Site icon Vistara News

Lal Salaam: ಬೈಂದೂರಿನ ಕಾಡಿನಲ್ಲಿ ನಕ್ಸಲರಿಂದ ಲಾಲ್ ಸಲಾಂ ಕಾರ್ಯಕ್ರಮ, ವಿಕ್ರಂ ಗೌಡ ಭಾಗಿ?

vikram gowda naxal

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಡಿನ ಒಳಗೆ ನಕ್ಸಲರಿಂದ (Naxalism in western Ghats) ಲಾಲ್ ಸಲಾಂ (Lal salaam) ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ನಕ್ಸಲ್ ನಾಯಕ ಸಾಕೇತ್ ರಾಜನ್ (Saketh Rajan) ಎನ್‌ಕೌಂಟರ್ (Encounter) ನಡೆದು 19 ವರ್ಷ ಆದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆದಿದೆ.

ನಕ್ಸಲ್ ನಾಯಕ ವಿಕ್ರಂ ಗೌಡ (Naxal leader Vikram Gowda) ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. 2005ರ ಫೆಬ್ರವರಿ 6ರಂದು ಉಡುಪಿ ಜಿಲ್ಲೆಯ ಮೆಣಸಿನಹಾಡ್ಯದಲ್ಲಿ ಸಾಕೇತ್ ಎನ್‌ಕೌಂಟರ್ ನಡೆದಿತ್ತು. ಇದರಿಂದ ಈ ಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದ್ದ ನಕ್ಸಲ್‌ ಚಟುವಟಿಕೆಗಳಿಗೆ ಬಲವಾದ ಆಘಾತ ಉಂಟಾಗಿತ್ತು. ಹಲವು ವರ್ಷಗಳ ಬಳಿಕ ಪಶ್ಚಿಮ ಘಟ್ಟದಲ್ಲಿ ಮತ್ತೆ ಕೆಂಪು ಧ್ವಜ ಹಾರಾಡುತ್ತಿದ್ದು, ನಕ್ಸಲೀಯ ಚಟುವಟಿಕೆಗಳ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿರುವ ಕುರಿತು ಮಾಹಿತಿಗಳು ಇವೆ.

ನಕ್ಸಲ್ ನಾಯಕರ ಹತ್ಯೆಯ ದಿನವನ್ನು ಸಂಘಟನೆಯ ಒಳಗೆ ಹುತಾತ್ಮ ದಿನವನ್ನಾಗಿ ಆಚರಿಸುತ್ತಾರೆ. ಈ ಬಾರಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲೇ ನಡೆಸಲು ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಬೈಂದೂರಿನ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್ ಓಡಾಟ ಜೋರಾಗಿದೆ ಎನ್ನಲಾಗಿದ್ದು, ಮೂಲತಃ ಉಡುಪಿಯ ಹೆಬ್ರಿ ಮೂಲದವನಾದ ವಿಕ್ರಂ ಗೌಡ ಇದರ ನೇತೃತ್ವ ವಹಿಸಿದ್ದಾನೆ ಎಂದು ತಿಳಿದುಬಂದಿದೆ. ರೆಡ್ ಸಲಾಂ ಕಾರ್ಯಕ್ರಮಕ್ಕಾಗಿಯೇ ಈತನ ಜೊತೆ ಇನ್ನೂ ಹಲವರು ಬೈಂದೂರಿಗೆ ಬಂದಿರುವ ಶಂಕೆ ಇದೆ. ಯುವ ಪೀಳಿಗೆಯ ಇನ್ನಷ್ಟು ಮಂದಿಯನ್ನು ನಕ್ಸಲಿಸಂಗೆ ಆಕರ್ಷಿಸುವ ಉದ್ದೇಶವೂ ಇದರಲ್ಲಿ ಅಡಗಿದೆ ಎಂಬ ಅನುಮಾನ ಮೂಡಿದೆ.

ವಿಕ್ರಂ ಗೌಡ ಕಳೆದ 20 ವರ್ಷದಿಂದ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಗೌರಿ ಲಂಕೇಶ್‌ ಸೇರಿದಂತೆ ಕೆಲವರು ಯತ್ನಿಸುವುದನ್ನು ತೀವ್ರವಾಗಿ ಆಕ್ಷೇಪಿಸಿದ್ದ. ಅಲ್ಲದೆ, ಗೌರಿ ಲಂಕೇಶ್‌ ಅವರನ್ನು ಈ ಕಾರಣಕ್ಕಾಗಿ ವಿರೋಧಿಸುತ್ತಿದ್ದ. ಗೌರಿ ಲಂಕೇಶ್‌ ಹತ್ಯೆಯಾದಾಗ ವಿಕ್ರಂ ಗೌಡ ತಂಡವೇ ಹತ್ಯೆ ನಡೆಸಿರುವ ಸಾಧ್ಯತೆಯ ಕುರಿತು ಕೂಡ ಎಸ್‌ಐಟಿ ತನಿಖೆ ನಡೆಸಿತ್ತು.

ವಿಕ್ರಂ ಗೌಡ ಮೂಲತಃ ಉಡುಪಿಯ ಹೆಬ್ರಿ ತಾಲೂಕಿನ ಕೂಡ್ಲನಾಡು ಗ್ರಾಮದವನು. ಈತ ಕಾರ್ಮಿಕ ಸಂಘಟನೆಯಿಂದ ನಕ್ಸಲನಾಗಿ ಕಾಡು ಸೇರಿಕೊಂಡ. ಕೇವಲ ಕರ್ನಾಟಕ ಮಾತ್ರ ಅಲ್ಲದೆ, ಕೇರಳ ಹಾಗೂ ತಮಿಳುನಾಡುವಿನಲ್ಲಿ ಕಾಣಿಸಿಕೊಳ್ಳುತ್ತಿದ್ದ. ಮೂರು ಬಾರಿ ಕರ್ನಾಟಕದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ.

2016ರಲ್ಲಿ ಕೇರಳದ ನಿಲಂಬೂರು ಅರಣ್ಯದಲ್ಲಿ ನಕ್ಸಲ್‌ ನಿಗ್ರಹ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಬಲಿಯಾದರೆ, ವಿಕ್ರಂ ಗೌಡ ಹಾಗೂ ಇತರರು ಪರಾರಿಯಾಗಿದ್ದರು. ನಂತರ ಆತನ ಸುಳಿವು ದೊರೆಯಲಿಲ್ಲ. ಇದೀಗ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗೆ ಸೇರುವ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಈ ತಂಡ ನುಸುಳಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ. ಈ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಸಾಕೇತ್‌ ರಾಜನ್‌ ಶವ ಪಡೆಯಲು ಕುಟುಂಬಸ್ಥರು ಯಾಕೆ ಒಪ್ಪಲಿಲ್ಲ?

Exit mobile version