ಒಂಬತ್ತು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮುಂಬರುವ ತಿಂಗಳಾಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಎಕ್ಸ್‌ಪ್ರೆಸ್‌ವೇ ವೈಮಾನಿಕ ಸಮೀಕ್ಷೆ ನಡೆಸಿ, ನಿರ್ಮಾಣಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಉಭಯ ನಗರಗಳ ಮಧ್ಯೆ ಸದ್ಯ ಪ್ರಯಾಣದ ಅವಧಿ 3 ಗಂಟೆ ಇದ್ದು, ಎಕ್ಸ್‌ಪ್ರೆಸ್‌ವೇಯಿಂದ ಅದು 1 ಗಂಟೆ 20 ನಿಮಿಷಕ್ಕೆ ಇಳಿಕೆಯಾಗಲಿದೆ. ಇದು ಕರ್ನಾಟಕದ ಬೆಳವಣಿಗೆಯ ಎಂಜಿನ್ ಆಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಸ್ಥಳೀಯರಿಗೆ ಮಾತ್ರ ಈ ಎಕ್ಸ್‌ಪ್ರೆಸ್‌ವೇ ಲಾಭ ಸಿಗುವಂತೆ ಕಾಣುತ್ತಿಲ್ಲ. ಸ್ಥಳೀಯರ ಸಾರಿಗೆಯ ಆದ್ಯತೆಗಳಾದ ದ್ವಿಚಕ್ರ, ತ್ರಿಚಕ್ರವಾಹನ ಮತ್ತು ಕೃಷಿಕರ ಟ್ರಾಕ್ಟರ್‌ಗಳಿಗೆ ಈ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶವೇ ಇಲ್ಲ. ಈ ಸಂಬಂಧ ಮೈಸೂರು-ಕೊಡಗು ಸಂಸದರು ನೀಡಿರುವ ಹೇಳಿಕೆಯು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಾತ್ರವಲ್ಲ, ಭಾರತದಲ್ಲಿ ನಿರ್ಮಾಣವಾಗುವ ಯಾವುದೇ ಎಕ್ಸ್‌ಪ್ರೆಸ್‌ವೇಗಳಲ್ಲಿ ಬೈಕುಗಳು, ಆಟೋಗಳು ಮತ್ತು ಟ್ರಾಕ್ಟರ್‌ಗಳ ಸಂಚಾರಕ್ಕೆ ಅವಕಾಶವೇ ಇಲ್ಲ. ಈ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟ ನಿಯಮನ್ನು ಹೊಂದಿದೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳ ಗರಿಷ್ಠ ವೇಗದಲ್ಲಿ ಸಂಚರಿಸುವುದರಿಂದ, ಅಪಘಾತಗಳನ್ನು ತಪ್ಪಿಸುವುದಕ್ಕಾಗಿ ಬೈಕ್, ಆಟೋ ಸಂಚಾರವನ್ನು ನಿಷೇಧಿಸಲಾಗಿದೆ. ಇದು ಸೂಕ್ತ ನಿರ್ಧಾರ. ಇದಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ, ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತವಾಗುವ ಹೊತ್ತಿಗೆ, ಹಳ್ಳಿಗಳನ್ನು ಸಂಪರ್ಕಿಸುವ ಸರ್ವಿಸ್ ರಸ್ತೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಬೇಕು. ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಆಗ ಸ್ಥಳೀಯರ ಸಂಚಾರಕ್ಕೆ ಯಾವುದೇ ವ್ಯತ್ಯಯವಾಗುವುದಿಲ್ಲ. ಈಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಸಿದ್ಧವಾಗಿದ್ದರೆ, ಹೆದ್ದಾರಿಗುಂಟ ಬಹಳಷ್ಟು ಸರ್ವಿಸ್ ರಸ್ತೆಗಳನ್ನು ಇನ್ನೂ ನಿರ್ಮಾಣವೇ ಮಾಡಿಲ್ಲ. ಹೀಗಿರುವಾಗ ಸ್ಥಳೀಯರ ಬೈಕ್, ಆಟೋ, ಟ್ರಾಕ್ಟರ್‌ಗಳ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ನಿಷೇಧ ಹೇರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ದೇಶದ ಅಭಿವೃದ್ಧಿಯಲ್ಲಿ ಸುಸಜ್ಜಿತ ರಸ್ತೆಗಳು, ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತ್ವರಿತ ಸಂಪರ್ಕ ದೊರೆತರೆ, ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಇಂಬು ದೊರೆಯುತ್ತದೆ. ಉದ್ಯೋಗ ಸೃಷ್ಟಿಯಾಗುತ್ತವೆ. ರಸ್ತೆಗಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಪಡೆದುಕೊಳ್ಳುವುದು ಉತ್ತಮವೇ. ಆದರೆ, ಅದೇ ವೇಳೆ ಸ್ಥಳೀಯರ ಹಿತಾಸಕ್ತಿಯನ್ನು ಕಾಪಾಡುವುದು ಅತ್ಯಗತ್ಯ. ಈ ಎಕ್ಸ್‌ಪ್ರೆಸ್‌ವೇಗಳು ದಾರಿಯುದ್ದಕ್ಕೂ ನೂರಾರು ಹಳ್ಳಿಗಳನ್ನು ಸಂಪರ್ಕಿಸಿಕೊಂಡೇ ಗಮ್ಯವನ್ನು ತಲುಪುತ್ತವೆ. ಅದಕ್ಕಾಗಿ, ಸ್ಥಳೀಯರು ತಮ್ಮ ಜಮೀನು, ಮನೆ, ಆಸ್ತಿಪಾಸ್ತಿಗಳನ್ನು ತ್ಯಾಗ ಮಾಡಿರುತ್ತಾರೆ. ಹೀಗಿರುವಾಗ, ಅವರಿಗೆ ಆ ಹೆದ್ದಾರಿಯಲ್ಲಿಸಂಚರಿಸಲು ಅವಕಾಶವಿಲ್ಲ ಅಥವಾ ಅವರಿಗಾಗಿ ಸರ್ವಿಸ್ ರಸ್ತೆಗಳನ್ನು ಸಮರ್ಪಕವಾಗಿ, ಸಕಾಲಕ್ಕೆ ನಿರ್ಮಾಣ ಮಾಡುವುದಿಲ್ಲ ಎಂದಾದರೆ, ಎಕ್ಸ್‌ಪ್ರೆಸ್‌ವೇಗಳಿಗೆ ಅರ್ಥವೇ ಇರುವುದಿಲ್ಲ.
ಯಾವುದೇ ಅಭಿವೃದ್ಧಿ ಕಾರ್ಯವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳಬಾರದು. ಹಾಗೊಂದು ವೇಳೆ, ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟರೆ, ಸಣ್ಣ ಸಣ್ಣ ಸಮಸ್ಯೆಗಳೇ ಮುಂದೆ ದೊಡ್ಡದಾಗುತ್ತವೆ. ಬಹುಶಃ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲೂ ಈ ಸಮಸ್ಯೆ ಕಾಡಿದಂತಿದೆ. ಯಾಕೆಂದರೆ, ಎಕ್ಸ್‌ಪ್ರೆಸ್‌ವೇ ನಿರ್ಮಾಣ ಆರಂಭದಿಂದ ಅವೈಜ್ಞಾನಿಕ ಸರ್ವಿಸ್ ರಸ್ತೆಗಳ ವಿನ್ಯಾಸ, ಮೇಲ್ಸೇತುವೆಗಳು, ಅಂಡರ್‌ಪಾಸ್, ನೀರು ಸರಾಗವಾಗಿ ಹೋಗದಿರುವ ವ್ಯವಸ್ಥೆ ಸೇರಿ ಇತ್ಯಾದಿ ಲೋಪಗಳ ಕುರಿತು, ಹೆದ್ದಾರಿ ವ್ಯಾಪ್ತಿಯ ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದೂ, ಆ ಸಮಸ್ಯೆಗಳನ್ನು ಈವರೆಗೂ ನೀಗಿಸುವ ಗಂಭೀರ ಪ್ರಯತ್ನ ಮಾಡಿಲ್ಲ.
ಎಕ್ಸ್‌ಪ್ರೆಸ್‌ವೇಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನವೇ ಸಂಪೂರ್ಣ, ವೈಜ್ಞಾನಿಕ ಮತ್ತು ಸಮರ್ಪಕ ಸರ್ವಿಸ್ ರಸ್ತೆಗಳನ್ನು ನಿರ್ಮಿಸಬೇಕು. ಅದಾಗುವುದಿಲ್ಲ. ಅದಕ್ಕಿಂತ ಮುಂಚೆಯೇ ಎಕ್ಸ್‌ಪ್ರೆಸ್‌ವೇಯನ್ನು ಲೋಕಾರ್ಪಣೆ ಮಾಡುವುದೇ ನೀತಿ ಎನ್ನುವುದಾರೆ, ಸರ್ವಿಸ್ ರಸ್ತೆಗಳನ್ನು ರೂಪಿಸುವವರೆಗೂ ಸ್ಥಳೀಯರ ಬೈಕು, ಆಟೋ ಹಾಗೂ ಟ್ರಾಕ್ಟರ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಉಳಿದ ವಾಹನಗಳ ವೇಗಕ್ಕೆ ಮಿತಿ ಹೇರಬೇಕು. ಈ ಎರಡರಲ್ಲೂ ಒಂದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟವರು ಆಯ್ಕೆ ಮಾಡಬೇಕು. ಸ್ಥಳೀಯರ ಹಿತಾಸಕ್ತಿಯನ್ನು ಕಡೆಗಣಿಸಿ, ಎಕ್ಸ್‌ಪ್ರೆಸ್‌ವೇಯನ್ನು ಲೋಕಾರ್ಪಣೆ ಮಾಡಿದರೆ, ಅದು ಸಂಘರ್ಷಕ್ಕೆ ಮುನ್ನುಡಿ ಬರೆಯಬಹುದು. ಹಾಗಾಗಿ, ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಉತ್ತಮ.
ಇದನ್ನೂ | ವಿಸ್ತಾರ ಸಂಪಾದಕೀಯ | ಕನ್ನಡ ನಾಡಿನ ನುಡಿ ತೇರ ಎಳೆಯೋಣ ಬನ್ನಿ