ಆರ್ಥಿಕವಾಗಿ ಹಿಂದುಳಿದ ವರ್ಗ(EWS)ದ ಶೇ.10 ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ, ಮೀಸಲಾತಿ ಸಂಬಂಧ ಉದ್ಭವಿಸಿದ್ದ ಎಲ್ಲ ಅನುಮಾನಗಳನ್ನು ಬಗೆಹರಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು 2019ರಲ್ಲಿ ಜಾರಿಗೆ ತಂದ ಈ ಹೊಸ ನಮೂನೆಯ ಮೀಸಲಾತಿಯ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಈ ಮೀಸಲಾತಿಯ ವರ್ಗಾವಣೆಯಾಯಿತು. ದೇಶದ ಸರ್ವೋಚ್ಚ ನ್ಯಾಯಾಲಯವು, ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವನ್ನು ರಚಿಸಿತು ಮತ್ತು ಈ ಸಂಬಂಧ ದಾಖಲಾದ ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ಸತತ ವಿಚಾರಣೆ ಕೈಗೊಂಡಿತು. ಈ ಬಗ್ಗೆ ಸೋಮವಾರ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ (ಮೀಸಲು ಪರ ಮೂವರು ನ್ಯಾಯಮೂರ್ತಿಗಳು, ಮೀಸಲು ವಿರುದ್ಧ ಇಬ್ಬರು ನ್ಯಾಯಮೂರ್ತಿಗಳು) ಶೇ.10 ಇಡಬ್ಲ್ಯೂಎಸ್ ಮೀಸಲಾತಿಯು ಸಂವಿಧಾನಬದ್ಧವಾಗಿದೆ ಎಂದು ಹೇಳಿದೆ. ಭಾರತೀಯ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ತೀರ್ಪಾಗಿದೆ. ಮೀಸಲಾತಿಯ ಬದಲಾದ ಪರಿಭಾಷೆ ಮತ್ತು ವ್ಯಾಖ್ಯಾನಕ್ಕೆ ಈ ತೀರ್ಪು ರೆಫರೆನ್ಸ್ ಪಾಯಿಂಟ್ ಆಗಬಹುದಾಗಿದೆ.
ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ, ದೌರ್ಜನ್ಯವನ್ನು ಸಹಿಸಿಕೊಂಡು ಬಂದಿದ್ದ, ಹಕ್ಕುಗಳು ಇಲ್ಲದೇ ಬದುಕುತ್ತಿದ್ದ ಶೋಷಿತರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವುದಕ್ಕಾಗಿ, ‘ಸಾಮಾಜಿಕ ನ್ಯಾಯ’ ಹಾಗೂ ‘ಸಮಾನತೆ’ಯನ್ನು ಸಾಧಿಸುವುದಕ್ಕಾಗಿ ನಮ್ಮ ಸಂವಿಧಾನ ನಿರ್ಮಾತೃರು ಮೀಸಲು ವ್ಯವಸ್ಥೆಯನ್ನು ಜಾರಿಗೆ ತಂದರು. ಇದೊಂದು ಉದಾತ್ತ ಕಲ್ಪನೆಯಾಗಿದೆ.
ಆದರೆ ಯಾವ ಸಮಾನತೆಯ ಸಾಕಾರಕ್ಕೆ, ಅವಕಾಶಗಳ ಸೃಷ್ಟಿಗೆ ಮೀಸಲಾತಿಯನ್ನು ಜಾರಿಗೆ ತರಲಾಯಿತೋ ಅದೇ ಮೀಸಲಾತಿ ಮತ್ತೊಂದು ರೂಪದಲ್ಲಿ ಸಣ್ಣ ಪ್ರಮಾಣದಲ್ಲಾದರೂ ಅಸಮಾನತೆಯನ್ನು ಪೋಷಿಸಿತು, ಅವಕಾಶಗಳನ್ನು ಕಿತ್ತುಕೊಂಡಿತು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಈ ಹೊಸ ನಮೂನೆಯ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಆರ್ಥಿಕ ನೆಲೆಯಲ್ಲಿ ಮೀಸಲಾತಿಯನ್ನು ಒದಗಿಸುವ ಹೊಸ ಅವಕಾಶವನ್ನು ಈ ಇಡಬ್ಲ್ಯೂಎಸ್ ಮೂಲಕ ಸೃಷ್ಟಿಸಿಕೊಂಡಿತು ಎಂದು ವ್ಯಾಖ್ಯಾನಿಸಬಹುದು.
ಎಸ್‌ಸಿ, ಎಸ್‌ಟಿ, ಮತ್ತು ಒಬಿಸಿ ಸೇರಿದಂತೆ ಯಾವುದೇ ರೀತಿಯ ಮೀಸಲಾತಿಗೆ ಅರ್ಹರಾಗದ ಸಮುದಾಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗಾಗಿಯೇ ಶೇ.10 ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಅರ್ಥಾತ್, ಮೇಲ್ವರ್ಗಗಳಲ್ಲಿನ ಬಡ ಜನರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿನ ಮೀಸಲಾತಿಯನ್ನು ಕಲ್ಪಿಸಲಾಯಿತು. ಆ ಮೂಲಕ, ಸ್ವಾತಂತ್ರ್ಯ ದೊರೆತ 75 ವರ್ಷಗಳಿಂದ ಇದ್ದ ಆರ್ಥಿಕ ಆಧಾರಿತ ಮೀಸಲಾತಿಯ ಬೇಡಿಕೆಗೆ ಮನ್ನಣೆ ನೀಡಲಾಯಿತು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಶೇ. 4.6 ಬ್ರಾಹ್ಮಣರು, ಶೇ.5.8 ಬನಿಯಾ, ಶೇ.2.2 ಕಾಯಸ್ತ ಮತ್ತು ಶೇ.9.7ರಷ್ಟು ಇತರ ಮೇಲ್ವರ್ಗದ ಸಮುದಾಯದಲ್ಲಿ ಬಡವರಿದ್ದಾರೆ. ಇಲ್ಲಿ ಹೇಳಲಾದ ಜಾತಿಗಳ ಹೊರತಾಗಿ, ಯಾವುದೇ ಮೀಸಲಾತಿಗೂ ಅನ್ವಯವಾಗದ ಬೇರೆ ಬೇರೆ ಸಮುದಾಯದವರು ಬೇರೆ ಬೇರೆ ರಾಜ್ಯಗಳಲ್ಲಿದ್ದಾರೆ. ಅವರಿಗೆಲ್ಲರಿಗೂ ಈ ಮೀಸಲಾತಿಯ ಲಾಭ ದೊರೆಯಲಿದೆ.
ಮೇಲ್ವರ್ಗದ ಬಡವರಿಗಾಗಿ ಮೀಸಲಾತಿಯನ್ನು ರಾಜಕೀಯ ಕಾರಣಕ್ಕಾಗಿಯೇ ಬಿಜೆಪಿ ಜಾರಿಗೆ ತಂದಿದೆ ಎಂದು ಆರೋಪಿಸಿದರೂ, ಅದರ ಹಿಂದಿರುವ ಜನೋಪಕಾರಿ ಚಿಂತನೆಯನ್ನು ಅಲ್ಲಗಳೆಯುವಂತಿಲ್ಲ. ಸುಪ್ರೀಂ ಕೋರ್ಟ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಮೀಸಲಾತಿಯ ಸಿಂಧುತ್ವವನ್ನು ಎತ್ತಿ ಹಿಡಿದ ಜಸ್ಟೀಸ್ ದಿನೇಶ್ ಮಹೇಶ್ವರಿ ಅವರು, ಈ ಮೀಸಲಾತಿಯು ಸಂಪೂರ್ಣವಾಗಿ ಹೊಸ ಅರ್ಹತೆಯ ನಿರ್ಧಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನದ ಮೂಲ ತತ್ವಗಳಿಗೆ ಈ ಮೀಸಲಾತಿಯಿಂದ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಹಾಗಾಗಿ ಈ ಮೀಸಲಾತಿಯು ವೈಜ್ಞಾನಿಕ ಚಿಂತನೆಯ ಫಲವಾಗಿದೆ ಎಂಬುದು ದೃಢವಾಗುತ್ತದೆ. ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳ ಮಧ್ಯೆ ಭಿನ್ನಾಭಿಪ್ರಾಯವಿದ್ದರೂ, ಬಹುಮತದ ತೀರ್ಪಿನ ಆಧಾರದಲ್ಲಿ ಮಾನ್ಯತೆ ದೊರೆತಿದೆ. ಹಾಗಾಗಿ, ಯಾವುದೇ ಆತಂಕವಿಲ್ಲದೇ ಈಗ ಮೀಸಲಾತಿ ಜಾರಿ ಮಾಡಬಹುದು. ಎಷ್ಟೆಲ್ಲ ಭಿನ್ನಾಭಿಪ್ರಾಯಗಳಿದ್ದರೂ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಗೌರವಿಸುವ ಪರಂಪರೆ ನಮ್ಮಲ್ಲಿದೆ ಮತ್ತು ಅದು ನಮ್ಮ ದೇಶದ ಹೆಗ್ಗಳಿಕೆ, ನಮ್ಮ ಶಕ್ತಿಯೂ ಹೌದು. ಹಾಗಾಗಿ, ಈಗ ನಾವೆಲ್ಲ ಸಾಮಾಜಿಕವಾಗಿ ಹಿಂದುಳಿದವರು ಮತ್ತು ಆರ್ಥಿಕವಾಗಿ ಬಲಹೀನವಾಗಿರುವ ಜನರನ್ನು ಮುಖ್ಯವಾಹಿನಿಗೆ ಕರೆ ತರುವ ಕೆಲಸ ಮಾಡಬೇಕಿದೆ. ಈ ದಾರಿಯಲ್ಲಿ ಸರ್ಕಾರ ಯಾವುದೇ ಲೋಪವಿಲ್ಲದೇ ಸಾಗಬೇಕು. ಹೊಸ ಮೀಸಲಾತಿ ವ್ಯವಸ್ಥೆ ಅರ್ಹ ಜನರಿಗೆ ಯಾವುದೇ ವಿಳಂಬವಿಲ್ಲದೆ ತಲುಪುವಂತಾಗಬೇಕು.
ಇದನ್ನೂ ಓದಿ | EWS Reservation | 10% ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯದ ಸಂಕೇತ, ಬಿ.ಎಲ್. ಸಂತೋಷ್ ಸಂತಸ