Site icon Vistara News

ವಿಸ್ತಾರ ಸಂಪಾದಕೀಯ: ದೇಶದ ಮೊದಲ ವಾಟರ್ ಮೆಟ್ರೊಗೆ ಚಾಲನೆ, ಜಲ ಸಾರಿಗೆಯಲ್ಲಿ ಕ್ರಾಂತಿ

Launch of country's first water metro, a revolution in water transport

#image_title

ದೇಶದ ಮೊದಲ ವಾಟರ್ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಕೊಚ್ಚಿಯಲ್ಲಿ ಮಂಗಳವಾರ ಚಾಲನೆ ನೀಡಿದ್ದಾರೆ. ವಾಟರ್ ಮೆಟ್ರೋ ನಗರ ಸಮುದಾಯದ ವಿಶಿಷ್ಟ ಜಲ ಸಾರಿಗೆ ಸಂಪರ್ಕ ವ್ಯವಸ್ಥೆ. ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ದೊರೆಯುವ ಅನುಭವವೇ ಈ ವಾಟರ್ ಮೆಟ್ರೋದಲ್ಲೂ ಸಿಗುತ್ತದೆ. ವಿಶೇಷವಾಗಿ ಸಾಗರ ತೀರ ಹಾಗೂ ವಿಶಾಲ ನದಿ ತೀರದ ನಗರಗಳಿಗೆ ಈ ವಾಟರ್ ಮೆಟ್ರೋ ಹೆಚ್ಚು ಸೂಕ್ತ. ಕೊಚ್ಚಿ ನಗರದ ವ್ಯಾಪ್ತಿಯಲ್ಲಿರುವ 10 ದ್ವೀಪಗಳಿಗೆ ಈ ವಾಟರ್‌ ಮೆಟ್ರೊ ಸಾರಿಗೆ ಸಂಪರ್ಕ ಕಲ್ಪಿಸಲಿದೆ. ಸದ್ಯ 34,000 ಪ್ರಯಾಣಿಕರಿಗೆ ಸೇವೆ ನೀಡುವ ವಾಟರ್‌ ಮೆಟ್ರೊ ಮುಂದಿನ ದಿನಗಳಲ್ಲಿ 1.5 ಲಕ್ಷಕ್ಕೆ ಅದನ್ನು ಏರಿಸಲಿದೆ. ಗ್ರೇಟರ್‌ ಕೊಚ್ಚಿಯ 16 ಜಲ ಮಾರ್ಗಗಳಲ್ಲಿ ಇವುಗಳು ಸಂಚರಿಸಲಿವೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಡ್ರೀಮ್‌ ಪ್ರಾಜೆಕ್ಟ್‌ ಎಂದು ಕರೆದಿದ್ದಾರೆ. ಸರಿಯಾಗಿ ಬಳಸಿಕೊಂಡರೆ, ಅಭಿವೃದ್ಧಿಪಡಿಸಿದರೆ ಭಾರತದ ಸಾರಿಗೆ ವಲಯದಲ್ಲಿ ಈ ಜಲ ಸಾರಿಗೆ ಕ್ರಾಂತಿ ಉಂಟು ಮಾಡಬಹುದು. ಜಗತ್ತಿನ ಹಲವು ಕಡೆ ಸಾಗರ ಹಾಗೂ ನದಿ ತೀರದ ನಗರಗಳಲ್ಲಿ ಜಲ ಮೆಟ್ರೋದಂಥ ಫೆರಿ ವ್ಯವಸ್ಥೆಗಳು ಇವೆ. ಉದಾಹರಣೆಗೆ ನ್ಯೂಯಾರ್ಕ್‌ನಲ್ಲಿ ನಗರದೊಳಗೆ ಜಲ ಸಾರಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕೇರಳವನ್ನು ಬಹುತೇಕ ಸಮುದ್ರ ಹಾಗೂ ನದಿಗಳು ಆವರಿಸಿವೆ. ಇಲ್ಲಿ ಜಲ ಮೆಟ್ರೋಗೆ ಸಾಕಷ್ಟು ಅವಕಾಶವಿದೆ. ದೇಶದ ದೊಡ್ಡ ನಗರಗಳಾದ ಕೋಲ್ಕೊತಾ, ಚೆನ್ನೈ, ಮುಂಬಯಿ ಮುಂತಾದ ಬೃಹತ್‌ ನಗರಗಳು ಕೂಡ ಸಾಗರ ತೀರವನ್ನು ಹೊಂದಿದ್ದು, ಜಲ ಮೆಟ್ರೋ ನಿರ್ಮಾಣಕ್ಕೆ ಅವಕಾಶ ಹೊಂದಿವೆ. ಮುಂಬಯಿ, ಕೋಲ್ಕೊತಾ ಮುಂತಾದ ನಗರಗಳ ವಾಹನ ದಟ್ಟಣೆ ವಿಪರೀತವಾಗಿದ್ದು, ಜಲ ಮೆಟ್ರೋ ಒಂದು ಮಟ್ಟದ ಬಿಡುಗಡೆಯನ್ನು ಇದಕ್ಕೆ ನೀಡಬಹುದು. ಈಗಾಗಲೇ ಮುಂಬಯಿ ಹಾಗೂ ನವಿ ಮುಂಬಯಿಗಳನ್ನು ಸಂಪರ್ಕಿಸುವ ʼವಾಟರ್‌ ಟ್ಯಾಕ್ಸಿʼ ವ್ಯವಸ್ಥೆ 2022ರ ಫೆಬ್ರವರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಮೆಟ್ರೋ ಇದಕ್ಕಿಂತ ದೊಡ್ಡ ಹಾಗೂ ನಿಗದಿತವಾಗಿ ಓಡಾಡುವ ವ್ಯವಸ್ಥೆಯಾಗಿದೆ.

ಕರ್ನಾಟಕದಲ್ಲೂ ಹಲವಾರು ವಿಶಾಲ ನದಿಗಳಿವೆ. ಮುಂದಿನ ದಿನಗಳಲ್ಲಿ ಇಲ್ಲೂ ಈ ಸೌಲಭ್ಯ ಬರುವ ಕಾಲ ದೂರವಿಲ್ಲ. ಸಾರಿಗೆ ಸಂಪರ್ಕ ಮಾತ್ರವಲ್ಲ, ಪ್ರವಾಸೋದ್ಯಮ ಅಭಿವೃದ್ಧಿಗೂ ಈ ವಾಟರ್ ಮೆಟ್ರೊ ಮಹತ್ವದ ಕೊಡುಗೆ ನೀಡಲಿದೆ. ಇದಕ್ಕೆ ಉದಾಹರಣೆ ಎಂದರೆ ಇಟಲಿಯ ವೆನಿಸ್‌ ನಗರದ ವಾಟರ್‌ ಟ್ಯಾಕ್ಸಿ ವ್ಯವಸ್ಥೆ. ಇಲ್ಲಿ ನಗರದ ನಡುವೆ ಹಬ್ಬಿ ಹರಡಿರುವ ನೂರಾರು ಜಲಮಾರ್ಗಗಳಲ್ಲಿ ಓಡಾಡುವ ವಾಟರ್‌ ಟ್ಯಾಕ್ಸಿಗಳೇ ಇಲ್ಲಿನ ಪ್ರವಾಸಿ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ಅಂಥವುಗಳನ್ನು ನಮ್ಮ ಮಂಗಳೂರು, ಕಾರವಾರ ಮುಂತಾದ ಕಡೆ ತಂದರೆ ಜಲಸಾರಿಗೆಯ ಜತೆಗೆ ಪ್ರವಾಸೀ ಆಕರ್ಷಣೆಗಳಾಗುತ್ತದೆ. ಉತ್ತರ ಕನ್ನಡದ ಹಲವು ನಡುಗಡ್ಡೆಗಳ ನಿವಾಸಿಗಳು ಈ ಜಲ ಮೆಟ್ರೋದ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾದರೆ ಸಾಲದು, ಶಿಕ್ಷೆಯೂ ಆಗಲಿ

ಇತ್ತೀಚಿನ ದಿನಗಳಲ್ಲಿ ರೈಲು ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಾಗಿವೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಜನಸಾಮಾನ್ಯರ ಸಂಚಾರವನ್ನು ಸುಗಮಗೊಳಿಸಿದೆ. ಹೊಸ ಹೊಸ ಮೆಟ್ರೋ ಲೈನ್‌ಗಳು ಸಿದ್ಧಗೊಳ್ಳುತ್ತಿವೆ. ನಗರ ಪ್ರಯಾಣವನ್ನು ಅವಶ್ಯಕ ಸಂಗತಿ ಎಂಬುದರ ಜತೆಗೆ ಆನಂದದ ಅನುಭವವಾಗಿಯೂ ಮಾಡುವ ಕಡೆಗೆ ಚಿಂತನೆ ನಡೆದಿದೆ. ಇದನ್ನು ʼವಂದೇ ಭಾರತ್ʼ ರೈಲುಗಳು ಕೂಡ ಸಾಧ್ಯವಾಗಿಸಿದ್ದು, ಅದ್ಭುತ ಎನ್ನುವಂಥ ಸಂಚಲನ ಮೂಡಿಸಿವೆ. ದೇಶವೊಂದರ ಸಾರಿಗೆ ಎಷ್ಟು ಸಮರ್ಪಕವಾಗಿ, ಕ್ಷಿಪ್ರವಾಗಿ, ಆನಂದದಾಯಕವಾಗಿ ಇರುತ್ತದೆ ಎಂಬುದರ ಮೇಲೆ ಅಲ್ಲಿನ ಜನಜೀವನ- ಉದ್ಯೋಗ ಸ್ಥಿತಿಗತಿಗಳು ಕೂಡ ನಿರ್ಧಾರವಾಗುತ್ತವೆ. ಆಧುನಿಕ ಸನ್ನಿವೇಶದಲ್ಲಿ ಪ್ರಯಾಣದ ಸಮಯ ಉಳಿಯುವುದೆಂದರೆ ಗಳಿಕೆಯ ಸಮಯ ಹೆಚ್ಚುವುದೆಂದರ್ಥ.

Exit mobile version