ತಿರುವನಂತಪುರಂ: ಕಾಂಗ್ರೆಸ್ (congress) ಮತ್ತು ಎಡಪಕ್ಷಗಳು (left parties) ಇತರ ರಾಜ್ಯಗಳಲ್ಲಿ ಬಿಎಫ್‌ಎಫ್ (Best friends forever- ಬೆಸ್ಟ್ ಫ್ರೆಂಡ್ಸ್ ಫಾರೆವರ್- ಶಾಶ್ವತ ಸ್ನೇಹಿತರು) ಆಗಿದ್ದಾರೆ. ಆದರೆ ಕೇರಳದಲ್ಲಿ ಬದ್ಧ ವೈರಿಗಳು (enemies) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ವ್ಯಂಗ್ಯವಾಡಿದ್ದಾರೆ.
ತಿರುವನಂತಪುರದಲ್ಲಿ ಬಿಜೆಪಿ ರಾಜ್ಯ ಘಟಕದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.
“ಕಮ್ಯುನಿಸ್ಟರು ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡುತ್ತಾರೆ. ಕಾಂಗ್ರೆಸ್‌ನ ಹಿಂದಿನ ಆಡಳಿತವು ವಿವಿಧ ಹಗರಣಗಳಲ್ಲಿ ಭಾಗಿಯಾಗಿದೆ ಎಂದು ಬಣ್ಣಿಸುತ್ತಾರೆ. ಆದರೆ, ಕೇರಳದ ಹೊರಗೆ, ಇಂಡಿಯಾ ಮೈತ್ರಿಕೂಟದ ಸಭೆಗಳಲ್ಲಿ, ಅವರು ಒಟ್ಟಿಗೆ ಕುಳಿತು ಸಮೋಸಾ, ಬಿಸ್ಕತ್ತುಗಳನ್ನು ತಿನ್ನುತ್ತಾರೆ ಮತ್ತು ಚಹಾ ಸೇವಿಸುತ್ತಾರೆ” ಎಂದು ಮೋದಿ ಟೀಕಿಸಿದರು.
“ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕೇರಳದಲ್ಲಿ ಪರಸ್ಪರ ಶತ್ರುಗಳು. ಆದರೆ ರಾಜ್ಯದ ಹೊರಗೆ ಅವರು ಬಿಎಫ್‌ಎಫ್ (ಎಂದೆಂದಿಗೂ ಉತ್ತಮ ಸ್ನೇಹಿತರು). ಅವರು ತಿರುವನಂತಪುರದಲ್ಲಿ ಬೇರೆ ಭಾಷೆ ಮತ್ತು ದೆಹಲಿಯಲ್ಲಿ ಪ್ರತ್ಯೇಕ ಭಾಷೆ ಹೊಂದಿದ್ದಾರೆ” ಎಂದು ಮೋದಿ ಹೇಳಿದರು.
“ಕೇರಳದ ಜನರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ದ್ರೋಹಕ್ಕೆ ಉತ್ತರಿಸುತ್ತಾರೆʼʼ ಎಂದು ಹೇಳಿದ ಮೋದಿ, “ಕೇಂದ್ರದ ನೀತಿಯಿಂದ ಕೇರಳಕ್ಕೆ ಲಾಭವಾಗಿದೆ. ಬಿಜೆಪಿಯನ್ನು ಎರಡಂಕಿಯ ಸ್ಥಾನ ನೀಡಿ ಗೆಲ್ಲಿಸಿ” ಎಂದು ಕೇರಳದ ಜನತೆಗೆ ಮನವಿ ಮಾಡಿದರು. 2019ರ ಚುನಾವಣೆಯಲ್ಲಿ ರಾಜ್ಯದ 20 ಲೋಕಸಭಾ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಬಿಜೆಪಿಗೆ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಡು ಪ್ರತಿಸ್ಪರ್ಧಿಗಳಾಗಿವೆ. ಆದರೆ ಇಬ್ಬರೂ ಪಶ್ಚಿಮ ಬಂಗಾಳದಲ್ಲಿ ಮಿತ್ರರಾಗಿದ್ದಾರೆ. ಆಮ್ ಆದ್ಮಿ ಪಾರ್ಟಿ (ಎಎಪಿ) ಯೊಂದಿಗೆ ತನ್ನ ಸೀಟು ಹಂಚಿಕೆ ಒಪ್ಪಂದವನ್ನು ಘೋಷಿಸಿದ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ದೆಹಲಿ, ಗುಜರಾತ್ ಮತ್ತು ಗೋವಾದಲ್ಲಿ ಇಂಡಿಯಾ ಬ್ಲಾಕ್‌ನಲ್ಲಿದ್ದ ಆಂತರಿಕ ವಿರೋಧಾಭಾಸವನ್ನು ಪರಿಹರಿಸಿದೆ.
ಈ ಕಾರ್ಯಕ್ರಮಕ್ಕೂ ಮುನ್ನ ಅವರು ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯ ಗಗನಯಾನಿಗಳ ಹೆಸರನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದ್ದರು.
ಇದನ್ನೂ ಓದಿ: Gaganyaan: ಗಗನಯಾನ ಯಾತ್ರಿಗಳ ಹೆಸರು ರಿವೀಲ್ ಮಾಡಿದ ಮೋದಿ; ಇವರೇ ಸಾರಥಿಗಳು