Site icon Vistara News

KSRTC Buses: 100 ಹೊಸ ವಿನ್ಯಾಸದ ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಲೋಕಾರ್ಪಣೆ ಮಾಡಿದ ಸಿಎಂ

KSRTC bus

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ (KSRTC Buses) ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್‌ಗಳನ್ನು (ಅಶ್ವಮೇಧ – ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್-Ashvamedha Classic bus) ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು.

ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸುಖಕರ ಪ್ರಯಾಣದ ಅನುಭವ ಒದಗಿಸುವ ಉದ್ದೇಶದಿಂದ ಅಶ್ವಮೇಧ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಿದೆ.

ಅಶ್ವಮೇಧ ಬಸ್‌ಗಳ ವಿಶೇಷತೆ ಏನು?

1.ಪಾಯಿಂಟ್‌ ಟು ಪಾಯಿಂಟ್‌ ಎಕ್ಸಪ್ರೆಸ್‌ ಅಶ್ವಮೇಧ ಬಸ್‌ಗಳ ಎತ್ತರ 3.42 ಮೀಟರ್
2.ಈ ಬಸ್‌ನಲ್ಲಿ 52 ಆಸನಗಳಿದ್ದು, ಬಕೆಟ್ ಟೈಪ್ ವಿನ್ಯಾಸ
3.ʼಪ್ರಯಾಣದ ಮರು ಕಲ್ಪನೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಬಸ್‌ಗಳ ಪರಿಚಯ
4.ವಿಶಾಲವಾಗಿ ಮುಂದಿನ ಮತ್ತು ಹಿಂದಿನ ಗಾಜುಗಳ ವಿನ್ಯಾಸ
5.ಕಿಟಕಿ ಫ್ರೇ ಮ್ ಹಾಗೂ ಗಾಜು ದೊಡ್ಡದಾಗಿದ್ದು, ಟಿಂಟೆಡ್ ಗಾಜುಗಳ ಅಳವಡಿಕೆ
6.ಬಸ್‌ನಲ್ಲಿ ಸ್ಥಳ ಟ್ರ್ಯಾಕರ್‌, ಪ್ಯಾನಿಕ್‌ ಬಟನ್‌ ಹಾಗೂ ಬಸ್‌ ಒಳಗೆ ಮುಂಭಾಗದಲ್ಲಿ ಎಲ್‌ಇಡಿ ಫಲಕ
7.ಲಗೇಜ್‌ ಕ್ಯಾರಿಯರ್‌ಗಳನ್ನು ವಿನೂತನವಾಗಿ ವಿನ್ಯಾಸ

ಕೆಎಸ್‌ಆರ್‌ಟಿಸಿಗೆ ವರ್ಷದೊಳಗೆ 1000 ಬಸ್‌ಗಳ ಸೇರ್ಪಡೆ: ಸಿಎಂ ಸಿದ್ದರಾಮಯ್ಯ

ಶಕ್ತಿ ಯೋಜನೆಯಡಿ 146 ಕೋಟಿ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಮಹಿಳಾ ಸಬಲೀಕರಣಕ್ಕೆ ಶಕ್ತಿ ಯೋಜನೆ ಪೂರಕವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಈ ವರ್ಷ ಒಂದು ಸಾವಿರ ಬಸ್‌ಗಳನ್ನು ಸೇರ್ಪಡೆ ಮಾಡುತ್ತಿದ್ದು, ಇಂದು ನೂರು ಬಸ್ಸುಗಳ ಬಿಡುಗಡೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ಜನರಿಗೆ 4 ನಿಗಮಗಳು ಬಸ್‌ ಸೇವೆ ಒದಗಿಸುತ್ತಿದೆ. ನಾಲ್ಕು ವರ್ಷಗಳಿಂದ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕೂಡ 3800 ಬಸ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಸಂಸ್ಥೆಗೆ 5800 ಬಸ್‌ಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. ಈ ರಾಜ್ಯದ ಜನರಿಗೆ ಸುರಕ್ಷಿತ ಮತ್ತು ಸರಾಗ ಪ್ರಯಾಣ ಮಾಡಲು ಅಗತ್ಯ ಅನುಕೂಲಗಳನ್ನು ಮಾಡಿಕೊಡಲಿದೆ ಎಂದು ತಿಳಿಸಿದರು.

ಸಿಬ್ಬಂದಿಗೆ ವಿಮಾ ಸೌಲಭ್ಯ

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ವಿಮಾ ಸೌಲಭ್ಯವನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಕರ್ತವ್ಯದ ವೇಳೆ ಮೃತಪಡುವ ಸಿಬ್ಬಂದಿಗೆ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಪೂರ್ವದ ಭರವಸೆ ಈಡೇರಿಸಲಾಗಿದೆ

ಚುನಾವಣಾ ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕ.ರ.ಸಾ.ಸಂ ಮತ್ತು ಇತರೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿದ್ದೆವು. ಬೆಲೆಯೇರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಪರಿಸ್ಥಿತಿಯಲ್ಲಿ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿದ್ದೇವೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಕ.ರ.ಸಾ.ಸಂ ಅಧ್ಯಕ್ಷ ಗೋಪಿ ಶ್ರೀನಿವಾಸ್ , ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | CM Siddaramaiah: 5 ವರ್ಷದಲ್ಲಿ 73 ಸಾವಿರ ಕೋಟಿ ರೂ. ಕಡಿತ; ಕೇಂದ್ರದ ವಿರುದ್ಧ ಸಿಎಂ ಗರಂ

2 ಸಾವಿರ ಬಸ್‌ ಖರೀದಿಗೆ ಕ್ರಮ: ಡಿ.ಕೆ.ಶಿವಕುಮಾರ್

ಕಳೆದ ಎರಡು ಮೂರು ದಿನಗಳಿಂದ ದೇಶದಲ್ಲಿ ಬೇರೆ ರಾಜ್ಯಗಳ ಜನಪರ ಕಾರ್ಯಕ್ರಮಗಳ ಸಾಧನೆಯ ಮಾಹಿತಿ ತರಿಸಿಕೊಂಡಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಸಾವಿರ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದು, ಹಂತ ಹಂತವಾಗಿ ಇದನ್ನು ಮಾಡುತ್ತಿದ್ದೇವೆ. ಆಮೂಲಕ ಜನ ಸೇವೆಯಲ್ಲಿ ನಮ್ಮ ಸರ್ಕಾರ ಇತಿಹಾಸ ಬರೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಮಹಿಳೆಯರಿಗೆ ಅನುಕೂಲವಾಗಲು ಪಿಂಕ್ ಬಸ್‌ಗಳನ್ನು ಪರಿಚಯಿಸಲು ಸಚಿವ ರಾಮಲಿಂಗಾರೆಡ್ಡಿ ಅವರು ಮುಂದಾಗಿದ್ದಾರೆ. ಸಾರಿಗೆ ಇಲಾಖೆಯಲ್ಲಿ 10 ಸಾವಿರ ಸಿಬ್ಬಂದಿ ನೇಮಕಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 52 ಸಾವಿರ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಆಮೂಲಕ ನಾವು ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | KPSC Recruitment 2024: ವಿವಿಧ ಇಲಾಖೆಗಳಲ್ಲಿನ 1,227 ಹುದ್ದೆಗಳಿಗೆ ನೇಮಕ; ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ

ನಾವು ಶಕ್ತಿ ಯೋಜನೆ ತಂದಿರುವುದರಿಂದ ಸಾರಿಗೆ ಸಂಸ್ಥೆಗಳಿಗೆ ಹಣ ಬರುತ್ತಿದೆ. ಹೀಗಾಗಿ ಸಾರಿಗೆ ಸಂಸ್ಥೆಗಳು ಯಾರ ಮೇಲೂ ಅವಲಂಬಿತವಾಗುವ ಅಗತ್ಯವಿಲ್ಲ. ಸಚಿವರು ಶಕ್ತಿ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಇದರಿಂದ ಯಾರೂ ಎಷ್ಟು ಬಳಕೆ ಮಾಡಿದ್ದಾರೆ ಎಂಬ ಲೆಕ್ಕಾಚಾರ ಸಿಗುತ್ತವೆ. ಸಾರಿಗೆ ಇಲಾಖೆಯ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಕೂಡ ಆಗಿದ್ದು, ಮುಂದಿನ ದಿನಗಳಲ್ಲಿ ಕ್ರಾಂತಿ ಆಗಲಿದೆ ಎಂದು ಹೇಳಿದರು.

Exit mobile version