಲಭ್ಯ ಮಾಡಿಕೊಡುತ್ತೇವೆ. ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಅಶ್ವಮೇಧ ಬಸ್‌ ವಿಶೇಷತೆಗಳೇನು?

  1. 1.ವಿಶಾಲವಾದ ಹಿಂದಿನ ಹಾಗೂ ಮುಂದಿನ ಗ್ಲಾಸ್‌ಗಳು
  2. 2.ಗುಣಮಟ್ಟದ ಕುಷನ್ ಹಾಗೂ ರೆಕ್ಸಿನ್ ಒಳಗೊಂಡ 52 ಸೀಟ್ ವ್ಯವಸ್ಥೆ
  3. 3.ಮೊಬೈಲ್ ಚಾರ್ಜ್ ಮಾಡಲು 6 ಪಾಯಿಂಟ್ ಅಳವಡಿಕೆ
  4. 4.ಸಾಮಾನ್ಯ ಸಾರಿಗೆ ಬಸ್‌ಗಿಂತ ದೊಡ್ಡದಾದ ವಿಂಡೋ ಫ್ರೇಮ್‌ ಹಾಗೂ ಗ್ಲಾಸ್
  5. 5.ಪ್ರಯಾಣಿಕರು ನಿಂತಾಗ ಆಧಾರಕ್ಕೆ ಎರಡು ಸಾಲು ಗ್ರಾಬ್ ರೈಲ್
  6. 6.ಬಸ್ ಹಿಂದೆ ಹಾಗೂ ಮುಂದೆ ಎಲ್ಇಡಿ ಮಾರ್ಗಫಲಕ‌
  7. 7.ಬಸ್ ಮುಂದೆ ಹಾಗೂ ಹಿಂದೆ ಎರಡು ಹೈ ಕ್ವಾಲಿಟಿ ಕ್ಯಾಮೆರಾ
  8. 8.ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಪ್ರಯಾಣಿಕರಿಗಾಗಿ ಪ್ಯಾನಿಕ್ ಬಟನ್
  9. 9.ಮುಂದಿನ ನಿಲ್ದಾಣ ಮಾಹಿತಿ ನೀಡುವ ಧ್ವನಿವರ್ಧಕ
  10. 10.ಘಾಟ್‌ನ ತಿರುವುಗಳಲ್ಲಿ ಸ್ವಯಂಚಾಲಿತ ಬ್ರೇಕ್ ಕಂಟ್ರೋಲ್ ವ್ಯವಸ್ಥೆ
  11. 11.ಪಾಯಿಂಟ್‌ ಟು ಪಾಯಿಂಟ್‌ ಎಕ್ಸಪ್ರೆಸ್‌ ಅಶ್ವಮೇಧ ಬಸ್‌ಗಳ ಎತ್ತರ 3.42 ಮೀಟರ್

ಇದನ್ನೂ ಓದಿ | Budget Session: ಫೆ. 12ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ; ಫೆ.16ಕ್ಕೆ ರಾಜ್ಯ ಬಜೆಟ್‌

ಶಕ್ತಿ ಯೋಜನೆಯಿಂದ ಉಂಟಾಗಿರುವ ಒತ್ತಡ ಕಮ್ಮಿ ಮಾಡಲು ಹೈಟೆಕ್ ನಾನ್‌ ಎಸಿ ಬಸ್‌ಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ.‌ ಇವತ್ತಿನಿಂದ ಕೆಎಸ್ಆರ್ಟಿಸಿಯಲ್ಲಿ ನೂರು ಬಸ್ಗಳ ಓಡಾಟವೂ ಆರಂಭವಾಗಿದೆ. ಮೇ ತಿಂಗಳೊಳಗೆ ಇದೇ ಮಾದರಿಯ ಬಸ್ ಇನ್ನೂ 600 ಎಂಟ್ರಿಯಾಗಲಿವೆ.

Exit mobile version