ಉಡುಪಿ: ನಾನು ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ಕೊಟ್ಟೇ ಕೊಡುತ್ತೇನೆ (I will visit Ayodhya) ಎಂದು ರಾಜ್ಯದ ಮಹಿಳಾ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಘೋಷಿಸಿದ್ದಾರೆ. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈ ಬಾರಿ ಉಡುಪಿ ಪರ್ಯಾಯ ಉತ್ಸವದಲ್ಲಿ (Udupi Paryaya Utsava) ಪಾಲ್ಗೊಳ್ಳುತ್ತಿಲ್ಲ ಎಂದು ಪ್ರಕಟಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಪರ್ಯಾಯದ ಸಿದ್ಧತೆಗಳ ಬಗ್ಗೆ ಮೇಲ್ವಿಚಾರಣೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.
ಕಾಂಗ್ರೆಸ್ ನಿಲುವು ಬೇರೆ, ನನ್ನ ಭಕ್ತಿ ಬೇರೆ ಎಂದ ಹೆಬ್ಬಾಳ್ಕರ್
ರಾಮಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ನೀಡಿದ್ದೇನೆ. ರಾಮ- ಕೃಷ್ಣ, ಪರಮೇಶ್ವರನ ಮೇಲೆ ನನಗೆ ಬಹಳ ಭಕ್ತಿ ಇದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.
ನಾನು ನಮ್ಮ ಸಂಸ್ಕೃತಿ, ಭಕ್ತಿಯನ್ನು ಆಚರಿಸುತ್ತೇನೆ. ರಾಮಮಂದಿರ ವಿಚಾರದಲ್ಲಿ ಪಕ್ಷದ ನಡೆಯ ಬಗ್ಗೆ ನಾನು ಮಾತನಾಡಲ್ಲ. ನಾನು ಪಕ್ಷದ ಅಧ್ಯಕ್ಷೆ ಅಲ್ಲ ಅಥವಾ ದೊಡ್ಡ ಸ್ಥಾನದಲ್ಲೂ ಇಲ್ಲ. ನಾನು ದೈವೀ ಭಕ್ತಳು ಎಂದು ಪದೇಪದೆ ಹೇಳುತ್ತೇನೆ ಎಂದರು.
ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗಿಯೇ ಹೋಗುತ್ತೇನೆ. ರಾಮ ಮಂದಿರ ಅವರದ್ದೂ ಅಲ್ಲ ನಮ್ಮದೂ ಅಲ್ಲ. ಅಯೋಧ್ಯಾ ರಾಮ ಮಂದಿರ 140 ಕೋಟಿ ಜನರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ : Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ದಾವಣಗೆರೆಯಲ್ಲಿ ನಾಳೆ ಬಿಡುಗಡೆ
ಪರ್ಯಾಯಕ್ಕೆ 10 ಕೋಟಿ ರೂ. ಬಿಡುಗಡೆಗೆ ಕ್ರಮ
ಐತಿಹಾಸಿಕ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದ್ದು, ನಗರೋತ್ಥಾನ ಅಭಿವೃದ್ಧಿಗಾಗಿ ಈಗಾಗಲೇ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.
ಶ್ರೀಮಠದ ಪರ್ಯಾಯಕ್ಕೆ ಮುಖ್ಯಮಂತ್ರಿಯವರು 10 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕ್ರಮ ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಳ್ಳುತ್ತಿದ್ದೇನೆ. ಪರ್ಯಾಯ ಮಹೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ವಿವಿಧ ಕಾರಣಗಳಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.