Site icon Vistara News

ವಿಸ್ತಾರ ಸಂಪಾದಕೀಯ: ಚಿರತೆಗಳ ನರಬಲಿ ಕಳವಳಕಾರಿ

ಚಿರತೆ ನರಬಲಿ

ರಾಜ್ಯದ ನಾನಾ ಭಾಗಗಳಲ್ಲಿ ಚಿರತೆ- ಮಾನವ ಸಂಘರ್ಷ ಕಳವಳಕಾರಿ ಮಟ್ಟವನ್ನು ಮುಟ್ಟಿದೆ. ಇದುವರೆಗೆ ಕಾಡಿನಂಚಿನ ಹಳ್ಳಿಗಳಲ್ಲಿ ಕಾಣಿಸಿಕೊಂಡು ಹಸು- ನಾಯಿ ಮುಂತಾದ ಸಾಕುಪ್ರಾಣಿಗಳನ್ನು ಬೇಟೆಯಾಡಿ ಹೋಗುತ್ತಿದ್ದ ಚಿರತೆಗಳು ಮನುಷ್ಯ ಬಲಿ ಪಡೆಯಲಾರಂಭಿಸಿವೆ. ಮನುಷ್ಯರ ಮೇಲೆ ದಾಳಿ ಮಾಡುವಿಕೆಯನ್ನು ರೂಢಿಸಿಕೊಂಡ ಚಿರತೆಗಳು ಮೊದಲು ಕಾಡಿನಂಚಿನ ನಿರ್ಜನ ದಾರಿಯಲ್ಲೋ, ಹೊಲ ಗದ್ದೆಗಳಲ್ಲೋ ಮುಗಿಬೀಳುತ್ತಿದ್ದವು. ಈಗ ಮನೆ ಬಾಗಿಲಿಗೇ ಬಂದು ಪ್ರಾಣ ತೆಗೆಯಲು ತೊಡಗಿವೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಸಂಜೆ ಹೊತ್ತು ಮನೆ ಮುಂದೆ ಕುಳಿತಿದ್ದ ಯುವತಿಯ ಮೇಲೆ ದಾಳಿ ಮಾಡಿದ ಚಿರತೆ ಆಕೆಯನ್ನು ಸಾಯಿಸಿದೆ. ಇದು ಕೆಲವೇ ವಾರಗಳಲ್ಲಿ ನಡೆದ ಎರಡನೇ ನರಬಲಿ. ಅಕ್ಟೋಬರ್‌ 31ರಂದು ದೇವಸ್ಥಾನಕ್ಕೆ ಹೋಗಿದ್ದ ಯುವಕನೊಬ್ಬನನ್ನು ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಚಿರತೆ ಸಾಯಿಸಿತ್ತು. ಈ ಪ್ರದೇಶದಲ್ಲಿ ಮಕ್ಕಳು ಶಾಲೆಗೆ ಹೋಗಲು ಅಂಜುತ್ತಿದ್ದಾರೆ. ಚಿರತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಚಿರತೆಯನ್ನು ಕಂಡಲ್ಲಿ ಗುಂಡು ಹಾರಿಸಲು ಆಜ್ಞೆ ಮಾಡಲಾಗಿದೆ. ಬೆಂಗಳೂರು, ಮೈಸೂರಿನಂಥ ನಗರಗಳ ಬಡಾವಣೆಗಳಲ್ಲೂ ಚಿರತೆಗಳು ಕಾಣಿಸಿಕೊಂಡಿವೆ, ಮನುಷ್ಯರ ಮೇಲೆ ದಾಳಿ ಎಸಗಿವೆ. ಇದು ಆತಂಕಕರ.

ಚಿರತೆ ದಾಳಿಯಿಂದ ಮೃತಪಟ್ಟ ಯುವತಿಯ ಕುಟುಂಬಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು 7.5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದು ಅಗತ್ಯವೇನೋ ಸರಿ, ಆದರೆ ಮುಂದೆಂದೂ ಇಂಥ ನರಬಲಿ ಆಗದಂತೆ ನೋಡಿಕೊಳ್ಳಬೇಕಾದದ್ದು ಅಗತ್ಯ. ಈ ಪ್ರದೇಶದ ಚಿರತೆಗಳು ಯಾಕೆ ಊರಿಗೆ ಬರುತ್ತಿವೆ ಎಂಬುದರ ಅಧ್ಯಯನವಾಗಬೇಕು. ಚಿರತೆಗಳ ಬೇಟೆ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿರುವುದು, ಚಿರತೆಗಳ ಸಂಖ್ಯೆ ಹೆಚ್ಚಾಗಿರುವುದು, ಅವುಗಳ ವ್ಯಾಪ್ತಿಪ್ರದೇಶವನ್ನು ಮನುಷ್ಯರು ಆಕ್ರಮಿಸಿಕೊಂಡಿರುವುದು, ಇವೆಲ್ಲವೂ ಇದಕ್ಕೆ ಕಾರಣ. ಚಿರತೆಗಳ ಸಂಖ್ಯೆ ಹೆಚ್ಚಿರುವುದಂತೂ ನಿಜ. ಕೇಂದ್ರ ಪರಿಸರ ಸಚಿವಾಲಯ ನೀಡಿರುವ ಅಂಕಿ ಅಂಶದ ಪ್ರಕಾರವೇ 2014- 2018ರ ಅವಧಿಯಲ್ಲಿ, ಅಂದರೆ ನಾಲ್ಕು ವರ್ಷಗಳಲ್ಲಿ ಚಿರತೆಗಳ ಸಂಖ್ಯೆ 63% ಹೆಚ್ಚಿದೆ. 7900ರಿಂದ 12,800ಕ್ಕೆ ಏರಿದೆ. ಇತ್ತೀಚಿನ ಅಂಕಿಗಳು ದೊರೆತಿಲ್ಲವಾದರೂ, ಈಗ ಇನ್ನೂ ಹೆಚ್ಚಾಗಿರಬಹುದು. ಆದರೆ, ಅವುಗಳು ಬದುಕಬೇಕಾದ ಕಾಡಿನ ಪ್ರದೇಶ ಹೆಚ್ಚುತ್ತಿಲ್ಲ. ಬದಲಾಗಿ ಕಡಿಮೆಯಾಗುತ್ತಿದೆ.

ಚಿರತೆಗಳು ಮಾನವಸ್ನೇಹಿ ಪ್ರಾಣಿಗಳಲ್ಲ. ಇವು ಅತ್ಯಂತ ಸಂಕೋಚದ, ಮನುಷ್ಯನನ್ನು ದೂರದಿಂದ ಕಂಡ ತಕ್ಷಣ ಪರಾರಿಯಾಗುವ ಸ್ವಭಾವದವು. ಕೆಲವು ಚಿರತೆಗಳು ನರಭಕ್ಷಕಗಳಾದ ಇತಿಹಾಸವಿದೆ. ಗಾಯಗೊಂಡು ಪ್ರಾಣಿಗಳನ್ನು ಬೇಟೆಯಾಡಲಾಗದ, ಮುದಿಪ್ರಾಯದ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡಿ, ನರಬೇಟೆ ಸುಲಭವೆಂದು ತಿಳಿದರೆ ಆ ಬಳಿಕ ಮನುಷ್ಯನನ್ನೇ ತನ್ನ ಮುಖ್ಯ ಆಹಾರವಾಗಿಸಿಕೊಂಡ ನಿದರ್ಶನಗಳು ಬಹಳವಿವೆ. ಹೀಗೆ ನೂರಾರು ಜನರನ್ನು ಕೊಂದ ಚಿರತೆಗಳು, ಇವುಗಳನ್ನು ಕೊಂದು ಜನರನ್ನು ಭಯಮುಕ್ತಗೊಳಿಸಿದ ಜಿಮ್‌ ಕಾರ್ಬೆಟ್‌, ಕೆನೆತ್‌ ಆಂಡರ್‌ಸನ್‌ ಮುಂತಾದ ಬೇಟೆಗಾರರ ಇತಿಹಾಸವೂ ದಾಖಲಾಗಿದೆ. ನಮ್ಮ ಕಾಲಕ್ಕೆ ಇವೆಲ್ಲ ರೋಚಕ ಇತಿಹಾಸವಾಗಿಯಷ್ಟೇ ಉಳಿಯುತ್ತದೆ ಎಂದುಕೊಂಡರೆ, ಭಯಾನಕ ವಾಸ್ತವವಾಗಿ ಮರಳಿ ಬಂದಿದೆ. ಚಿರತೆಗಳು ನರಭಕ್ಷಕಗಳಾಗಿಬಿಟ್ಟರೆ, ಅತ್ಯಂತ ಮಾರಕ ಕೊಲೆಗಡುಕರಾಗಿಬಿಡುತ್ತವೆ. ಎಂಥ ಪುಟ್ಟ ಜಾಗದಲ್ಲೂ ಅಡಗಿ ಕುಳಿತುಕೊಳ್ಳಬಹುದಾದ ಇವು ಹೊಂಚು ಹಾಕಿ ಬೇಟೆಯಾಡುವುದರಲ್ಲಿ, ಮನುಷ್ಯರ ಕಣ್ಣಿಗೇ ಬೀಳದಂತೆ ಮರೆಯಾಗುವುದರಲ್ಲಿ ನಿಸ್ಸೀಮ. ಇವುಗಳನ್ನು ಹಿಡಿಯುವುದು ಸುಲಭವಲ್ಲ. ಹೀಗಾಗಿ ಕಿರಾತಕ ಚಿರತೆಗಳು ಮನುಷ್ಯಸಮಾಜಕ್ಕೆ ಮಾರಕ.

ಊರಿಗೆ ಬಂದ ಚಿರತೆಗಳನ್ನು ಜನಸಂದಣಿ ಸುತ್ತುಗಟ್ಟಿದಾಗ ಉಂಟಾಗುವ ಗಾಬರಿಯಿಂದಲೂ ಅವು ಮನುಷ್ಯರ ಮೇಲೆ ಹಲ್ಲೆ ಮಾಡುತ್ತವೆ. ಇದಕ್ಕೆ ಮನುಷ್ಯರೇ ಸಂಪೂರ್ಣ ಕಾರಣ. ಆದರೆ ನಿರುದ್ದಿಶ್ಯವಾಗಿ, ಆಹಾರದ ಉದ್ದೇಶದಿಂದಲೇ ಮನುಷ್ಯರ ಮೇಲೆ ಎರಗುವ ಚಿರತೆಗಳನ್ನು ನಿವಾರಿಸಿಕೊಳ್ಳಬೇಕು; ಈ ವಿಷಯದಲ್ಲಿ ಅರಣ್ಯ ಇಲಾಖೆ ರಾಜಿಯಾಗುವಂತಿಲ್ಲ. ನರಭಕ್ಷಕ ಚಿರತೆಗಳನ್ನು ಕೊಲ್ಲಲು ಈ ಹಿಂದಿನ ಸರ್ಕಾರಗಳು ಆಜ್ಞೆ ಮಾಡಿವೆ. ಇದು ಒಂದು ಪರಿಹಾರ. ಆದರೆ ನರಭಕ್ಷಕವೆಂದು ಭಾವಿಸಿ ಬೇರೆ ಅಮಾಯಕ ಚಿರತೆಗಳ ಬಲಿಯಾಗದಂತೆ ನೋಡಿಕೊಳ್ಳಬೇಕಾದ್ದೂ ಮುಖ್ಯ. ಜಗತ್ತಿನ, ದೇಶದ ಇತರೆಡೆ ಮಾನವ- ವನ್ಯಜೀವಿ ಸಂಘರ್ಷ ಹಲವು ನೆಲೆಗಳಲ್ಲಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಏನೇನು ಯಶಸ್ವಿ ಕ್ರಮಗಳಾಗಿವೆ ಅವಲೋಕಿಸಬೇಕು. ಚಿರತೆಗಳು ಕಾಡು ದಾಟಿ ಬರದಿರುವಂತೆ ಮಾಡಲು ಸರ್ಕಾರ ದೂರಗಾಮಿ ಯೋಜನೆ ರೂಪಿಸಬೇಕು. ಇದರಲ್ಲಿ ವನ್ಯಜೀವಿ ತಜ್ಞರನ್ನು ಒಳಗೊಳಿಸಬೇಕು. ಚಿರತೆ ಹಿಡಿಯುವ ಆಪರೇಷನ್ ಮತ್ತಷ್ಟು ಆಧುನೀಕರಣಗೊಳ್ಳಬೇಕು. ಚಿರತೆಯ ಬಲಿಪ್ರಾಣಿಗಳನ್ನು ಮನುಷ್ಯರು ಬೇಟೆಯಾಡಿ ನಾಶಮಾಡುವುದನ್ನು ನಿಷೇಧಿಸಬೇಕು. ಚಿರತೆ ದಾಳಿಗೆ ಪದೇ ಪದೆ ಒಳಗಾಗುತ್ತಿರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ತುಸು ಬಿಗಿ ಕಡಿಮೆ ಮಾಡಿ, ಸ್ವರಕ್ಷಣೆಗೆ ಜನತೆಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯ ಕೊಡಬೇಕು. ಕಾಡು ಪ್ರಾಣಿಗಳ ರಕ್ಷಣೆಯಾಗಬೇಕೇನೋ ನಿಜ, ಆದರೆ ಅದಕ್ಕಾಗಿ ಕಠಿಣ ಕಾಯಿದೆಯ ನೆಪದಲ್ಲಿ ನಾಡಿನ ಜನ ಜೀವ ತೆರುವಂತಾಗಬಾರದು. ಹಳ್ಳಗಳಿಗೆ ಬಂದ ಚಿರತೆಗಳನ್ನು ಹಿಡಿಯುವ ಕಾರ್ಯಾಚರಣೆ ಮಾಡಿ ಕಾಡಿಗೆ ಬಿಡುವಾಗ, ಅಲ್ಲಿ ಅದಕ್ಕೆ ಬದುಕುವ ಅವಕಾಶಗಳಿವೆಯೇ ಎಂಬುದನ್ನು ಖಚಿಪಡಿಸಿಕೊಳ್ಳಬೇಕು.

Exit mobile version