ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ (Independence Day) ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ (Horticulture department) ಆಯೋಜನೆಯಾಗುವ ಫಲಪುಷ್ಪ ಪ್ರದರ್ಶನ (Lalbagh Flower Show) ಇಂದಿನಿಂದ ಲಾಲ್‌ಬಾಗ್‌ನಲ್ಲಿ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಆಗಸ್ಟ್ 8ರಿಂದ 19ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ (Dr BR Ambedkar) ಥೀಮ್ ಆಧರಿಸಿದೆ. ಜೊತೆಗೆ ನವದೆಹಲಿಯ ಸಂಸತ್ ಭವನದ ಕಲಾಕೃತಿ ಇರಲಿದೆ. ಸಂಸತ್ ಭವನದ ಪ್ರತಿಕೃತಿಯು 3.6 ಲಕ್ಷ ಗುಲಾಬಿ ಹಾಗೂ 2.4 ಲಕ್ಷ ಸೇವಂತಿಗೆ ಹೂಗಳಲ್ಲಿ ಅನಾವರಣಗೊಂಡಿದೆ. ಸಂಸತ್ ಭವನದ ಮುಂಭಾಗದಲ್ಲಿ 12 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ರಾರಾಜಿಸಲಿದೆ. ಅಂಬೇಡ್ಕರ್ ಅವರ ಚೈತ್ಯಭೂಮಿ ಸ್ಮಾರಕ ಸ್ತೂಪವನ್ನು 3.4 ಲಕ್ಷ ಹೂಗಳಿಂದ ನಿರ್ಮಿಸಲಾಗಿದೆ. ಮಹಾಡ್ ಸತ್ಯಾಗ್ರಹ, ಕಲಾ ರಾಮ್ ದೇವಸ್ಥಾನದ ಪ್ರವೇಶ, ಕೋರೆಗಾಂವ್ ವಿಜಯೋತ್ಸವ ಮುಂತಾದ ಅಂಬೇಡ್ಕರ್ ಜೀವನದ ಮಹತ್ವದ ಸನ್ನಿವೇಶಗಳ ಕಲಾಕೃತಿಗಳ ಪ್ರದರ್ಶನವಿದೆ.
216ನೇ ಫಲಪುಷ್ಪ ಪ್ರದರ್ಶನಕ್ಕೆ 10:30ಕ್ಕೆ ಚಾಲನೆ. ಅಂಬೇಡ್ಕರ್ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರಲಿದ್ದಾರೆ. ಹೊರರಾಜ್ಯಗಳಿಂದ 8.6 ಲಕ್ಷ ಹೂವುಗಳನ್ನು ರಾಜಧಾನಿಗೆ ತರಲಾಗಿದೆ. 12 ದಿನಗಳ ಕಾಲ ನಡೆಯಲಿರುವ ಕಲರ್‌ಫುಲ್ ಪುಷ್ಪ ಪ್ರದರ್ಶನಕ್ಕೆ ಈ ಬಾರಿ 2.80 ಕೋಟಿ ವೆಚ್ಚ ಮಾಡಲಾಗಿದೆ.
ವಾಹನ ನಿಲುಗಡೆ ನಿಷೇಧ
ಲಾಲ್‌ಬಾಗ್ ಸುತ್ತಮುತ್ತಲ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆ (Vehicle parking) ನಿಷೇಧಿಸಲಾಗಿದೆ. ನಿಷೇಧಿತ ರಸ್ತೆಗಳು ಹೀಗಿವೆ:
ಮರೀಗೌಡ ರಸ್ತೆ– ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್‌ವರೆಗೆ ರಸ್ತೆಯ ಎರಡೂ ಬದಿ.
ಕೆ.ಎಚ್. ರಸ್ತೆ – ಕೆ.ಎಚ್. ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿ.
ಲಾಲ್‌ಬಾಗ್ ರಸ್ತೆ – ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರದವರೆಗೆ
ಸಿದ್ದಯ್ಯ ರಸ್ತೆ – ಊರ್ವಶಿ ಚಿತ್ರಮಂದಿರದ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್‌ವರೆಗೆ
ಬಿಟಿಎಸ್ ಬಸ್ ನಿಲ್ದಾಣ – ಬಿಎಂಟಿಸಿ ಜಂಕ್ಷನ್‌ನಿಂದ ರಸ್ತೆಯ ಎರಡೂ ಬದಿ.
ಕೃಂಬಿಗಲ್ ರಸ್ತೆಯ ಎರಡೂ ಬದಿ
ಲಾಲ್‌ಬಾಗ್ ವೆಸ್ಟ್‌ಗೇಟ್‌ನಿಂದ ಆರ್.ವಿ. ಟೀಚರ್ಸ್ ಕಾಲೇಜುವರೆಗೆ.
ಆರ್.ವಿ. ಟೀಚರ್ಸ್ ಕಾಲೇಜಿನಿಂದ ಅಶೋಕ ಪಿಲ್ಲರ್‌ವರೆಗೆ.
ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್‌ವರೆಗೆ.
ವಾಹನಗಳ ನಿಲುಗಡೆಗೆ ಅವಕಾಶ ಎಲ್ಲೆಲ್ಲಿ?
- ಮರೀಗೌಡ ರಸ್ತೆ – ಆಲ್ ಅಮೀನ್ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
- ಕೆ.ಎಚ್. ರಸ್ತೆ– ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
- ಮರೀಗೌಡ ರಸ್ತೆ – ಹಾಪ್ಕಾಮ್ಸ್ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಇದೆ.
- ಜೆ.ಸಿ. ರಸ್ತೆ – ಕಾರ್ಪೊರೇಶನ್ ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ
ಟಿಕೆಟ್ ದರ ಎಷ್ಟು?
ವಯಸ್ಕರಿಗೆ ಟಿಕೆಟ್ ದರ (Ticket fees) 80 ರೂ. ಮಕ್ಕಳಿಗೆ 30 ರೂ. ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ. ಶಾಲಾ ಮಕ್ಕಳಿಗೆ ಸಂಪೂರ್ಣ ಉಚಿತವಾಗಿದೆ.
ಇದನ್ನೂ ಓದಿ: Lalbagh Flower Show: ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ಅಂಬೇಡ್ಕರ್ ಜೀವನಗಾಥೆ!