Site icon Vistara News

Lashkar-e-Taiba : ಎಲ್ಇಟಿ- ಹಮಾಸ್ ಒಂದಾಗುತ್ತಿದೆಯೇ? ಜಾಗತಿಕ ಆತಂಕ ತಂದಿಟ್ಟ ಉಗ್ರಗಾಮಿ ಸಂಘಟನೆಗಳ ಮುಖ್ಯಸ್ಥರ ಭೇಟಿ

Lashkar-e-Taiba

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಮರದ ಉದ್ವಿಗ್ನತೆಯ ಮಧ್ಯೆ, ಲಷ್ಕರ್-ಎ-ತೈಬಾ (Lashkar-e-Taiba ) ಮುಖ್ಯಸ್ಥ ಹಫೀಜ್ ಸಯೀದ್‌‌ನ ಆಪ್ತ ಸಹಾಯಕ ಸೈಫುಲ್ಲಾ ಖಾಲಿದ್ ಕತಾರ್‌ನ ದೋಹಾದಲ್ಲಿ ಹಮಾಸ್‌‌ನ ಹೊಸ ರಾಜಕೀಯ ಮುಖ್ಯಸ್ಥ ಖಾಲಿದ್ ಮೆಶಾಲ್ ಅವರನ್ನು ಭೇಟಿಯಾಗಿರುವುದಾಗಿ ವರದಿಯಾಗಿದೆ. ಅವರಿಬ್ಬರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಈ ಭೇಟಿಯು ಎರಡು ಭಯೋತ್ಪಾದಕ ಗುಂಪುಗಳ ನಡುವಿನ ಸಂಭಾವ್ಯ ಮೈತ್ರಿಯಾಗಿರಬಹುದು ಎನ್ನಲಾಗಿದ್ದು ಜಾಗತಿಕ ಕಳವಳ ಹುಟ್ಟುಹಾಕಿದೆ.

ಯುಎಸ್ ಮತ್ತು ಭಾರತದಿಂದ ಭಯೋತ್ಪಾದಕ ಎಂದು ಕರೆಯಲ್ಪಟ್ಟಿರುವ ಖಾಲಿದ್ ಕಳೆದ ವಾರ ಟೆಹ್ರಾನ್‌ನಲ್ಲಿ ಹಮಾಸ್‌ನ ಹಿಂದಿನ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಗೆ ಸಂತಾಪ ವ್ಯಕ್ತಪಡಿಸಲು ಮೆಶಾಲ್‌ನನ್ನು ಭೇಟಿಯಾಗಿದ್ದ. ಖಾಲಿದ್ ಜತೆ ಮತ್ತೊಬ್ಬ ಉನ್ನತ ಎಲ್ಇಟಿ ನಾಯಕ ಫೈಸಲ್ ನದೀಮ್ ಇದ್ದ. ಇವರಿಬ್ಬರನ್ನು 2018 ರಲ್ಲಿ ಯುಎಸ್ ಖಜಾನೆ ಇಲಾಖೆ. ಜಾಗತಿಕ ಭಯೋತ್ಪಾದಕರು ಎಂದು ಕರೆದಿತ್ತು.

2008 ರ ಮುಂಬೈ ದಾಳಿಯ ರೂವಾರಿ ಎಲ್ಇಟಿ ಮತ್ತು ಇಸ್ರೇಲ್‌ನೊಂದಿಗೆ ಸಂಘರ್ಷ ನಡೆಸುತ್ತಿರುವ ಹಮಾಸ್ ಜತೆಗಿನ ಸಂಪರ್ಕವನ್ನು ಹೊಂದಿದೆ. ಭಯೋತ್ಪಾದಕ ಗುಂಪುಗಳ ಈ ಸಂಯೋಜನೆಯು ಉಗ್ರಗಾಮಿ ಮೈತ್ರಿಗಳ ವಿಸ್ತರಿಸುತ್ತಿರುವ ಜಾಲದ ಕಳವಳ ಉಂಟು ಮಾಡಿದೆ. ಅದೇ ರೀತಿ ಅವರ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆಯಾಬಹುದು ಎಂಬ ಊಹೆಗೂ ಕಾರಣವಾಗಿದೆ.

ಸೈಫುಲ್ಲಾ ಖಾಲಿದ್ ಜಮಾತ್-ಉದ್-ದವಾ (ಜೆಯುಡಿ) ಸ್ಥಾಪಕ ಸದಸ್ಯನಾಗಿದ್ದು. ಎಲ್ಇಟಿಯ ರಾಜಕೀಯ ಬಣವಾದ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾನೆ. ಪಾಕಿಸ್ತಾನದಲ್ಲಿಯೇ ಎಂಎಂಎಲ್ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸದಂತೆ ನಿರ್ಬಂಧಿಸಲಾಗಿದೆ. ಏತನ್ಮಧ್ಯೆ ಖಾಲಿದ್‌‌ನ ಇತ್ತೀಚಿನ ಭೇಟಿಗಳು ಎಲ್ಇಟಿಯ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇಂದು ಬಾಂಗ್ಲಾದೇಶದ ಹಿಂದೂ ಉಳಿದರೆ, ನಾಳೆ ಹಿಂದೂ-ಭಾರತ ಉಳಿದೀತು!

ಖಾಲಿದ್ ಮತ್ತು ನದೀಮ್ ರನ್ನು ಯುಎಸ್ ಖಜಾನೆ ಇಲಾಖೆ ಅವರು ಹೊಂದಿರುವ ಭಯೋತ್ಪಾದನೆಯ ಹಿನ್ನೆಲೆಯ ಮೂಲಕ ಗುರುತಿಸಿದೆ. ಪ್ರಾದೇಶಿಕ ಅಸ್ಥಿರತೆಯ ನಡುವೆ ಈ ಎರಡು ಉಗ್ರಗಾಮಿ ಸಂಘಟನೆಗಳ ಒಗ್ಗೂಡುವಿಕೆಯು ಅಪಾಯಕಾರಿ ವಿಸ್ತರಣೆಯನ್ನು ಸೂಚಿಸುತ್ತದೆ. ಅವರ ಚಟುವಟಿಕೆಗಳಲ್ಲಿ ಹೆಚ್ಚಿನ ಸಮನ್ವಯದ ಭಯವನ್ನು ಹುಟ್ಟು ಹಾಕಿದೆ.

Exit mobile version