ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಯಶಸ್ಸಿನ ಹಳಿಗೆ ತರಲು ಕೇಂದ್ರ ಸರ್ಕಾರ ಮತ್ತೆ 89 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಕೇಂದ್ರ ಸರ್ಕಾರಿ ಒಡೆತನದ, ನಷ್ಟದಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿ.ಗೆ ಪುನರುಜ್ಜೀವನ ನೀಡುವುದು ಕೇಂದ್ರದ ಉದ್ದೇಶವಾಗಿದೆ. ಈ ಸಂಸ್ಥೆಗೆ ಕೇಂದ್ರ ಸರ್ಕಾರ ಘೋಷಿಸುತ್ತಿರುವ ಮೂರನೇ ಪ್ಯಾಕೇಜ್ ಇದಾಗಿದೆ. 2019ರಲ್ಲಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳಿಗೆ 69 ಸಾವಿರ ಕೋಟಿ ರೂ. ನೀಡಿತ್ತು. 2022ರಲ್ಲಿ ಎರಡೂ ಸಾರ್ವಜನಿಕ ಉದ್ದಿಮೆಗಳ ಏಳಿಗೆಗೆ 1.64 ಲಕ್ಷ ಕೋಟಿ ರೂ. ಒದಗಿಸಲಾಗಿತ್ತು. ಆದರೆ ಹೀಗೆ ಪ್ಯಾಕೇಜ್‌ಗಳ ಬಲದಿಂದ ಒಂದು ಬೃಹತ್ ಸಂಸ್ಥೆಯನ್ನು ಉಳಿಸಿಕೊಳ್ಳಲು ಹೆಣಗಾಡಿದರೆ ಏನೂ ಫಲವಿಲ್ಲ. ಇದಕ್ಕೆ ಆಗಬೇಕಾದ ಚಿಕಿತ್ಸೆಯೇ ಬೇರೆ.
ಹಾಗೆ ನೋಡಿದರೆ ಈಗ ಮುನ್ನಡೆಯಲ್ಲಿರುವ ಎಲ್ಲ ಖಾಸಗಿ ಟೆಲಿಕಾಂ ಸಂಸ್ಥೆಗಳಿಗಿಂತ ಬಿಎಸ್‌ಎನ್‌ಎಲ್ ಹೆಚ್ಚು ಅತ್ಯಾಧುನಿಕವಾಗಿತ್ತು ಮತ್ತು ಹೆಚ್ಚಿನ ನೆಟ್‌ವರ್ಕ್ ಹೊಂದಿತ್ತು. ಈಗಲೂ ದೇಶದ ಹಳ್ಳಿ ಮೂಲೆಗಳು ಬಿಎಸ್‌ಎನ್‌ಎಲ್ ಸಂಪರ್ಕವನ್ನೇ ಹೊಂದಿವೆ. ದೊಡ್ಡ ಖಾಸಗಿ ಟೆಲಿಕಾಂ ಸಂಸ್ಥೆಗಳು ತಲುಪಲಾಗದ ಕುಗ್ರಾಮಗಳನ್ನು ಬಿಎಸ್‌ಎನ್‌ಎಲ್ ಮುಟ್ಟಿದೆ. ಹೇಗೆ ಆಲ್ ಇಂಡಿಯಾ ರೇಡಿಯೋದಂತೆ, ದೂರದರ್ಶನದಂತೆ ಬಿಎಸ್‌ಎನ್‌ಎಲ್ ಕೂಡ ಭಾರತದ ಪ್ರಜೆಗಳಿಗೆ ಆಪ್ತವಾದ ಸಖನಾಗಿತ್ತು. ದೇಶದ ಮೊದಲ ಎರಡು ತಲೆಮಾರುಗಳ ಇಂಟರ್‌ನೆಟ್ ಸಂಪರ್ಕ ಕೂಡ ಬಹುತೇಕ ಸಾಧ್ಯವಾದುದು ಬಿಎಸ್‌ಎನ್‌ಎಲ್‌ನಿಂದ. ಈಗಲೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಬಗ್ಗೆ ಪ್ರಜೆಗಳಿಗೆ ಪ್ರೀತಿ, ವಿಶ್ವಾಸಗಳೇ ಇವೆ. ಆದರೆ ಅದನ್ನು ಉಳಿಸಿಕೊಳ್ಳಬೇಕೆಂಬ ಬದ್ಧತೆ ಅಲ್ಲಿನ ಅಧಿಕಾರಿ ವರ್ಗ, ಆಳುವ ರಾಜಕಾರಣಿಗಳಿಗೆ ಇದೆಯೇ ಎಂಬುದು ಅನುಮಾನ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
ಕಳೆದ ಐದು ವರ್ಷಗಳಲ್ಲಿ ಬಿಎಸ್‌ಎನ್‌ಎಲ್ 50,000 ಕೋಟಿ ರೂ.ಗೂ ಅಧಿಕ ನಷ್ಟವನ್ನು ಎದುರಿಸಿದೆ. ಸ್ವಂತ ಕಟ್ಟಡಗಳು, ಬಲಿಷ್ಠ ಸಂಖ್ಯೆಯ ಸಿಬ್ಬಂದಿ, ಎಲ್ಲ ಬಗೆಯ ಮೂಲಸೌಕರ್ಯಗಳು, ಎಲ್ಲ ಕಡೆ ಸಂಪರ್ಕ ಇದ್ದರೂ ಬಿಎಸ್‌ಎನ್‌ಎಲ್ ನಷ್ಟ ಅನುಭವಿಸಲು ಕಾರಣವೇನು? ಇದಕ್ಕೆ ಇಲ್ಲಿನ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೊಣೆಗೇಡಿತನ, ಅದಕ್ಷತೆ, ಜತೆಗೆ ಅಂದಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯಗಳೇ ಕಾರಣವಾಗಿ ಬಿಎಸ್‌ಎನ್‌ಎಲ್ ಅವನತಿಯತ್ತ ಸಾಗಿತ್ತು. ಇಲ್ಲಿ ಬಂದು ಕುಳಿತುಕೊಂಡ ಹೆಗ್ಗಣಗಳು ಸಾಕಷ್ಟು ದೊಡ್ಡ ತೂತನ್ನು ಕೊರೆದಿವೆ. ಬಿಎಸ್‌ಎನ್‌ಎಲ್ ಅನ್ನು ಹಿಂದಿಕ್ಕಿ ಖಾಸಗಿ ಟೆಲಿಕಾಂ ಕಂಪನಿಗಳ ಬೆಳವಣಿಗೆಯಾಗುವಂತೆ ಮಾಡಲು ಜನಪ್ರತಿನಿಧಿಗಳಿಗೂ ಎಷ್ಟು ಕಿಕ್‌ಬ್ಯಾಕ್ ಸಿಕ್ಕಿದೆಯೋ ತಿಳಿಯದು. ಸದ್ಯ ಕೇಂದ್ರ ಸರ್ಕಾರ ದೇಶದ 25,000 ಇಂಟರ್‌ನೆಟ್ ಸಂಪರ್ಕವೂ ಇಲ್ಲದ ಗ್ರಾಮಗಳಿಗೆ 3G/4G ಸಂಪರ್ಕ ನೀಡಲು ಬಿಎಸ್‌ಎನ್‌ಎಲ್ ಅನ್ನು ಸಜ್ಜುಗೊಳಿಸುತ್ತಿದೆ. 5G ತರಂಗಾಂತರವನ್ನೂ ಬಿಎಸ್‌ಎನ್‌ಎಲ್‌ಗೆ ನೀಡಲು ಮುಂದಾಗುತ್ತಿದೆ. ಇದು ಸಂಸ್ಥೆಯ ಬೆಳವಣಿಗೆಗೆ ಪೋಷಣೆ ನೀಡುವ ನಡೆಗಳು.
ಬಿಎಸ್‌ಎನ್‌ಎಲ್‌ನ ಅಸ್ತಿತ್ವ ಉಳಿಯುವುದು ದೇಶದ ನಾಗರಿಕರ ಹಿತದೃಷ್ಟಿಯಿಂದ ಅತಿ ಮುಖ್ಯ. ಏಕೆಂದರೆ, ಕೇಂದ್ರ ಸರ್ಕಾರಿ ಅಧೀನದ ಸಂಸ್ಥೆಯೊಂದು ನಾಶವಾದರೆ ಅದು ಖಾಸಗಿ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಜನಸಾಮಾನ್ಯರು ಮೊಬೈಲ್ ಸೇವೆಗಳ ದರ ಏರಿಕೆಯ ಬಿಸಿ ಅನುಭವಿಸಬೇಕಾಗುತ್ತದೆ. ಸದ್ಯ ಭಾರತದಲ್ಲಿ ಡೇಟಾ ದರಗಳು ಜಗತ್ತಿನಲ್ಲೇ ಅತ್ಯಂತ ಕಡಿಮೆಯಿವೆ; ಯಾಕೆಂದರೆ ಖಾಸಗಿ ಸಂಸ್ಥೆಗಳ ನಡುವೆ ಸಾಕಷ್ಟು ಪೈಪೋಟಿ ಇರುವುದರ ಜತೆಗೆ ಬಿಎಸ್‌ಎನ್‌ಎಲ್ ಸಂಸ್ಥೆಯ ವ್ಯಾಪಕ ಹಿಡಿತವೂ ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ಸ್ಪರ್ಧಾತ್ಮಕ ರೀತಿಯಲ್ಲಿ ಇಂಟರ್‌ನೆಟ್ ಲಭ್ಯವಾಗುತ್ತಿದೆ. ಇದು ಹೀಗೇ ಮುಂದುವರಿಯಬೇಕಿದ್ದರೆ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಸಂಸ್ಥೆಯ ಕಾರ್ಯ ಚಟುವಟಿಕೆಯ ಮೇಲೆ ಮತ್ತಷ್ಟು ನಿಗಾ ವಹಿಸಬೇಕು. ಸಿಬ್ಬಂದಿಯಲ್ಲಿ ಮತ್ತಷ್ಟು ದಕ್ಷತೆ ಬರುವಂತಾಗಬೇಕು. ಇದಕ್ಕಾಗಿ ಓರಿಯೆಂಟೇಶನ್, ದಕ್ಷತೆಗೆ ಹೆಚ್ಚಿನ ಮನ್ನಣೆ ಇತ್ಯಾದಿಗಳು ಜಾರಿಗೆ ಬರಬೇಕು. ಕೇಂದ್ರ ಸರ್ಕಾರ ಈ ಸಂಸ್ಥೆಯ ಮೇಲೆ ವಿನಿಯೋಗಿಸುವ ಲಕ್ಷಾಂತರ ಕೋಟಿ ರೂ. ವ್ಯರ್ಥವಾಗಬಾರದು.